ಗೋಹತ್ಯೆ ನಿಷೇಧ ಮಸೂದೆ ಮಂಡನೆ: ಕಾಂಗ್ರೆಸ್, ಜೆಡಿಎಸ್ ಪ್ರತಿಭಟನೆ

ಬೆಂಗಳೂರು: ವಿಧಾನಸಭೆಯಲ್ಲಿ ವಿವಾದಿತ ಗೋಹತ್ಯೆ ನಿಷೇಧ ಮಸೂದೆಯನ್ನು ಸರ್ಕಾರ ಮಂಡಿಸಿದ್ದು, ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರು ಮಸೂದೆ ಮಂಡಿಸಿದರು.

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020 ಮಂಡಿಸಲು ಮುಂದಾಗುತ್ತಿದ್ದ ಹಾಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಸುಗ್ರೀವಾಜ್ಞೆ ಹೊರಡಿಸಿದ ವಿಧೇಯಕಗಳನ್ನು ಮಾತ್ರ ಮಂಡಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಈಗ ಏಕಾಏಕಿ ಗೋಹತ್ಯೆ ನಿಷೇಧ ವಿಧೇಯಕ ತಂದಿದ್ದೀರಿ ಎಂದು ವಿರೋಧಿಸಿದರು.‌ ಕಾಂಗ್ರೆಸ್ ಸದಸ್ಯರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸದನದ ಬಾವಿಗಿಳಿದು ಪ್ರತಿಭಟಿಸಿದರು. ಕಾಂಗ್ರೆಸ್ ಸದಸ್ಯರಿಗೆ ಜೆಡಿಎಸ್ ಸದಸ್ಯರೂ ಸಾಥ್ ನೀಡಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರ ಪ್ರತಿಭಟನೆ ನಡುವೆಯೂ ಮಸೂದೆ ಮಂಡನೆ ಮಾಡಲಾಯಿತು. ಈ ವೇಳೆ ಬಿಜೆಪಿ, ಕಾಂಗ್ರೆಸ್ ಸದಸ್ಯರ ಮಧ್ಯೆ ವಾಕ್ಸಮರ ನಡೆಯಿತು. ಕಾಂಗ್ರೆಸ್ ಶಾಸಕರು ಮಸೂದೆ ವಿರುದ್ಧ ಘೋಷಣೆ ಕೂಗಿದರೆ, ಬಿಜೆಪಿ ಶಾಸಕರೂ ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿದರು. ಕಲಾಪ ಸಲಹಾ ಸಮಿತಿ ಸಭೆಗೆ(ಬಿಎಸಿ ) ಯಾವುದೇ ಅರ್ಥ ಇಲ್ಲ, ಬಿಎಸಿ ಸಭೆಗೆ ಇನ್ನು ಮುಂದೆ ಬರುವುದಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಸ್ಪೀಕರ್ ಕಾಗೇರಿ ಅವರು ಪ್ರತಿಕ್ರಿಯಿಸಿ, ಮಹತ್ವದ ವಿಧೇಯಕಗಳನ್ನು ಮಂಡಿಸಲು ಅವಕಾಶ ನೀಡುವುದಾಗಿ ಬಿಎಸಿಯಲ್ಲಿ ಹೇಳಿದ್ದೆ. ಅದರಂತೆ ಗೋಹತ್ಯೆ ನಿಷೇಧ ಮಸೂದೆ ಮಂಡಿಸಲು ಅವಕಾಶ ನೀಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

error: Content is protected !!