ಮನೆಯಿಂದಲೇ ಲಕ್ಷದೀಪೋತ್ಸವ ವೀಕ್ಷಿಸಿ: ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಂದ ಸಲಹೆ: ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಈ ವರ್ಷ ಬ್ರೇಕ್: ಆನ್ ಲೈನ್ ಮೂಲಕ ಉತ್ಸವ ವೀಕ್ಷಣೆಗೆ ವ್ಯವಸ್ಥೆ: ಸರಕಾರದ ಮಾರ್ಗಸೂಚಿ ಪಾಲನೆ, ಪೂರ್ವ ತಯಾರಿ

 

ಧರ್ಮಸ್ಥಳ: ಚತುರ್ವಿಧ ದಾನ ಶ್ರೇಷ್ಠ ಪವಿತ್ರ ಕ್ಷೇತ್ರವೆಂದೇ ಜನಮಾನಸದಲ್ಲಿ ಖ್ಯಾತವಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಮಂಗಳಪರ್ವದಲ್ಲಿ, ಲಕ್ಷದೀಪೋತ್ಸವ ಡಿ.10 ರಿಂದ ಡಿ.14ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳ 88ನೇ ಅಧಿವೇಶನ ಕೋವಿಡ್ ಹಿನ್ನೆಲೆ ಮಾರ್ಗಸೂಚಿಯಂತೆ ಸರಳವಾಗಿ ನೆರವೇರಲಿದೆ ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ‌ಪ್ರಜಾಪ್ರಕಾಶ ತಂಡಕ್ಕೆ ತಿಳಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಬೀಡಿನಲ್ಲಿ ಮಾತನಾಡಿ, “ನಮ್ಮ ಧರ್ಮಸ್ಥಳ ಕ್ಷೇತ್ರದಲ್ಲಿ ವಾರ್ಷಿಕವಾಗಿ ನಡೆಯುವ ಲಕ್ಷದೀಪೋತ್ಸವ ಸೇವೆಯೆಂದರೆ ಬಹು ನಿರೀಕ್ಷಿತವಾಗಿರುವ ಉತ್ಸವ. ನಮ್ಮ ಕ್ಷೇತ್ರದ ಭಕ್ತರು ಬಹಳ ನಿರೀಕ್ಷೆ ಮಾಡುವ ಎರಡು ಕಾರ್ಯಕ್ರಮಗಳಲ್ಲಿ ಒಂದು ಲಕ್ಷದೀಪೋತ್ಸವ, ಇನ್ನೊಂದು ಶಿವರಾತ್ರಿ. ಹಾಗಾಗಿ ಡಿ.10ರಿಂದ ಕಾರ್ತಿಕ ಮಾಸದ ಕೊನೆಯ ಐದು ದಿನಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. ಅದರಲ್ಲಿ ವಿಶೇಷವಾಗಿ ಶ್ರೀ ಮಂಜುನಾಥ ಸ್ವಾಮಿಯ ವಿಹಾರ ಎಂದು ನಾವು ಹೇಳುತ್ತೇವೆ. ದೇವರು ದೇವಸ್ಥಾನದ ಹೊರಗೆ ಬಂದು ರಾಜಬೀದಿಯಲ್ಲಿ ಭಕ್ತರಿಗೆ ದರ್ಶನ ಕೊಡುತ್ತಾ, ಹೊಸಕಟ್ಟೆ, ಲಲಿತ್ಯೋದ್ಯಾನ, ಕೆರೆಕಟ್ಟೆ, ಕಂಚಿಮಾರುಕಟ್ಟೆ, ಗೌರಿಮಾರುಕಟ್ಟೆ ವಿಹಾರ ನಡೆಯಲಿದೆ. ಜನರು ಸ್ವಾಮಿಯ ದರ್ಶನಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ. ರಾಜಬೀದಿಯಲ್ಲಿ ದೇವರ ಉತ್ಸವಗಳ ಮೆರವಣಿಗೆ ನಡೆಯುತ್ತದೆ ಮತ್ತು ರಥೋತ್ಸವ ನಡೆಯುತ್ತದೆ. ಹಾಗಾಗಿ ಬಹಳ ವಿಶೇಷವಾಗಿ ಜನ ಲಕ್ಷದೀಪೋತ್ಸವ ನಿರೀಕ್ಷೆ ಮಾಡುತ್ತಾರೆ. ಪ್ರಸ್ತುತ ಈ ವರ್ಷವಂತೂ ಕೊರೋನಾ ಕಾರಣದಿಂದ ಸರಕಾರದ ಎಲ್ಲಾ ಆದೇಶಗಳನ್ನು ನಾವು ಪಾಲಿಸುತ್ತಿದ್ದೇವೆ. ಮುಖ್ಯವಾಗಿ ಜನ ಸೇರಿಸಬಾರದು ನಿಯಮವಿದೆ. ಆದ್ದರಿಂದ ರಾಜ್ಯಮಟ್ಟದ ವಸ್ತಪ್ರದರ್ಶನ ಈ ಬಾರಿ ಇರುವುದಿಲ್ಲ. ಆದರೆ ಸಾಹಿತ್ಯ ಸಮ್ಮೇಳನ ಮತ್ತು ಸರ್ವಧರ್ಮ ಸಮ್ಮೇಳನ ಸರಳವಾಗಿ ನಡೆಯುತ್ತದಾದರೂ, ಅದನ್ನೂ ಕ್ಷೇತ್ರದ ಸೋಶಿಯಲ್ ಮೀಡಿಯಾ, ಆನ್‌ಲೈನ್ ಮೂಲಕ ಹಾಗೂ ವಾಹಿನಿಗಳ ಮೂಲಕ ನೇರ ಪ್ರಸಾರ ಮಾಡುವುದರಿಂದ, ಆದಷ್ಟು ಭಕ್ತರು ಲಕ್ಷದೀಪೋತ್ಸವಕ್ಕೆ ಆಗಮಿಸುವ ಬದಲು ಆನ್‌ಲೈನ್ ಮೂಲಕವೇ ವೀಕ್ಷಿಸಬಹುದು. ಸ್ಥಳೀಯರಿಗೆ ಉತ್ಸವ ನೋಡಲು ಆಸಕ್ತಿ ಇರುವವರು, ಆಗಮಿಸಿ ದರ್ಶನ ಮಾಡಿ ಪ್ರಸಾದ ಸ್ವೀಕರಿಸಬಹುದು. ನಾವು ಲಕ್ಷ ದೀಪೋತ್ಸವಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇವೆ. ಕೊರೋನಾದ ಎಲ್ಲಾ ಮುಂಜಾಗರೂಕತೆ ಮಾಡಿಕೊಂಡಿದ್ದೇವೆ. ಎಲ್ಲರಿಗೂ ಶ್ರೀ ಮಂಜುನಾಥ ಸ್ವಾಮಿಯ ಕಾರ್ತಿಕ ದೀಪೋತ್ಸವದ ಆಶೀರ್ವಾದಗಳನ್ನು ಕೋರುತ್ತೇನೆ. ಎಲ್ಲರೂ ಮನೆಯಲ್ಲಿ ಕುಳಿತು ಸ್ವಾಮಿ ಉತ್ಸವವನ್ನು ನೋಡಿ ಎಂದು ಈ ಮೂಲಕ ಕೇಳಿಕೊಳ್ಳುತ್ತಾ, ಶ್ರೀ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ” ಎಂದರು.

ಉತ್ಸವ- ಸಾಂಸ್ಕೃತಿಕ ವೈಭವ:
ಸರಳ ದೀಪೋತ್ಸವದೊಂದಿಗೆ ಡಿ.10 ರಂದು ರಾತ್ರಿ 9 ಗಂಟೆಗೆ ಹೊಸಕಟ್ಟೆ ಉತ್ಸವ, ಡಿ.11 ರಂದು ಕೆರೆಕಟ್ಟೆ ಉತ್ಸವ, ಡಿ.12 ರಂದು ಅಮೃತವರ್ಷಿಣಿ ಸಭಾಭವನದಲ್ಲಿ ಸಂಜೆ 7ರಿಂದ 8.30ರವರೆಗೆ ಝೀ ಕನ್ನಡ ಸರಿಗಮಪ ಖ್ಯಾತಿಯ ಸಾದ್ವಿನಿ ಕೊಪ್ಪ ಮತ್ತು ತಂಡದವರಿಂದ ಸುಗಮ ಸಂಗೀತ, 8.30ರಿಂದ 10ಗಂಟೆಯವರೆಗೆ ಬೆಂಗಳೂರು ಶ್ರೀ ಸತ್ಯನಾರಾಯಣ ರಾಜು ಅವರಿಂದ ರಾಮಕಥಾ ನೃತ್ಯರೂಪಕ ಬಿತ್ತಾರಗೊಳ್ಳಲಿದೆ. ರಾತ್ರಿ 9 ಗಂಟೆಗೆ ಲಲಿತೋದ್ಯಾನ ಉತ್ಸವ ನಡೆಯಲಿದೆ. ಡಿ.13 ರಂದು ರಾತ್ರಿ 9 ರಿಂದ ಕಂಚಿಮಾರುಕಟ್ಟೆ ಉತ್ಸವ ನಡೆಯಲಿದೆ. ಡಿ.14 ರಂದು ಗೌರಿಮಾರುಕಟ್ಟೆ ಉತ್ಸವ ನೆರವೇರಲಿದೆ.

ಸರ್ವಧರ್ಮ ಸಮ್ಮೇಳನ:
ಡಿ.13 ರಂದು ಸಂಜೆ 5.30ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಸರ್ವಧರ್ಮ ಸಮ್ಮೇಳನವನ್ನು ರಾಜ್ಯ ವಸತಿ ಸಚಿವ ವಿ. ಸೋಮಣ್ಣ ಉದ್ಘಾಟಿಸಲಿದ್ದಾರೆ. ಶ್ರೀಕ್ಷೇತ್ರ ಕನಕಗಿರಿ ಜೈನಮಠದ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಸೃಷ್ಟಿ ಮಣಿಪಾಲ್ ಇನ್ಸಿಟ್ಯೂಟ್ (ಎಸ್.ಎಂ.ಐ) ಬೆಂಗಳೂರು ಇದರ ಭೋದಕ ಮತ್ತು ಖ್ಯಾತ ಕಥೆಗಾರ ಕೇಶವ ಮಳಗಿ, ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಹೌಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಫಾ. ಚೇತನ್ ಲೊಬೋ ಉಪನ್ಯಾಸ ನೀಡಲಿದ್ದಾರೆ. ರಾತ್ರಿ 8ರಿಂದ 10ಗಂಟೆಯವರೆಗೆ ಸಂಗೀತ ಕಲಾರತ್ನ ಡಾ. ಆರ್. ಮಂಜುನಾಥ್ ಮತ್ತು ತಂಡದವರಿಂದ ಸ್ಯಾಕ್ಸೋಫೋನ್ ವಾದನ ನಡೆಯಲಿದೆ.

ಸಾಹಿತ್ಯ ಸಮ್ಮೇಳನ:
ಡಿ.14 ರಂದು ಸಂಜೆ 5.30ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನವನ್ನು ಬೆಂಗಳೂರಿನ ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ವಿಧ್ವಾಂಸಕ ವೇದಭೂಷಣ ಡಾ. ಎಸ್. ರಂಗನಾಥ್ ಉದ್ಘಾಟಿಸಲಿದ್ದು, ಬೆಂಗಳೂರು ಹಿರಿಯ ಸಾಹಿತಿ ಹಾಗೂ ಖ್ಯಾತ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರು ಪ್ರಾಧ್ಯಾಪಕ, ಸಂಸ್ಕೃತ ಚಿಂತಕ ಡಾ. ಜ್ಯೋತಿ ಶಂಕರ್, ಮೂಡುಬಿದಿರೆ ವಿಶ್ರಾಂತ ಉಪನ್ಯಾಸಕ, ಇತಿಹಾಸ ಸಂಶೋಧಕ ಡಾ. ಪುಂಡಿಕಾಯ್ ಗಣಪಯ್ಯ ಭಟ್ ಉಪನ್ಯಾಸ ನೀಡಲಿದ್ದಾರೆ.

ರಾತ್ರಿ 8ರಿಂದ 9.30ರವರೆಗೆ ನೃತ್ಯ ನಿಕೇತನ ಕೊಡವೂರು ಕಲಾವಿದರ ಪ್ರಸ್ತುತಿಯಲ್ಲಿ ಡಾ. ಶ್ರೀಪಾದ್ ಭಟ್ ನಿದೇರ್ಶನದಲ್ಲಿ ವಿದ್ವಾನ್ ಸುಧೀರ್ ಕೊಡವೂರು, ವಿದುಷಿ ಮಾನಸಿ ಸುಧೀರ್, ವಿದುಷಿ ಅನಘಶ್ರೀ ನೃತ್ಯ ನಿರ್ದೇಶನದಲ್ಲಿ ನಾರಸಿಂಹ ನೃತ್ಯರೂಪಕ (ಒಳಿತಿನ ವಿಜಯದ ಕಥನ) ನಡೆಯಲಿದೆ.

ಸಮವಸರಣ ಪೂಜೆ:
ಡಿ.15ರಂದು ಸಂಜೆ 6.30ರಿಂದ ಮಹೋತ್ಸವ ಸಭಾಭವನದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜಾ ಕಾರ್ಯಕ್ರಮ ಭಕ್ತಿಪೂರ್ವಕವಾಗಿ ನಡೆಯಲಿದೆ. ಸರಕಾರದ ನಿಯಮದಂತೆ ಅಗತ್ಯ ಕ್ರಮಗಳೊಂದಿಗೆ ದೀಪೋತ್ಸವ ಸರಳವಾಗಿ ಆಚರಣೆಗೊಳ್ಳಲಿದೆ. ಈ ಪ್ರಯುಕ್ತ ಶ್ರೀಕ್ಷೇತ್ರದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ‘ಶ್ರೀ ಕ್ಷೇತ್ರ ಧರ್ಮಸ್ಥಳ’ ಎಂಬ ಯೂಟ್ಯೂಬ್ ಮತ್ತು ಫೇಸ್‌ಬುಕ್‌ಗಳಲ್ಲಿ ನೇರ ವೀಕ್ಷಣೆಗೆ ಕ್ಷೇತ್ರದಿಂದ ಅವಕಾಶ ಮಾಡಲಾಗಿದೆ.

error: Content is protected !!