ಉಳಿಯಿತು 10ಕ್ಕೂ ಹೆಚ್ಚು ಮಂದಿಯ ಜೀವ: ಯುವಕರ ಬೇಜವಾಬ್ದಾರಿಗೆ ಬಲಿಯಾಗುತ್ತಿತ್ತುಅಮಾಯಕ ಜೀವಗಳು: ವಿಡಿಯೋ ಲಭಿಸಿದರೂ ಕಣ್ಮುಚ್ಚಿ ಕುಳಿತ ಪೊಲೀಸರು..!

 

 

ಬೆಳ್ತಂಗಡಿ: ಝೀರೋ ಟ್ರಾಫಿಕ್ ಹೆಸರಿನಲ್ಲಿ, ಬೆಂಗಾವಲು ವಾಹನದ ಸೋಗಿನಲ್ಲಿ, ಬೇಕಾಬಿಟ್ಟಿ ವಾಹನ‌ ಚಲಾಯಿಸಿದ್ದು, ಈ ಸಂದರ್ಭ ದೊಡ್ಡ ದುರ್ಘಟನೆಯೊಂದು ತಪ್ಪಿ 10ಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರಾದಂತೆ ಕಂಡು ಬರುತ್ತಿದೆ.
ರೋಗಿಯನ್ನು ಸಾಗಿಸಲು ಸಹಾಯ ಮಾಡುವ ಬದಲು ಆಟಾಟೋಪ ತೋರಿದ ಬಗ್ಗೆ ಸಾರ್ವಜನಿಕರು ತೀವ್ರವಾಗಿ ಖಂಡಿಸಿದ್ದಾರೆ.

ಮುಖ್ಯವಾಗಿ ಹಲವು ಆಂಬ್ಯುಲೆನ್ಸ್ ಚಾಲಕರು, ಜೊತೆಗೆ ರೋಗಿಯನ್ನು ಕರೆದೊಯ್ದ ಆಂಬ್ಯುಲೆನ್ಸ್ ಚಾಲಕ ಹನೀಫ್ ಅವರೂ ಅಷ್ಟೊಂದು ಬೆಂಗಾವಲು ವಾಹನಗಳು ಇದ್ದ ಪರಿಣಾಮ, ಆಂಬ್ಯುಲೆನ್ಸ್ ಸರಿಯಾಗಿ ಓಡಿಸಲು ಸಾಧ್ಯವಾಗಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ವಾಹನಗಳು ಬೇಕಾಬಿಟ್ಟಿ ಚಲಾಯಿಸಿದರೂ, ಅಪಾಯಕಾರಿ ರೀತಿ ದೇಹವನ್ನು ಹೊರಚಾಚಿದರೂ, ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿ, ಅಗತ್ಯ ವಿಡಿಯೋಗಳು ಲಭಿಸಿದರೂ ಪೊಲೀಸರು ಇಲ್ಲಿವರೆಗೆ ಯಾರ ವಿರುದ್ಧವೂ ಕ್ರಮ ಕೈಗೊಳ್ಳದಿರುವುದು ಅಚ್ಚರಿಗೆ ಕಾರಣವಾಗಿದೆ.

ಉಳಿಯಿತು 4 ಅಮಾಯಕರ ಜೀವ!:
ಹಾಸನ‌ ಬಳಿಯ ವಿಡಿಯೋ ಒಂದು ಲಭಿಸಿದ್ದು, ಬೆಂಗಾವಲು ವಾಹನದ ಸೋಗಿನಲ್ಲಿ ಸಾಗುತ್ತಿದ್ದ ಸ್ಕಾರ್ಪಿಯೋ ವಾಹನ ತಿರುವಿನಲ್ಲಿ ನಿಯಂತ್ರಣ ತಪ್ಪಿ ಬಾಲಕನೊಬ್ಬನ ಸೈಕಲ್ ಗೆ ಡಿಕ್ಕಿ ಹೊಡೆದಿದೆ. ಸೈಕಲ್ ಸಂಪೂರ್ಣ ಜಖಂಗೊಂಡಿದೆ. ಆದರೂ ವಾಹನ ಕಡೇ ಕ್ಷಣದಲ್ಲಿ ಮತ್ತೆ ರಸ್ತೆಗೆ ಮರಳಿದ ಪರಿಣಾಮ ದೊಡ್ಡ ಅನಾಹುತ ತಪ್ಪಿದೆ. ಅಂಬ್ಯುಲೆನ್ಸ್ ನೋಡಲು ರಸ್ತೆ ಬದಿ‌‌ ಜನರು ಕುತೂಹಲದಿಂದ ನಿಂತಿದ್ದು, ಅಪಾಯಕಾರಿಯಾಗಿ ತಿರುವು ಪಡೆದುಕೊಂಡ ಬೆಂಗಾವಲು ವಾಹನ‌ ರಸ್ತೆ ಬದಿಗೆ ಸರಿದು ಸೈಕಲ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಶಬ್ದವೂ ಸರಿಯಾಗಿ ರೆಕಾರ್ಡ್ ಆಗಿದೆ. ಈ ಸಂದರ್ಭ ರಸ್ತೆ ಬದಿ ನಿಂತಿದ್ದ ಬಾಲಕ, ಮಹಿಳೆ, ಬಿಳಿ ಅಂಗಿಯ ಪುರುಷ, ದ್ವಿಚಕ್ರ ವಾಹನದೊಂದಿಗೆ ನಿಂತಿದ್ದ ಯುವಕ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂದು ವೇಳೆ ವಾಹನ ಸಂಪೂರ್ಣ ನಿಯಂತ್ರಣ ತಪ್ಪುತ್ತಿದ್ದಲ್ಲಿ ಈ 4 ಮಂದಿ ಅಮಾಯಕರ ಪ್ರಾಣಹಾನಿಯಾದರೂ‌ ಅಚ್ಚರಿ ಪಡಬೇಕಾಗಿರಲಿಲ್ಲ. ಸ್ಕ್ರಾರ್ಪಿಯೋ ವಾಹನ ನೇರವಾಗಿ ಈ 4 ಮಂದಿ ಇದ್ದ ಜಾಗಕ್ಕೆ ನುಗ್ಗುತ್ತಿತ್ತು.

ಉಳಿಯಿತು 10ಕ್ಕೂ ಹೆಚ್ಚು ಜೀವಗಳು:
ಒಂದು ವೇಳೆ ವಾಹನದ ನಿಯಂತ್ರಣ ಸಂಪೂರ್ಣ ತಪ್ಪಿದ್ದರೆ, 4 ಮಂದಿ ಅಮಾಯಕ ಸಾರ್ವಜನಿಕರು ಹಾಗೂ ವಾಹನದೊಳಗಿದ್ದ 6ರಿಂದ 8 ಮಂದಿ ಸೇರಿ ಒಟ್ಟು 10ಕ್ಕೂ ಹೆಚ್ಚು ಮಂದಿಯ ಜೀವ ಹಾನಿಯಾಗುವ ಸಾಧ್ಯತೆಯಿತ್ತು. ಏಕೆಂದರೆ ಇಂಗ್ಲಿಷ್ ಅಕ್ಷರ ಎಲ್ ರೀತಿಯ ತಿರುವಿನಲ್ಲೂ ವಾಹನ ವೇಗವಾಗಿ ಸಾಗುತ್ತಿತ್ತು. ಅಪಘಾತ ಸಂಭವಿಸಿದ್ದರೆ ಹೆಚ್ಚಿನ ಜೀವ ಹಾನಿಯಾಗುತ್ತಿತ್ತು ಎನ್ನುತ್ತಾರೆ ಸಾರ್ವಜನಿಕರು.

ಅಂಬ್ಯುಲೆನ್ಸ್ ಚಾಲಕರ ವಿರೋಧ:
ಈ ರೀತಿ ಬೇಕಾಬಿಟ್ಟಿ ಪ್ರಚಾರಕ್ಕಾಗಿ ಸುಮಾರು 16 ವಾಹನಗಳು ಆಂಬ್ಯಲೆನ್ಸ್ ಜೊತೆ ತೆರಳಿರುವುದು ಹಾಗೂ ಬೇಕಾಬಿಟ್ಟಿ ವಾಹನ ಚಲಾಯಿಸಿರುವುದಕ್ಕೆ ಹಲವಾರು ಆಂಬ್ಯುಲೆನ್ಸ್ ಚಾಲಕರು ಕಿಡಿ ಕಾರಿದ್ದಾರೆ. ಜೀವ ರಕ್ಷಣೆಗೆ ಬೆಂಗಾವಲು ತೆರಳಿದಂತೆ ಕಾಣಲಿಲ್ಲ, ಭೀತಿ ‌ಮೂಡಿಸುವ ರೀತಿ ಅಪಾಯಕಾರಿಯಾಗಿ ವಾಹನ‌ ಚಲಾಯಿಸಿದ್ದು ಸರಿಯಲ್ಲ ಎಂದು ಹಲವರು ಆರೋಪಿಸಿದ್ದಾರೆ.‌

ಹನೀಫ್ ಅವರಿಂದಲೂ ಆಕ್ಷೇಪ:
ರೋಗಿಯನ್ನು ಕರೆದೊಯ್ದ ಹನೀಫ್ ಬಳೆಂಜ ಅವರೂ ಹಲವಾರು ವಾಹನಗಳು ಬೆಂಗಾವಲಾಗಿ ಸಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದು ಈ ಸಂದರ್ಭ, ಆಂಬ್ಯುಲೆನ್ಸ್ ಚಾಲಕರಿಗೆ ವಾಹನದ ವೇಗದ ಅರಿವಿರುತ್ತದೆ. ಒಂದೋ, ಎರಡೋ ಬೆಂಗಾವಲಿಗೆ ಆಂಬ್ಯುಲೆನ್ಸ್ ಮಾತ್ರ ಮುಂದೆ ಇದ್ದರೆ ಪರವಾಗಿಲ್ಲ, ಸಹಾಯವಾಗುತ್ತದೆ. ಆದರೆ ಹಲವಾರು ಖಾಸಗಿ ವಾಹನಗಳು ತಾನು ಚಾಲನೆ ಮಾಡುತ್ತಿದ್ದ ಆಂಬ್ಯುಲೆನ್ಸ್ ಮುಂಭಾಗದಲ್ಲಿ ಸಾಗುತ್ತಿದ್ದ ಪರಿಣಾಮ, ವೇಗವಾಗಿ ಸಾಗಲು ಸಮಸ್ಯೆ ಉಂಟಾಯಿತು. ವೇಗ ನಿಯಂತ್ರಣಕ್ಕೂ ಹೆಚ್ಚುವರಿ ಬೆಂಗಾವಲು ವಾಹನಗಳು ಅಡ್ಡಿಯಾದವು ಎಂದಿದ್ದಾರೆ. ಆದ್ದರಿಂದ ಮುಂದೆ ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದಿದ್ದಾರೆ.

ಪೊಲೀಸರ ಮೌನ:
ಜನಸಾಮಾನ್ಯರಿಗೆ ಸಣ್ಣ ಕಾನೂನು ಪಾಲನೆ ಮಾಡದಿದ್ದರೂ ದಂಡ ಕಟ್ಟಿಸಿಕೊಳ್ಳುವ ಪೊಲೀಸರು ಮೌನವಾಗಿದ್ದಾರೆ. ಪೊಲೀಸರ ಕಣ್ಣೆದುರೇ ಘಟನೆ ನಡೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ. ಬೆಂಗಾವಲು ವಾಹನ ಹೆಸರಿನಲ್ಲಿ ಬೇಜವಾಬ್ದಾರಿ ಡ್ರೈವಿಂಗ್, ವಾಹನದ ಹೊರಭಾಗದಲ್ಲಿ ಜೋತಾಡುತ್ತಿರುವ ಫೋಟೊ, ವಿಡಿಯೋ ಲಭಿಸಿದರೂ ಪೊಲೀಸರು ಸುಮ್ಮನಿದ್ದಾರೆ. ಏಕೆ‌ ಇಂತಹಾ ತಾರತಮ್ಯ, ಜನಸಾಮಾನ್ಯರಿಗೊಂದು‌ ನಿಯಮ ಹೀಗೆ ದುಂಡಾ ವರ್ತನೆ ತೋರುವವರಿಗೆ ಇನ್ನೊಂದು ನಿಯಮ ಇದೆಯೇ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ರೋಗಿಯನ್ನು ಕರೆದೊಯ್ದ ಆಂಬ್ಯುಲೆನ್ಸ್ ನ ಇನ್ಸೂರೆನ್ಸ್ ಅವಧಿಯೂ‌ ಮುಗಿದೆ. ಅದನ್ನು ನವೀಕರಣ ಮಾಡಿಕೊಳ್ಳದೆಯೇ ವಾಹನ ಬಳಸಲಾಗಿದೆ ಎಂಬ ಆರೋಪಗಳ ಬರಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಬಗ್ಗೆಯೂ ಸೂಕ್ತ ಕ್ರಮ‌ಕೈಗೊಂಡು ಎಚ್ಚರ ವಹಿಸಬೇಕಿದೆ.‌ ಎಲ್ಲಾ ವಾಹನಗಳಲ್ಲಿಯೂ ಸೂಕ್ತ ದಾಖಲೆಗಳನ್ನು ನಿರ್ವಹಿಸಿದರೆ ಪ್ರತಿಯೊಬ್ಬರಿಗೂ ಅನುಕೂಲವಾಗಲಿದೆ‌.

ಮುಖ್ಯವಾಗಿ ಮಾನವೀಯತೆ ‌ಹೆಸರಿನಲ್ಲಿ ಬೇಕಾಬಿಟ್ಟಿ ವರ್ತಿಸಿ, ಸಾರ್ವಜನಿಕವಾಗಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಆಂಬ್ಯುಲೆನ್ಸ್ ಸಾಗುವ ಸಂದರ್ಭ ಸೂಕ್ತ ಮಾರ್ಗಸೂಚಿಗಳ‌ ಅರಿವನ್ನು ಸಾರ್ವಜನಿಕರಿಗೆ ಮೂಡಿಸಿದಲ್ಲಿ‌‌ ಇಂತಹಾ ಗೊಂದಲಗಳು ದೂರವಾಗಬಹುದೇನೋ.

error: Content is protected !!