‘ಅಬ್ಬಕ್ಕ’ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ!?: ತುಳು, ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರೆಯೇ ‘ಬಾಹುಬಲಿ ದೇವಸೇನ’?: ‘ತುಳುನಾಡಿನ ‌ಅಭಯ ರಾಣಿ’ಯಾಗಿ ‘ಸ್ವೀಟಿ ಶೆಟ್ಟಿ’?: ಕುತೂಹಲ ಮೂಡಿಸಿದ ಮುಖ್ಯಪಾತ್ರ

ಬೆಳ್ತಂಗಡಿ: ಮಂಸೂರೆ ನಿರ್ದೇಶನದ ಮುಂದಿನ ಚಿತ್ರ ‘ಅಬ್ಬಕ್ಕ’ ಅರಬ್ಬೀ ಸಮುದ್ರದ ಅಭಯರಾಣಿ ಚಿತ್ರ ಘೋಷಣೆಯಾಗಿದ್ದು, ಚಿತ್ರದ ಅಬ್ಬಕ್ಕ ಪಾತ್ರದಲ್ಲಿ ಅನುಷ್ಕಾ ಶೆಟ್ಟಿಯವರು ನಟಿಸಲಿದ್ದಾರೆಯೇ ಎಂಬ ಕುತೂಹಲ ಮೂಡಿಸಿದೆ. ಆದರೆ ಚಿತ್ರತಂಡ ಸಂಕ್ರಾಂತಿ ದಿನದಂದು ಅಬ್ಬಕ್ಕ ಹಾಗೂ ಚಿತ್ರತಂಡದ ಪರಿಚಯ ಮಾಡುವುದಾಗಿ ತಿಳಿಸಿದ್ದು, ಕುತೂಹಲ ಹೆಚ್ಚಿಸಿದೆ.
ಅನುಷ್ಕಾ ಶೆಟ್ಟಿಯವರು ಈಗಾಗಲೇ ಉತ್ತಮ ಕಥೆ ಸಿಕ್ಕಿದರೆ ಕನ್ನಡ ಸಿನಿಮಾದಲ್ಲಿ ನಟಿಸೋದಾಗಿ ತಿಳಿದಿಸಿದ್ದರು. ಅನುಷ್ಕಾ ಶೆಟ್ಟಿಯವರು ತೆಲುಗು, ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರೂ ಕನ್ನಡವನ್ನು ಚೆನ್ನಾಗಿಯೇ ಮಾತನಾಡುತ್ತಾರೆ.

ಮಾತೃಭಾಷೆ ತುಳುವಿನಲ್ಲೂ ಸರಾಗವಾಗಿ ಮಾತನಾಡುತ್ತಾರೆ. ಪ್ರತೀ ವರ್ಷ ತಮ್ಮ ತಾಯಿಯ ಹುಟ್ಟುಹಬ್ಬಕ್ಕೂ ಸೋಷಿಯಲ್ ಮೀಡಿಯಾದ ಮೂಲಕ ಕನ್ನಡದಲ್ಲೇ ಶುಭಕೋರುತ್ತಾರೆ. ಇನ್ನು ಬಾಹುಬಲಿ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೂ ಪರಿಚಿತರು. ಆದ್ದರಿಂದ ಚಿತ್ರತಂಡ ಕನ್ನಡ, ತುಳು, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಅನುಷ್ಕಾ ಶೆಟ್ಟಿ ಅವರ ಮೂಲಕ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪಲು ಸಿದ್ಧತೆ ಮಾಡಿಕೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಪೋಸ್ಟರ್ ನಲ್ಲಿ ‘ತುಳು’ವಿಗೂ ಆದ್ಯತೆ:
ಅಬ್ಬಕ್ಕ ರಾಣಿಯ ಕಥೆ ಮಂಗಳೂರಿನ ಉಳ್ಳಾಲ, ಮೂಡಬಿದಿರೆ ಮೊದಲಾದ ಪ್ರದೇಶಗಳ ಮೂಲ ಕಥಾ ಹಂದರ ಹೊಂದಿರುವ ಚಿತ್ರ. ಮಂಸೂರೆ ಅವರು ಪರಿಣಾಮಕಾರಿ ಪಾತ್ರಗಳ ಮೂಲಕವೇ ಸಿನಿಮಾಗಳನ್ನು ಹಿಡಿದಿಟ್ಟುಕೊಂಡು, ಸಿನಿಪ್ರೇಮಿಗಳ ಮನಗೆದ್ದಿದ್ದಾರೆ. ಅನುಷ್ಕಾ ಶೆಟ್ಟಿಯವರು ಮೂಲತಃ ಕರಾವಳಿಯವರೇ ಆಗಿರುವುದರಿಂದ ಅವರೇ ಆಯ್ಕೆಯಾಗಿರುವ ಸಾಧ್ಯತೆ ಹೆಚ್ಚಾಗಿದೆ. ಮಂಗಳೂರು ಮೊದಲಾದ ಪ್ರದೇಶಗಳಿಗೆ ಭೇಟಿ ನೀಡಿದಾಗ ತುಳುವಿನಲ್ಲೇ ಮಾಧ್ಯಮದ ಜೊತೆ ಮಾತನಾಡಿ ಮನಗೆದ್ದಿದ್ದರು. ಉತ್ತಮ ಅವಕಾಶ ಸಿಕ್ಕರೆ ತುಳು ಚಿತ್ರದಲ್ಲಿಯೂ ನಟಿಸುವುದಾಗಿ ತಿಳಿಸಿದ್ದರು, ಇದೀಗ ಆ ಸಮಯ ಕೂಡಿ ಬಂತಾ ಎಂಬ ಕುತೂಹಲ ಮೂಡಿದೆ. ಕನ್ನಡ ಸಿನಿಮಾವೊಂದು ಇಂತಹಾ ಬಿಗ್ ಬಜೆಟ್ ನ ಐತಿಹಾಸಿಕ ಚಿತ್ರವನ್ನು ತುಳು ಭಾಷೆಯಲ್ಲೂ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಕನ್ನಡದ ಬಳಿಕ ಬೇರೆ ಭಾಷಿಗರಿಗೆ ಹೋಲಿಸಿದರೆ, ಕೋಸ್ಟಲ್ ವುಡ್ ಪ್ರೇಕ್ಷಕರ ಸಂಖ್ಯೆ ಕಡಿಮೆ, ಜೊತೆಗೆ ಬಹುತೇಕ ತುಳುವರು ಕನ್ನಡ ಅರಿತುಕೊಂಡಿರುತ್ತಾರೆ. ಆದರೂ ಪೋಸ್ಟರ್ ನಲ್ಲಿ ದ್ವಿತೀಯ ಸ್ಥಾನದಲ್ಲಿಯೇ ತುಳು ಭಾಷೆ ನಮೂದಿಸಿರುವುದು ಕಾಣಿಸಿಕೊಂಡಿದೆ. ‘ಸ್ವೀಟಿ ಶೆಟ್ಟಿ’ಯವರ ತುಳು ಭಾಷಾಭಿಮಾನವೇ ಇದಕ್ಕೆಲ್ಲ ಕಾರಣವೇ ಎಂಬ ಕುತೂಹಲವೂ ಮೂಡಿದೆ.


ಕನ್ನಡ ಚಿತ್ರದಲ್ಲಿ ಅವಕಾಶ ಸಿಕ್ಕಿರಲಿಲ್ಲ:
ಅನುಷ್ಕಾ ಶೆಟ್ಟಿಯವರು ಚಿತ್ರರಂಗ ಪ್ರವೇಶಕ್ಕೂ ಮುನ್ನ ಕನ್ನಡ ಸಿನಿಮಾಗಳ ಆಡಿಷನ್‍ಗೆ ತೆರಳಿ, ಆಡಿಷನ್ ನೀಡಿದ್ದರಂತೆ. ಆದರೆ ಯಾವುದೇ ಆಡಿಷನ್‍ನಲ್ಲೂ ಆಯ್ಕೆಯಾಗದ ಕಾರಣ ಕನ್ನಡ ಚಿತ್ರದಲ್ಲಿ ನಟಿಸುವ ಅವಕಾಶ ತಪ್ಪಿತ್ತು. ಆದರೆ ತೆಲುಗು, ತಮಿಳು ಚಿತ್ರಗಳು ಕೈ ಹಿಡಿದಿದ್ದು ಇದೀಗ ದಕ್ಷಿಣ ಭಾರತದ ಹಾಗೂ ಭಾರತದ ಬಹುಬೇಡಿಕೆಯ ನಟಿಯಾಗಿದ್ದಾರೆ. ಕನ್ನಡದ ಖ್ಯಾತ ಸುದ್ದಿ ವಾಹಿನಿಯೊಂದು ಇತ್ತೀಚೆಗೆ ನೀಡಿರುವ ಮಾಹಿತಿಯಂತೆ ಸ್ವೀಟಿ ಶೆಟ್ಟಿಯವರು ಕನ್ನಡ ಸೀರಿಯಲ್ ನಲ್ಲಿ ಬಣ್ಣ ಹಚ್ಚಿದ್ದರಂತೆ. ಬಣ್ಣ ಹೆಸರಿನ ಸೀರಿಯಲ್‍ನಲ್ಲಿ ತನಿಖಾಧಿಕಾರಿಯ ಪಾತ್ರವನ್ನೂ ಪ್ರಥಮವಾಗಿ ನಿಭಾಯಿಸಿದ್ದರಂತೆ ಬಳಿಕ ಕನ್ನಡ ಚಿತ್ರಗಳಿಗೆ ಆಡಿಷನ್ ನೀಡಿದ್ದರು. ಆದರೆ ಆಗ ಅವಕಾಶ ಲಭಿಸಿರಲಿಲ್ಲ. ಇದೀಗ ಅಧಿಕೃತವಾಗಿ ಕನ್ನಡಿಗರ ನಿರ್ದೇಶನದಲ್ಲಿ ಪಾತ್ರ ನಿರ್ವಹಿಸಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ. ಮಂಸೂರೆ ಅವರೂ ‘ಆಕ್ಟ್-1978’ ಚಿತ್ರವನ್ನು ಕೊರೋನಾ ಬಳಿಕ ಥಿಯೇಟರ್‌ ಗಳಿಗೆ ಬಿಡುಗಡೆ ಮಾಡಿ, ಪ್ರೇಕ್ಷರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.


ಐತಿಹಾಸಿಕ ಪಾತ್ರಗಳಲ್ಲಿ ಅನುಷ್ಕಾ ಮಿಂಚು:
ಅನುಷ್ಕಾ ಶೆಟ್ಟಿಯವರು ಈಗಾಗಲೇ ಐತಿಹಾಸಿಕ ಪಾತ್ರಗಳಲ್ಲಿ ಮಿಂಚುಹರಿಸಿದ್ದು, ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದ ಸೀರೀಸ್‍ಗಳಲ್ಲಿ ದೇವಸೇನ ಪಾತ್ರದಲ್ಲಿ ಮಿಂಚಿದ್ದರು. ಅದರಲ್ಲೂ ಬಾಹುಬಲಿಯ ಕತ್ತಿವರಸೆಯ ದೃಶ್ಯ ಅನುಷ್ಕಾ ಶೆಟ್ಟಿಯವರಿಗೆ ಹೊಸ ಇಮೇಜ್ ತಂದುಕೊಟ್ಟಿತು. ಬಳಿಕ ಬಾಹುಬಲಿ ಬಿಗಿನಿಂಗ್ ರಿಲೀಸ್ ಬಳಿಕ, ನಾಲ್ಕು ತಿಂಗಳ ಅವಧಿಯಲ್ಲಿ ‘ರಾಣಿ ರುದ್ರಮ್ಮ ದೇವಿ’ ರಿಲೀಸ್ ಆಗಿದ್ದು, 12ನೇ ಶತಮಾನದ ಕಾಕತೀಯ ಸಾಮ್ರಾಜ್ಯದ ರಾಣಿ ರುದ್ರಮ್ಮ ದೇವಿಯ ಕಥೆಯನ್ನು ಹೊಂದಿತ್ತು. ಈ ಚಿತ್ರಕ್ಕಾಗಿ ಅನುಷ್ಕಾ ಅವರು ಮೂರು ಫಿಲಂ ಫೇರ್, ನಂದಿ ಹಾಗೂ ಮೂರು ಇತರೆ ಪ್ರಶಸ್ತಿಗಳು ಲಭಿಸಿದವು. ಈ ಚಿತ್ರಗಳ ಬಳಿಕ ಸೈಝ್ ಝೀರೋ, ಊಪಿರಿ, ಓಂ ನಮೋ ವೆಂಕಟೇಶಾಯ ಭಾಗಮತಿ ಚಿತ್ರಗಳಲ್ಲಿ ನಟಿಸಿದರೂ ಐತಿಹಾಸಿಕ ಪಾತ್ರಗಳು ಇವರ ಬೆನ್ನು ಬಿಡಲಿಲ್ಲ. 2019ರಲ್ಲಿ ತೆರೆಕಂಡ ‘ಸೈರಾ’ ನರಸಿಂಹ ರೆಡ್ಡಿ ಚಿತ್ರದಲ್ಲೂ ರಾಣಿ ಲಕ್ಷ್ಮೀ ಬಾಯಿಯ ಪಾತ್ರವನ್ನು ನಿರ್ವಹಿಸಿದರು. ಆದ್ದರಿಂದ ಐತಿಹಾಸಿಕ ಪಾತ್ರಗಳಿಗೆ ಹೆಚ್ಚು ಹೊಂದುವುದರಿಂದ ಅಂತಹುದೇ ಪಾತ್ರಗಳು ಇವರನ್ನು ಅರಸಿಕೊಂಡು ಬರುತ್ತಿವೆ. ಮೊದಲೇ ತುಳುನಾಡಿನ ಮೂಲದ ಕಥಾ ಹಂದರ ಹೊಂದಿರುವ ಸಿನಿಮಾ ಆದ್ದರಿಂದ ಅನುಷ್ಕಾ ಶೆಟ್ಟಿಯವರು ಈ ಚಿತ್ರದಲ್ಲಿ ಖಂಡಿತಾ ನಟಿಸಲಿದ್ದಾರೆ, ಅನ್ನೋ ಊಹೆ ಪ್ರೇಕ್ಷಕರದ್ದಾಗಿದೆ.

ಸಧ್ಯ ಯಾವುದೇ ಚಿತ್ರಗಳಿಲ್ಲ:
ಕೊರೋನಾದಿಂದಾಗಿ ಅನುಷ್ಕಾ ಅವರು ನಟಿಸಿದ್ದ ನಿಶಬ್ದ ಚಿತ್ರ ಆಮೇಝಾನ್ ಪ್ರೈಮ್ ಮೂಲಕ ಬಿಡುಗಡೆಯಾಗಿದೆ. ವಿಕಿಪಿಡಿಯಾದಲ್ಲಿ ದೊರೆಯುವ ಮಾಹಿತಿಯಂತೆ ನಿಶಬ್ದ ಚಿತ್ರದ ಮಾಹಿತಿಯಿದೆ. 2021ರ ಚಿತ್ರಗಳ ಮಾಹಿತಿ ಇಲ್ಲ. ಆದ್ದರಿಂದ ಮುಂದೆ ಈ ಅಬ್ಬಕ್ಕ ಐತಿಹಾಸಿಕ ಚಿತ್ರಕ್ಕಾಗಿ ಸ್ವೀಟಿ ಸಿದ್ಧರಾಗುತ್ತಿದ್ದಾರೆಯೇ ಎಂಬ ಕುತೂಹಲ ಮೂಡಿದೆ. ಒಂದು ವೇಳೆ ಅವರೇ ಅಬ್ಬಕ್ಕ ಪಾತ್ರ ನಿರ್ವಹಿಸಿದಲ್ಲಿ ಸ್ಯಾಂಡಲ್‍ವುಡ್ ಹಾಗೂ ಕೋಸ್ಟಲ್‍ವುಡ್ ಸಿನಿಪ್ರಿಯರಿಗೆ ಭರಪೂರ ಮನರಂಜನೆ ಲಭ್ಯವಾಗಲಿದ್ದು, ತಮ್ಮ ನೆಚ್ಚಿನ ನಟಿಯನ್ನು ತಮ್ಮ ಸ್ಥಳೀಯ ಭಾಷೆಗಳ ಸಿನಿಮಾದಲ್ಲಿ ರಾಣಿ ಅಬ್ಬಕ್ಕಳಾಗಿ ನೋಡುವಂತಾಗಲಿದೆ.

error: Content is protected !!