ಶೇ.95ಕ್ಕಿಂತ ಹೆಚ್ಚು ಅಂಕಗಳಿಸಿದ ಎಸ್.ಎಸ್.ಎಲ್.ಸಿ., ಪಿ.ಯು. ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ: ವಸಂತ ಬಂಗೇರ: ಶೈಕ್ಷಣಿಕ ದತ್ತು ಸ್ವೀಕರಿಸಿದವರಿಗೆ ಅಭಿನಂದನೆ

ಬೆಳ್ತಂಗಡಿ: 2006ರಲ್ಲಿ ಶ್ರೀ ಗುರುದೇವ ಜ್ಯೂನಿಯರ್ ಕಾಲೇಜು ಪ್ರಾರಂಭಿಸಲಾಯಿತು. 2013-14ರಲ್ಲಿ ಪ್ರಥಮ ದರ್ಜೆ ಕಾಲೇಜನ್ನು ಪ್ರಾರಂಭಿಸಲಾಯಿತು. ಕಳೆದ 14 ವರ್ಷಗಳಿಂದ ಉತ್ತಮ ಶಿಕ್ಷಣ ನೀಡುವ ಕೆಲಸವನ್ನು ಶಿಕ್ಷಕರು ಮಾಡುತ್ತಿದ್ದಾರೆ. ಶೇ.95ಕ್ಕಿಂತ ಹೆಚ್ಚು ಅಂಕಗಳಿಸಿದ ಎಸ್.ಎಸ್.ಎಲ್.ಸಿ., ಪಿ.ಯು. ವಿದ್ಯಾರ್ಥಿಗಳಿಗೆ ಟ್ರಸ್ಟ್ ನಿಂದ ಉಚಿತ ಶಿಕ್ಷಣ ನೀಡಲಾಗುವುದು. ಈಗಾಗಲೇ 7 ಪಿ.ಯು. ಹಾಗೂ ಒಬ್ಬ ಪದವಿ ವಿದ್ಯಾರ್ಥಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಅದಲ್ಲದೆ ಈ ಬಾರಿ 34 ಮಂದಿ ಹೃದಯವಂತರು ಶಾಲೆಯ ವಿದ್ಯಾರ್ಥಿಗಳ ವಿದ್ಯಾಭ್ಯಾಸ ವೆಚ್ಚಗಳನ್ನು ನೋಡಿಕೊಳ್ಳುವ ಮೂಲಕ ದತ್ತು ಸ್ವೀಕರಿಸಿರುವುದು ಶ್ಲಾಘನೀಯ. ಅವರಿಗೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀ ಗುರುದೇವ ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ. ವಸಂತ ಬಂಗೇರ ತಿಳಿಸಿದರು.
ಶ್ರೀ ಗುರುದೇವಾ ಎಜ್ಯುಕೇಶನಲ್ ಟ್ರಸ್ಟ್ ಆಡಳಿತಕ್ಕೊಳಪಟ್ಟ ಶ್ರೀ ಗುರುದೇವಾ ಪ್ರಥಮ ದರ್ಜೆ ಕಾಲೇಜು, ಶ್ರೀ ಗುರುದೇವಾ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ 2020-21ರ ಶೈಕ್ಷಣಿಕ ದತ್ತು ಸ್ವೀಕಾರ ಮಾಡಿದವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.


ಹಿಂದೆ ಶೇ. 50ಕ್ಕಿಂತ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕೆಲ ಕಾಲೇಜುಗಳಲ್ಲಿ ಪ್ರವೇಶ ನಿರಾಕರಣೆ ಮಾಡುತ್ತಿದ್ದ ವಿಚಾರ ಗಮನಕ್ಕೆ ಬರುತ್ತಿತ್ತು. ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಯಾವುದೇ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಕಾಲೇಜು ರಚಿಸಿ, ಶಿಕ್ಷಣ ನೀಡುವ ಕಾರ್ಯ ಆರಂಭವಾಯಿತು. ಈ ಕಾಲೇಜಿನಲ್ಲಿ 35ರಿಂದ 40 ಶೇ. ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೂ ಪ್ರವೇಶವನ್ನು ನೀಡಿ ಅವರಿಗೆ ಉನ್ನತ ಮಟ್ಟದ ಶಿಕ್ಷಣವನ್ನು ನೀಡುತ್ತಿದ್ದೇವೆ. ಈ ಶ್ರಮಕ್ಕಾಗಿ ಶಾಲೆಯ ಉಪನ್ಯಾಸಕರನ್ನು ಅಭಿನಂದಿಸಲಾಗುವುದು. ಉಪನ್ಯಾಸಕರ ಶ್ರಮದಿಂದಾಗಿ ವರ್ಷದಿಂದ ವರ್ಷಕ್ಕೆ ಕಾಲೇಜಿನ ಫಲಿತಾಂಶ ಉತ್ತಮ ರೀತಿಯಲ್ಲಿ ಬರುತ್ತಿರುವುದು ಉತ್ತಮ ವಿಚಾರ. ಕಲಾ ವಿಭಾಗ ಕಳೆದ 6 ವರ್ಷದಿಂದ ಶೇ.100 ಫಲಿತಾಂಶ ದಾಖಲಿಸುತ್ತಿದೆ ಎಂದರು.
ಶ್ರೀ ಗುರುದೇವ ಎಜ್ಯುಕೇಶನಲ್ ಟ್ರಸ್ಟ್ ಉಪಾಧ್ಯಕ್ಷ ಆರ್.ಟಿ.ಡಿ., ಡಿ.ಎಫ್.ಒ. ಪದ್ಮನಾಭ ಮಾಣಿಂಜ ಮಾತನಾಡಿ, ಸಮುದಾಯದ 26 ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚದ 3.77 ಲಕ್ಷ ರೂ. ಈಗಾಗಲೇ ಖಾತೆಗೆ ವರ್ಗಾಯಿಸಲಾಗಿದೆ. ಕಾಲೇಜು ಆರಂಭದ ಬಳಿಕ ಸಮಸ್ತ್ರದ ವೆಚ್ಚವನ್ನೂ ಖಾತೆಗೆ ಹಾಕುವ ಮೂಲಕ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಕ್ರಮ ವಹಿಸಲಾಗುವುದು ಎಂದರು.


ವಕೀಲರಾದ ಮನೋಹರ್ ಅಭಿನಂದನಾ ಭಾಷಣ ಮಾಡಿದರು. ಶಿಕ್ಷಕಿ ಹೇಮಾವತಿ ಅವರು ಕೃತಜ್ಞತಾ ಭಾಷಣದ ಮೂಲಕ ಧನ್ಯವಾದ ತಿಳಿಸಿದರು. ದತ್ತು ಸ್ವೀಕರಿಸಿದ ದಾನಿಗಳನ್ನು ಟ್ರಸ್ಟ್ ಪರವಾಗಿ ಗೌರವಿಸಲಾಯಿತು.
ಟ್ರಸ್ಟ್ ಕಾರ್ಯದರ್ಶಿ ಧರ್ಮ ವಿಜೇತ್ ಎಂ., ಕೋಶಾಧಿಕಾರಿ ಗಂಗಾಧರ ಮಿತ್ತಮಾರು, ಸದಸ್ಯರಾದ ಪ್ರೀತಿತಾ ಧರ್ಮವಿಜೇತ್, ಬಿನುತಾ ಬಂಗೇರ, ಸಂಜೀವ ಕಣೇಕಲ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಅಂಜನಿರಾವ್ ಪ್ರಾರ್ಥಿಸಿದರು. ಶಮೀವುಲ್ಲ ಸ್ವಾಗತಿಸಿದರು. ಹರೀಶ್ ಪೂಜಾರಿ ವಂದಿಸಿದರು. ಗಣೇಶ್ ಬಿ. ನಿರೂಪಿಸಿದರು.

error: Content is protected !!