ಶರವೇಗದಲ್ಲಿ ಸಾಗಿದ ಕೆ.ಎಂ.ಸಿ.ಸಿ. ಆಂಬ್ಯುಲೆನ್ಸ್: ದಾರಿಬಿಟ್ಟುಕೊಟ್ಟ ಸಾರ್ವಜನಿಕರ ಮಾನವೀಯ ನಡೆಗೆ ಜನಮೆಚ್ಚುಗೆ: ತುರ್ತು ಮನವಿಗೆ ಭರಪೂರ ಸ್ಪಂದನೆ

ಬೆಳ್ತಂಗಡಿ: ಯುವತಿಯ ತುರ್ತು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಪುತ್ತೂರಿನಿಂದ ಉಪ್ಪಿನಂಗಡಿ- ಗುರುವಾಯನಕೆರೆ- ಬೆಳ್ತಂಗಡಿ- ಉಜಿರೆ- ಮಾರ್ಗವಾಗಿ ಚಾರ್ಮಾಡಿ ಮೂಲಕ ಬೆಂಗಳೂರಿಗೆ ತೆರಳಿದ್ದು, ಸಾರ್ವಜನಿಕರು ಸ್ವ-ಪ್ರೇರಿತರಾಗಿ ದಾರಿ ಬಿಟ್ಟುಕೊಟ್ಟು ಆಂಬ್ಯುಲೆನ್ಸ್ ದಾರಿ ಮಾಡಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.


ಕೆ.ಎಂ.ಸಿ.ಸಿ.ಯ (ಕೆ.ಎ.51ಎಬಿ7860) ಆಂಬ್ಯುಲೆನ್ಸ್ ಮೂಲಕ ಚಾಲಕ ಹನೀಫ್ ಅವರು ಪುತ್ತೂರಿನಿಂದ ಬೆಳಗ್ಗೆ 11 ಗಂಟೆ ಸುಮಾರಿಗೆ ಪುತ್ತೂರು ಮಹಾವೀರ ಆಸ್ಪತ್ರೆಯಿಂದ ಹೊರಟಿದ್ದಾರೆ. ಶ್ವಾಸಕೋಶದ ತುರ್ತು ಚಿಕಿತ್ಸೆಗೆ ಪುತ್ತೂರು ಮಹಾವೀರ ಆಸ್ಪತ್ರೆಯಿಂದ ಸುಹಾನ ಎಂಬ ಬಡ ಯುವತಿಯನ್ನು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸುವ ಸಲುವಾಗಿ ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗಿತ್ತು. ಈ ಕುರಿತು ‘ಪ್ರಜಾಪ್ರಕಾಶ’ದಲ್ಲಿಯೂ ವಿಸ್ತೃತ ವರದಿ ಪ್ರಕಟವಾಗಿದ್ದು, ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಯಿತು. ಈ ಮೂಲಕ ಮಾನವೀಯತೆಗೆ ಯಾವುದೇ ಜಾತಿ, ಧರ್ಮಗಳ ತಡೆಗೋಡೆಗಳಿಲ್ಲ ಎಂಬುದು ಮತ್ತೆ ನಿರೂಪಿತವಾದಂತೆ ಕಂಡುಬಂತು.


ಸಾರ್ವಜನಿಕರಿಂದ ಬೆಂಗಾವಲು:
ಸಾರ್ವಜನಿಕರು ಪ್ರಮುಖ ಪ್ರದೇಶಗಳು, ಜಂಕ್ಷನ್‍ಗಳಲ್ಲಿ ನಿಂತು, ಸ್ವ-ಪ್ರೇರಿತರಾಗಿ ಆಂಬ್ಯುಲೆನ್ಸ್ ಸುರಕ್ಷಿತವಾಗಿ ಸಾಗುವಂತೆ ಮಾಡಲು ದಾರಿ ಮಾಡಿಕೊಡುವ ಮೂಲಕ ಸಹಕಾರ ನೀಡಿದರು. ಬಹುತೇಕ ಹೆಚ್ಚಿನ ವಾಹನ ಸವಾರರು ತಮ್ಮ ವಾಹನಗಳನ್ನು ರಸ್ತೆಯಿಂದ ಬದಿಗೆ ನಿಲ್ಲಿಸುವ ಮೂಲಕ, ಆಂಬ್ಯುಲೆನ್ಸ್ ಸರಾಗವಾಗಿ ಸಾಗಲು ಸಹಕಾರ ನೀಡಿದರು. ಅಲ್ಲಲ್ಲಿ ಬೆಳಗ್ಗೆ 10 ಗಂಟೆಯಿಂದಲೇ ಆಂಬ್ಯುಲೆನ್ಸ್ ಸಾಗಲಿದೆ, ದಾರಿ ಬಿಟ್ಟುಕೊಡಬೇಕು ಎಂದು ಮಾತನಾಡಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು. ಕೆ.ಎಂ.ಸಿ.ಸಿ.ಯ ಆಂಬ್ಯುಲೆನ್ಸ್ ಗೆ ಬೆಂಗವಲಾಗಿ ಹಲವು ವಾಹನಗಳು ಸಾಥ್ ನೀಡಿದವು. ಈ ಮೂಲಕ ಯಾವುದೇ ಇತರ ವಾಹನಗಳು ಎದುರಾಗದಂತೆ ಹಾಗೂ ಝೀರೋ ಟ್ರಾಫಿಕ್ ಕಲ್ಪಿಸಲು ನೆರವಾದರು. ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ಪೊಲೀಸರು ಹಾಗೂ ಟ್ರಾಫಿಕ್ ಪೊಲೀಸರು ವಾಹನ ನಿಯತ್ರಣಕ್ಕೆ ಶ್ರಮಿಸಿದರೂ, ಸಾರ್ವಜನಿಕರ ಸಹಕಾರದಿಂದ ಈ ಕಾರ್ಯ ಸುಗಮವಾಯಿತು.
11.33ಕ್ಕೆ ಉಜಿರೆಯಲ್ಲಿ:
ಪುತ್ತೂರಿನಿಂದ ಸುಮಾರು 11 ಗಂಟೆಗೆ ಹೊರಟ ಆಂಬ್ಯುಲೆನ್ಸ್ 11.11ರ ಸುಮಾರಿಗೆ ಉಪ್ಪಿನಂಗಡಿ ದಾಟಿ, 11.20ರ ಸುಮಾರಿಗೆ ಜಾರಿಗೆ ಬೈಲು ದಾಟಿದೆ. 11. 25ರ ಸುಮಾರಿಗೆ ಗುರುವಾಯನಕೆರೆ, 11.27ರ ಸುಮಾರಿಗೆ ಬೆಳ್ತಂಗಡಿ ದಾಟಿದೆ. ಸುಮಾರು 11.33ರ ಸುಮಾರಿಗೆ ಉಜಿರೆಯನ್ನು ದಾಟಿ ಮುಂದುವರಿದು ಸಾಗಿದೆ. 11.43ರ ಸುಮಾರಿಗೆ ಚಾರ್ಮಾಡಿ ಪ್ರದೇಶವನ್ನು ದಾಟಿದೆ.
ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಗೆ ಸುಮಾರು 12.16ರ ಸುಮಾರಿಗೆ ಹಾಗೂ ಹಾಸನ ಜಿಲ್ಲೆಯ ಬೇಲೂರನ್ನು 12.40 ಸುಮಾರಿಗೆ ದಾಟಿದೆ. ಈ ಮೂಲಕ ಸಾರ್ವಜನಿಕರ ಸಹಕಾರದೊಂದಿಗೆ ಅತಿ ಶೀಘ್ರವಾಗಿ ಸಾಗಲು ಸಹಾಯ ಮಾಡಿದಂತಾಗಿದೆ.


ಪ್ರಜಾಪ್ರಕಾಶ ತಂಡದ ಧನ್ಯವಾದಗಳು:
ಮಾನವೀಯ ಕಾರ್ಯಕ್ಕೆ ಸ್ಪಂದಿಸಿ, ತಮ್ಮ ಅಮೂಲ್ಯ ಸಮಯವನ್ನು ಜೀವ ಉಳಿಸುವ ಕಾರ್ಯಕ್ಕೆ ನೀಡಿ ಸಹಕರಿಸಿದ ಎಲ್ಲಾ ಸಾರ್ವಜನಿಕರಿಗೂ ‘ಪ್ರಜಾಪ್ರಕಾಶ’ ತಂಡದ ಧನ್ಯವಾದಗಳು. ಒಂದು ಅಮೂಲ್ಯ ಜೀವದ ಉಳಿವಿಗಾಗಿ ಒಗ್ಗಟ್ಟು ಪ್ರದರ್ಶಿಸಿದ ಜನತೆಯ ನಡೆ ಪ್ರಪಂಚಕ್ಕೆ ಮಾದರಿಯಾದಂತೆ ಕಂಡುಬರುತ್ತಿದೆ.

error: Content is protected !!