ಶಿಕ್ಷಣ ಯಜ್ಞಕ್ಕೆ ಕನ್ನಡ ಮಾಧ್ಯಮ‌ ವಿದ್ಯಾರ್ಥಿನಿಯ ಕೊಡುಗೆ: ಡಾ. ಜೋಸೆಫ್: ‘ಕರ್ನಾಟಕ ಜನರಲ್ ನಾಲೇಜ್’ ಕೃತಿ ಲೋಕಾರ್ಪಣೆ

ಬೆಳ್ತಂಗಡಿ: ಶಿಕ್ಷಣ ಯಜ್ಞಕ್ಕೊಂದು ವಿಶೇಷ ಕೊಡುಗೆಯನ್ನು ವಿದ್ಯಾರ್ಥಿನಿ ಅಧ್ಯಯನಾ ನೀಡಿದ್ದಾರೆ. ಪಿಯುಸಿ ವಿದ್ಯಾರ್ಥಿಯಾಗಿರುವ ಈಕೆ ಇಂಗ್ಲಿಷ್ ‌ನಿಂದ ಕನ್ನಡಕ್ಕೆ ತರ್ಜುಮೆ ಮಾಡಿರುವ ಸಾಧನೆ ಕನ್ನಡ ಮಾಧ್ಯಮದ ಮಕ್ಕಳಿಗೆ ಮಾದರಿ. ಅವರು ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗಿಂತಲೂ ಹೆಚ್ಚು ಪ್ರತಿಭಾನ್ವಿತ ವಿದ್ಯಾರ್ಥಿಗಳು ಕನ್ನಡದ ವಿದ್ಯಾರ್ಥಿಗಳಿದ್ದಾರೆ ಎಂಬುದನ್ನು ನಿರೂಪಿಸಿದ್ದಾರೆ ಎಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಚಾರ್ಯ ಡಾ.ಎನ್.ಎಮ್. ಜೋಸೆಫ್ ತಿಳಿಸಿದರು.

ಅವರು ಶನಿವಾರ ಬೆಳ್ತಂಗಡಿ ಸರಕಾರಿ ನೌಕರರ ಏಕತಾ ಸೌಧದಲ್ಲಿ ತಾಲೂಕು ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘ, ಪ್ರೌಢಶಾಲಾ ಸಹಶಿಕ್ಷಕರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಹಾಗೂ ಜೈ ಕನ್ನಡಮ್ಮ ವಾರ ಪತ್ರಿಕೆ ಆಶ್ರಯದಲ್ಲಿ ವಿದ್ಯಾರ್ಥಿನಿ ಅಧ್ಯಯನಾ ಸಿ.ಎ.ಅವರು ಕನ್ನಡದಿಂದ ಇಂಗ್ಲೀಷ್ ಗೆ ಅನುವಾದಿಸಿರುವ ‘ಕರ್ನಾಟಕ ಜನರಲ್ ನಾಲೇಜ್’ ಹೊತ್ತಗೆ ಅನಾವರಣಗೊಳಿಸಿ ಮಾತನಾಡಿದರು.

ವಿದ್ಯಾರ್ಥಿನಿಯ ಸಾಧನೆ ಗುರುತಿಸಿ ಸಾಹಿತ್ಯ ಚಟುವಟಿಕೆಗಳನ್ನು ನಡೆಸಲು ಹಿರಿಯರು ಪ್ರೊತ್ಸಾಹ ಕೊಡಬೇಕು. ಸಾಹಿತ್ಯ ನಿರ್ಮಾಣಕ್ಕೆ ವಯಸ್ಸಿನ‌ ನಿರ್ಬಂಧವಿಲ್ಲ ಎಂಬುದನ್ನು ಹೆತ್ತವರು ಮನಗಾಣಬೇಕು, ಜೊತೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.

ಪುಂಜಾಲಕಟ್ಟೆ ಪ.ಪೂ. ಕಾಲೇಜಿನ ಪ್ರಾಚಾರ್ಯ ಗಣಪತಿ ಭಟ್ ಕುಳವರ್ಮ ಮಾತನಾಡಿ, ಪುಸ್ತಕ ಸಾಮಾನ್ಯ ಜ್ಞಾನ ಪಡೆಯಲು ಅಪೂರ್ವ ಕೊಡುಗೆಯಾಗಿದೆ. ವಿವಿಧ ಇಲಾಖೆಗಳ ಪರೀಕ್ಷೆಗಳಿಗೆ ಇದು ಅನುಕೂಲಕರವಾಗಿದೆ ಎಂದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಜಯಕೀರ್ತಿ ಜೈನ್ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಸಾಹಿತಿ ಅರವಿಂದ ಚೊಕ್ಕಾಡಿ, ಪ್ರೌ.ಶಾ. ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಲಕ್ಷ್ಮೀ ನಾರಾಯಣ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರ ದೇವಾಡಿಗ ಇದ್ದರು.

ಪ್ರೌ.‌ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್ ಮಯ್ಯ ಸ್ವಾಗತಿಸಿದರು. ಪತ್ರಕರ್ತ ದೇವಿಪ್ರಸಾದ್ ಪ್ರಸ್ತಾವಿಸಿದರು. ಪ್ರಾ.ಶಾ. ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ ನಾರಾವಿ ವಂದಿಸಿದರು. ಪ್ರೌ.ಶಾ. ಮು.ಶಿ.ಸಂಘದ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ನಿರೂಪಿಸಿದರು.

error: Content is protected !!