ಕಸ್ತೂರಿ ರಂಗನ್ ವರದಿ ಜಾರಿಯಾದಲ್ಲಿ ಗ್ರಾಮಗಳು ಮೂಲಭೂತ ಸೌಕರ್ಯಗಳಿಂದ ವಂಚಿತ: ಕಿಶೋರ್ ಶಿರಾಡಿ ಹೇಳಿಕೆ: ಮಲೆನಾಡು ಹಿತರಕ್ಷಣಾ ವೇದಿಕೆಯಿಂದ ಸಾಂಕೇತಿಕ ಪ್ರತಿಭಟನೆ

ಬೆಳ್ತಂಗಡಿ:ರೈತರ ಕೃಷಿ ಭೂಮಿಯನ್ನು ಕಸಿದುಕೊಳ್ಳುವಂತಹ ಯೋಜನೆಯಾದ ಕಸ್ತೂರಿ ರಂಗನ್ ವರದಿಯನ್ನು ಜಾರಿ ಮಾಡಬಾರದು ಎಂದು ಆಗ್ರಹಿಸಿ ಮಲೆನಾಡು ಹಿತರಕ್ಷಣಾ ವೇದಿಕೆ ವತಿಯಿಂದ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಲೆನಾಡು ಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ, ಬೆಳ್ತಂಗಡಿ ತಾಲೂಕಿನ ಸುಮಾರು 17 ಗ್ರಾಮಗಳನ್ನು ಕಸ್ತೂರಿ ರಂಗನ್ ಯೋಜನೆಗೆ ಸೇರಿಸಿ ಈ ಭಾಗದ ಕೃಷಿಕರ ಹಾಗೂ ಜನಸಾಮಾನ್ಯರ ಭೂಮಿಯನ್ನು ಕಸಿದುಕೊಂಡು ಜನರನ್ನು ಬೀದಿಪಾಲು ಮಾಡುವ ಕೆಲಸವನ್ನು ಸರಕಾರಗಳು ಮಾಡುತ್ತಿವೆ. ಅದ್ದರಿಂದ ಇಂತಹ ಯೋಜನೆಗಳನ್ನು ಸರ್ಕಾರ ಜಾರಿ ಮಾಡಬಾರದು ಈಗಾಗಲೇ ರಕ್ಷಿತಾರಣ್ಯದಲ್ಲಿ ವಾಸವಾಗಿರುವವರನ್ನು ಒಕ್ಕಲೆಬ್ಬಿಸುವಂತಹ ಕೆಲಸಗಳನ್ನು ಸರ್ಕಾರ ಮಾಡುತ್ತಿವೆ. ಕಸ್ತೂರಿ ರಂಗನ್ ವರದಿ ಜಾರಿಯಾದಲ್ಲಿ ಗ್ರಾಮಗಳು ಕುಗ್ರಾಮಗಳಾಗಲಿವೆ. ಮೂಲಭೂತ ಸೌಕರ್ಯಗಳಿಂದ ವಂಚಿತವಾಗಲಿದೆ. ಜನರು ಬೀದಿಗೆ ಬೀಳುವ ಸಂದರ್ಭ ಎದುರಾಗಬಹುದು ಅದ್ದರಿಂದ ಈ ಮೂಲಕ ಸರಕಾರಗಳಿಗೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಬಾರದು. ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಹಾಗೂ ಕೊರೊನದಿಂದಾಗಿ ಇವತ್ತು ಸಾಂಕೇತಿಕವಾಗಿ ಗ್ರಾಮದ ಪ್ರಮುಖರಿಬ್ಬರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿಯನ್ನು ನೀಡುತಿದ್ದೇವೆ. ಮುಂದಿನ ದಿನಗಳಲ್ಲಿ ಗ್ರಾಮ ಗ್ರಾಮಗಳಲ್ಲಿ ಈ ಬಗ್ಗೆ ಪ್ರತಿಭಟನೆ ನಡೆಸಲಾಗುವುದು.‌ ಪುತ್ತೂರು ಉಪವಿಭಾಗಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಗುಂಡ್ಯದಲ್ಲಿ ಬೃಹತ್ ಹಕ್ಕೋತ್ತಾಯ ಸಭೆಯನ್ನು ನಡೆಸಲಾಗುವುದು. ಅದ್ದರಿಂದ ಸರಕಾರ ಈ ಬಗ್ಗೆ ಗಮನ ಹರಿಸಬೇಕು ಎಂದರು.

ಈ ಸಂದರ್ಭದಲ್ಲಿ ನೆಲ್ಯಾಡಿ ಚರ್ಚ್ ಧರ್ಮಗುರು ಫಾ. ಆದರ್ಶ, ವಿ.ಟಿ ಸೆಭಾಸ್ಟಿನ್, ನಿತ್ಯಾನಂದ ಶೆಟ್ಟಿ, ಜನಹಿತ ವೇದಿಕೆ ತಾಲೂಕು ಸಂಚಾಲಕ ಸಂತೋಷ್ ಕುಮಾರ್ ಪುದುವೆಟ್ಟು ಮೊದಲಾದವರು ಉಪಸ್ಥಿತರಿದ್ದರು.

error: Content is protected !!