ಮುಂಡಾಜೆ: ಪರಶುರಾಮ ದೇವಸ್ಥಾನದಲ್ಲಿ ದಾನಿಗಳ ನಾಮಫಲಕ ಅನಾವರಣ: ಧಾರ್ಮಿಕ ಸಭೆ

ಮುಂಡಾಜೆ: ಹಿಂದಿನಿಂದ ಬಂದಿರುವ ಪದ್ಧತಿಗಳು ನಿರಂತರವಾಗಿ ಮುಂದುವರಿದರೆ ಧಾರ್ಮಿಕತೆಯ ಕೊಂಡಿ ತಪ್ಪುವುದಿಲ್ಲ, ಗ್ರಾಮದೇವರ ಅನುಗ್ರಹವಿದ್ದರೆ ಯಾವುದೇ ಕೆಲಸ ಕಾರ್ಯಗಳು ನಿರಾತಂಕವಾಗಿ ಸಾಗುತ್ತವೆ ಎಂದು ಕರ್ಣಾಟಕ ಬ್ಯಾಂಕ್ ನ ಜನರಲ್ ಮ್ಯಾನೇಜರ್ ನಾಗರಾಜ ರಾವ್ ಹೇಳಿದರು.

ಅವರು ಶನಿವಾರ ಮುಂಡಾಜೆಯ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದಲ್ಲಿ ದಾನಿಗಳ ನಾಮಫಲಕ ಅನಾವರಣಗೊಳಿಸಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮುಂಡಾಜೆಯಲ್ಲಿ ಕರ್ಣಾಟಕ ಬ್ಯಾಂಕಿನ ಶಾಖೆ ತೆರೆಯುವಂತೆ ಗ್ರಾಹಕರಿಂದ ಬೇಡಿಕೆ ಬಂದಿದೆ.ಇಲ್ಲಿನ ಪ್ರದೇಶವನ್ನು ಪರಿಶೀಲಿಸಿ ಆಡಳಿತ ಮಂಡಳಿಯಲ್ಲಿ ಚರ್ಚಿಸಿ, ಮುಂಡಾಜೆಯಲ್ಲಿ ಅಥವಾ ಸಮೀಪದ ಗ್ರಾಮದಲ್ಲಿ ಶಾಖೆ ತೆರೆಯುವ ಕುರಿತು ಯೋಜನೆ ರೂಪಿಸಲಾಗುವುದು ಎಂದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎನ್‌.ಎಸ್.ಗೋಖಲೆ ಅಧ್ಯಕ್ಷತೆ ವಹಿಸಿದ್ದರು. ವೇದಮೂರ್ತಿ ಶಿವರಾಮ ಮಯ್ಯ ಸಜಿಪ, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ವಾಸುದೇವ ಗೋಖಲೆ, ಗೌರವಾಧ್ಯಕ್ಷ ಜಗದೀಶ ಆರ್.ಫಡ್ಕೆ,ನಿಯೋಜಿತ ಆಡಳಿತ ಮೊಕ್ತೇಸರ ವೆಂಕಟೇಶ್ವರ ಭಟ್ ಉಪಸ್ಥಿತರಿದ್ದರು.ಆಡಳಿತ ಮೊಕ್ತೇಸರ ವೆಂಕಟ್ರಾಯ ಅಡೂರು ಸ್ವಾಗತಿಸಿದರು. ಸದಸ್ಯ ನಾರಾಯಣ ಫಡ್ಕೆ ಕಾರ್ಯಕ್ರಮ ನಿರೂಪಿಸಿದರು.

error: Content is protected !!