ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ 73ನೇ ಹುಟ್ಟುಹಬ್ಬ ಶ್ರೀಕ್ಷೇತ್ರದಲ್ಲಿ ನ.25ರಂದು ಸರಕಾರದ ಮಾರ್ಗಸೂಚಿಯಂತೆ ಸರಳವಾಗಿ ನಡೆಯಲಿದೆ.
ಧರ್ಮಾಧಿಕಾರಿ ಡಾ. ಹೆಗ್ಗಡೆಯವರ ಕುಟುಂಬಸ್ಥರು, ಬಂಧುಗಳು, ಆಪ್ತರು, ಅಭಿಮಾನಿಗಳು, ಭಕ್ತರು ಗೌರವ ಸಲ್ಲಿಸಲಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನ.25ರಂದು ಬೆಳಗ್ಗೆ 10 ಗಂಟೆಗೆ ಹುಟ್ಟುಹಬ್ಬದ ಅಂಗವಾಗಿ ಸಮಾಜಕ್ಕೆ ಸಹಾಯಹಸ್ತ ನೀಡುವ ‘ವಾತ್ಸಲ್ಯ’ ಕಾರ್ಯಕ್ರಮದ ರಾಜ್ಯಾದ್ಯಂತ ವಿತರಿಸಲ್ಪಡುವ ‘ವಾತ್ಸಲ್ಯ ಕಿಟ್’ ಸಾಗಿಸುವ ಟ್ರಕ್‌ಗಳಿಗೆ ಚಾಲನೆಯನ್ನು ಕ್ಷೇತ್ರದ ದೇವಸ್ಥಾನದ ಮುಂಭಾಗದಲ್ಲಿ ನೀಡಲು ಯೋಜನೆ ರೂಪಿಸಲಾಗಿದೆ. ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮಗಳ ಅಧ್ಯಕ್ಷೆ ಹೇಮಾವತಿ ವೀ.ಹೆಗ್ಗಡೆಯವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್, ಡಾ. ಬಿ.ಯಶೋವರ್ಮ, ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ವಿ. ರಾಮಸ್ವಾಮಿ ಭಾಗವಹಿಸಲಿದ್ದಾರೆ.
ನಡೆದು ಬಂದ ಹಾದಿ:
ಕೀರ್ತಿಶೇಷ ಹಿಂದಿನ ಧರ್ಮಾಧಿಕಾರಿಯಾಗಿದ್ದ ರತ್ನವರ್ಮ ಹೆಗ್ಗಡೆ, ರತ್ನಮ್ಮ ದಂಪತಿಯ ಜೇಷ್ಠ ಪುತ್ರರಾಗಿರುವ ಡಾ.ಹೆಗ್ಗಡೆಯವರು 1948ರ ನವೆಂಬರ್ 25ರಂದು ಜನಿಸಿದ್ದು, 1968ರ ಅಕ್ಟೋಬರ್ 24ರಂದು ತನ್ನ 20ನೇ ವಯಸ್ಸಿನಲ್ಲಿ ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದರು. ಧರ್ಮಾಧಿಕಾರಿಯಾಗಿ ಪಟ್ಟವೇರಿದ ಬಳಿಕ ಕಳೆದ 52 ವರ್ಷಗಳಲ್ಲಿ ಅವರು ತಂದ ಹಲವಾರು ಜನಪರ ಕಾರ್ಯಕ್ರಮಗಳಿಂದ ಕ್ಷೇತ್ರದ ಖ್ಯಾತಿ ಜನ-ಮನಕ್ಕೆ ಮುಟ್ಟಿದೆ. ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿರುವ ಧರ್ಮಸ್ಥಳ ಇಂದು ಜಾಗತಿಕ ಮಟ್ಟದಲ್ಲಿ ಮನ್ನಣೆ, ಮಾನ್ಯತೆ ಪಡೆಯಲು ಡಾ. ಹೆಗ್ಗಡೆಯವರ ಆಡಳಿತ ವೈಖರಿ, ಅನುಪಮ ಸೇವೆ, ಧರ್ಮ ಮತ್ತು ಪರಂಪರೆಯ ರಕ್ಷಣೆಯೊಂದಿಗೆ ವಿಜ್ಞಾನ ಹಾಗೂ ತಂತ್ರಜ್ಞಾನದ ಬಳಕೆ ಕಾರಣವಾಗಿದೆ.
ರಾಜ್ಯದಾದ್ಯಂತ ಜಲಮರುಪೂಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕೆರೆಗಳ ಅಭಿವೃದ್ಧಿ, ಸ್ವಚ್ಛ ಭಾರತ್ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ವರ್ಷಕ್ಕೆ ಎರಡು ಬಾರಿ ಶ್ರದ್ದಾ ಕೇಂದ್ರಗಳಲ್ಲಿ ಸ್ವಚ್ಚತಾ ಅಭಿಯಾನ, 1982ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಚಾಲನೆಗೊಳಿಸಿ, ಗ್ರಾಮಾಭಿವೃದ್ಧಿಯ ಕನಸನ್ನು ಸಾಕಾರಗೊಳಿಸಿದರು. ಜಾತಿ-ಮತ- ಪಂಥದ ಬಂಧನದಲ್ಲಿದ್ದ ಸಮಾಜಕ್ಕೆ ವಿದ್ಯೆಯೊಂದೇ ದಾರಿದೀಪ ಎಂದು ಮನಗಂಡು ಅನೇಕ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕನ್ನು ನೀಡಿದ್ದಾರೆ. ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಕೇಂದ್ರಗಳ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆ, ಧರ್ಮಸ್ಥಳದಲ್ಲಿ 39 ಅಡಿ ಎತ್ತರದ ಬಾಹುಬಲಿ ಮೂರ್ತಿಯ ಪ್ರತಿಷ್ಠಾಪನೆ ಮತ್ತು ಮಹಾಮಸ್ತಕಾಭಿಷೇಕ, ಪ್ರತಿ ವರ್ಷ ಉಚಿತ ಸಾಮೂಹಿಕ ವಿವಾಹ, ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನ, ಐತಿಹಾಸಿಕ ದೇಗುಲಗಳು ಹಾಗೂ ಸ್ಮಾರಕಗಳ ಜೀರ್ಣೋದ್ಧಾರ ಮತ್ತು ಸಂರಕ್ಷಣೆ, ಭಜನಾ ಕಮ್ಮಟ, ಮದ್ಯವರ್ಜನ ಶಿಬಿರ, ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿಗೆ ಪ್ರೋತ್ಸಾಹ, ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಅನುಷ್ಠಾನ, 2010ರಲ್ಲಿ ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನ ಸಂಘಟಿಸಿರುವುದು ಅವರ ಸಂಘಟನಾ ಶಕ್ತಿಗೆ ಕೈಗನ್ನಡಿಯಾಗಿದೆ.