ಮುಂಡಾಜೆ: ಚಾರ್ಮಾಡಿ ಘಾಟಿಯ ಮೂಡಿಗೆರೆ ವ್ಯಾಪ್ತಿಯ ಜೇನುಕಲ್ಲು ಪರಿಸರದಲ್ಲಿ ಭಾನುವಾರ ರಾತ್ರಿ 9ಗಂಟೆ ಸುಮಾರಿಗೆ ರಸ್ತೆಯಲ್ಲಿ ಒಂಟಿ ಸಲಗ ಕಂಡು ಬಂದಿದೆ.
ಉಜಿರೆ ಕಡೆಯಿಂದ ಕೊಟ್ಟಿಗೆಹಾರ ಕಡೆ ಪ್ರಯಾಣಿಸುತ್ತಿದ್ದ ಪಿಕ್ ಅಪ್ ವಾಹನ ಸಾಗುತ್ತಿದ್ದ ಸಂದರ್ಭ ಅಡ್ಡ ಬಂದಿದ್ದು, ಒಂಟಿಸಲಗ ಕಂಡು ವಾಹನದಲ್ಲಿದ್ದ ಸತೀಶ್, ಅಶ್ವಿನ್ ಮತ್ತು ವಿನಯ್ ವಾಹನ ನಿಲ್ಲಿಸಿ ಓಡಿದ ಕಾರಣದಿಂದ ಅಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ವಾಹನಕ್ಕೆ ಹಾನಿಯಾಗಿದೆ ಎಂದು ಆರೋಪಿಸಲಾಗಿದೆ.
ಘಟನೆಯ ಬಗ್ಗೆ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಪ್ರತಿಕ್ರಿಯಿಸಿ, ಬೆಳ್ತಂಗಡಿ ಮತ್ತು ಮೂಡಿಗೆರೆ ವ್ಯಾಪ್ತಿಯಲ್ಲಿ ಬರುವ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ರಾತ್ರಿ ಸಮಯ ಆನೆ ಸಹಿತ ಇತರ ಕಾಡು ಪ್ರಾಣಿಗಳ ಸಂಚಾರ ಹೆಚ್ಚಿರುತ್ತದೆ. ವಾಹನ ಸವಾರರು ವೇಗದ ಮಿತಿ ಹಾಗೂ ಮುನ್ನೆಚ್ಚರಿಕೆಯೊಂದಿಗೆ ಸಂಚರಿಸಬೇಕು ಎಂದು ತಿಳಿಸಿದ್ದಾರೆ.