ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಆರೋಪ: ಸಿ.ಎಫ್.ಐ. ನಿಂದ ರಾಜ್ಯಾದ್ಯಂತ ‘ಸ್ಕಾಲರ್ ಶಿಪ್ ಕೊಡಿ’ ಆಂದೋಲನ

ಬೆಳ್ತಂಗಡಿ: ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಕಾಲೇಜುಗಳು ಇನ್ನೇನು ಆರಂಭಗೊಳ್ಳಲಿದೆ. ಕೊರೋನಾ ಪರಿಣಾಮದಿಂದ ಜನರ ಆರ್ಥಿಕ ಸ್ಥಿತಿಗತಿಯು ತೀರಾ ಹದಗೆಟ್ಟಿರುವುದರಿಂದ ಪೋಷಕರು ತಮ್ಮ ಮಕ್ಕಳ ಶಾಲಾ ಪ್ರವೇಶಕ್ಕೆ ಶುಲ್ಕ ಕಟ್ಟಲು ಪರದಾಡುತ್ತಿದ್ದಾರೆ. ಇನ್ನೊಂದು ಕಡೆ ಶಿಕ್ಷಣ ಸಂಸ್ಥೆಗಳು ಶುಲ್ಕ ಹೆಚ್ಚಿಸಿರುವುದಲ್ಲದೇ ಒಂದೇ ಕಂತಿನಲ್ಲಿ ಎಲ್ಲಾ ಶುಲ್ಕವನ್ನು ಕಟ್ಟಲು ಒತ್ತಾಯಿಸುವ ಮೂಲಕ ಪೋಷಕರಿಗೆ ಗಾಯದ ಮೇಲೆ ಬರೆ ಎಳೆದಿದ್ದಾರೆ. ಸರಕಾರವೂ ಈ ಬಗ್ಗೆ ಮಾರ್ಗಸೂಚಿಯನ್ನು ತರಲು ವಿಫಲವಾಗಿರುವುದು ವಿಪರ್ಯಾಸ ಎಂದು ಕ್ಯಾಂಪಸ್ ಫ್ರಂಟ್ ದ.ಕ. ಜಿಲ್ಲಾ ಸಮಿತಿ ಸದಸ್ಯ ತಾಜುದ್ದೀನ್ ಹೇಳಿದರು.
ಅವರು ಬೆಳ್ತಂಗಡಿ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸದ್ಯದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರೆಸಲು ಸ್ಕಾಲರ್‌ಶಿಪ್‌ಗೆ ಅವಲಂಬಿತವಾಗಿದ್ದಾರೆ. ಆದರೆ ಸ್ಕಾಲರ್‌ಶಿಪ್‌ನಲ್ಲಿ ಉಂಟಾಗಿರುವ ಅವ್ಯವಸ್ಥೆಯಿಂದ ರಾಜ್ಯದ ಹಲವು ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದಾರೆ. ಪ್ರತೀ ಬಾರಿ ಸರಕಾರ ಮತ್ತು ಅಲ್ಪಸಂಖ್ಯಾತ ಇಲಾಖೆಯು ಸ್ಕಾಲರ್‌ಶಿಪ್ ವಿಚಾರದಲ್ಲಿ ವ್ಯವಸ್ಥಿತವಾಗಿ ನಡೆಸಿಕೊಂಡು ಬರುವುದರಲ್ಲಿ ವಿಫಲವಾಗುತ್ತಿದ್ದು, ಇದು ಶಿಕ್ಷಣ ಮತ್ತು ವಿದ್ಯಾರ್ಥಿಗಳ ಮೇಲೆ ಸರಕಾರಕ್ಕಿರುವ ಬೇಜವಾಬ್ದಾರೀತನವನ್ನು ತೋರಿಸುತ್ತದೆ. ಇದನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿ ಖಂಡಿಸುತ್ತದೆ ಎಂದರು.

ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರೀ-ಮೆಟ್ರಿಕ್, ಪೋಸ್ಟ್ ಮೆಟ್ರಿಕ್, ವಿದ್ಯಾಸಿರಿ, ಅರಿವು ಸಾಲ ಮುಂತಾದ ಸ್ಕಾಲರ್‌ಶಿಪ್ ಯೋಜನೆಯನ್ನು ಪ್ರಕಟಿಸಿದೆ. ಆದರೆ ಕಳೆದ ವರ್ಷಗಳಿಂದ ಅರ್ಜಿ ಹಾಕಿರುವ ವಿದ್ಯಾರ್ಥಿಗಳಿಗೆ ಇಲಾಖೆಯು ಕ್ಷುಲ್ಲಕ ಕಾರಣಗಳನ್ನು ಹೇಳಿ ತಮ್ಮ ಅರ್ಜಿಗಳನ್ನು ವಿಲೇವಾರಿ ಮಾಡದೇ ಬಾಕಿಯಿಟ್ಟಿವೆ. ಇನ್ನು ಕೆಲವರಿಗೆ ಸ್ಕಾಲರ್‌ಶಿಪ್ ಮಂಜೂರಾದರೂ ತಮ್ಮ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಲ್ಲ. ವಿದ್ಯಾರ್ಥಿಗಳು ಈ ಬಗ್ಗೆ ವಿಚಾರಿಸಲು ಅಲ್ಪಸಂಖ್ಯಾತ ಇಲಾಖೆಯ ರಾಜ್ಯ ಮತ್ತು ಜಿಲ್ಲಾ ಕಛೇರಿಗಳಿಗೆ ಅಲೆದಾಡುತ್ತಿದ್ದಾರೆ. ಇತ್ತ ಶಿಕ್ಷಣ ಸಂಸ್ಥೆಗಳು ಕಳೆದ ಸಾಲಿನ ಬಾಕಿಯಿರುವ ದಾಖಲಾತಿ ಶುಲ್ಕವನ್ನು ಕಟ್ಟದೆ ಪ್ರಸಕ್ತ 2020-21 ರ ದಾಖಲಾತಿ ಮಾಡುತ್ತಿಲ್ಲ. ವಿದ್ಯಾರ್ಥಿಗಳು ಶುಲ್ಕವನ್ನು ಕಟ್ಟಲು ಇದೇ ಸ್ಕಾಲರ್‌ಶಿಪ್‌ನ್ನು ನಿರೀಕ್ಷಿಸುತ್ತಿದ್ದಾರೆ. ರಾಜ್ಯ ಸರಕಾರವು ಈ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದ್ದು, ಕನಿಷ್ಠ ಅಲ್ಪಸಂಖ್ಯಾತ ಇಲಾಖೆಗೆ ಪ್ರತ್ಯೇಕ ಸಚಿವರನ್ನು ಇದುವರೆಗೆ ನೇಮಿಸಿಲ್ಲ. ಅಲ್ಲದೆ ಸ್ಕಾಲರ್‌ಶಿಪ್ ಗೆ ಅರ್ಜಿ ಹಾಕುವ ಸಂದರ್ಭದಲ್ಲಿ ಉಂಟಾಗುವ ತಾಂತ್ರಿಕ ತೊಂದರೆಯನ್ನು ಇದುವರೆಗೆ ಸರಿಪಡಿಸಿಲ್ಲ. ಇದರಿಂದ ಪ್ರತಿ ವರ್ಷ ಹಲವು ವಿದ್ಯಾರ್ಥಿಗಳು ಸ್ಕಾಲರ್‌ಶಿಪ್‌ನಿಂದ ವಂಚಿತರಾಗುತ್ತಿದ್ದಾರೆ ಎಂದರು.

ಫೆಲೋಶಿಪ್ ಮುಂದುವರೆಸಿ:
ಅಲ್ಪಸಂಖ್ಯಾತ ಇಲಾಖೆಯಿಂದ ಪಿ.ಹೆಚ್.ಡಿ ಮತ್ತು ಎಮ್.ಫಿಲ್ ಅಧ್ಯಯನ ಮಾಡುತ್ತಿರುವ ಪ್ರತೀ ವರ್ಷ ವಿದ್ಯಾರ್ಥಿಗಳಿಗೆ ಮಾಸಿಕ 25, ಸಾವಿರ ರೂ. ಪ್ರೋತ್ಸಾಹಧನ ಮತ್ತು ವಾರ್ಷಿಕ 10ಸಾವಿರ ರೂ. ನಿರ್ವಹಣಾ ವೆಚ್ಚ ನೀಡುತ್ತಿತ್ತು. ಆದರೆ ಸರಕಾರ ದಿಢೀರ್ ಆದೇಶ ಹೊರಡಿಸಿ ಮಾಸಿಕ ನೀಡುವ ಪ್ರೊತ್ಸಾಹಧನವನ್ನು 10 ಸಾವಿರ ರೂ.ಗೆ ಇಳಿಸಿ ಮತ್ತು ವಾರ್ಷಿಕ ನಿರ್ವಹಣಾ ವೆಚ್ಚವನ್ನು ಹಿಂತೆಗೆದಿದೆ. ಸರಕಾರ ವಿನಾಃ ಕಾರಣ ಹೊರಡಿಸಿರುವ ಈ ಆವೇಶದಿಂದ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಪರಿಣಾಮ ಬಿದ್ದಿದೆ. ಸರಕಾರದ ಈ ನಿರ್ಧಾರದಲ್ಲಿ ಹಲವು ದುರುದ್ಧೇಶಗಳಿದ್ದು, ಕೊರೋನಾದ ಸಂಕಷ್ಟದ ಸಂಧರ್ಭದಲ್ಲಿಯೂ ಇಂತಹ ನಿರ್ಧಾರ ಕೈಗೊಂಡಿರುವುದಕ್ಕೆ ಕ್ಯಾಂಪಸ್ ಫ್ರಂಟ್ ಖಂಡಿಸುತ್ತಿದೆ. ಅಲ್ಲದೇ ಕೂಡಲೇ ಕಡಿತಗೊಳಿಸಿರುವ ಪಿ.ಹೆಚ್.ಡಿ ಮತ್ತು ಎಮ್.ಫಿಲ್ ಫೆಲೋಶಿಪ್ ಮುಂದುವರೆಸಬೇಕೆಂದು ಆಗ್ರಹಿಸುತ್ತದೆ ಎಂದರು.

ಒಟ್ಟಾರೆಯಾಗಿ ಅಲ್ಪಸಂಖ್ಯಾತ ಇಲಾಖೆಯಲ್ಲಿ ಉಂಟಾಗಿರುವ ಈ ಎಲ್ಲಾ ಅವ್ಯವಸ್ಥೆಗಳ ವಿರುದ್ಧ ವಿದ್ಯಾರ್ಥಿಗಳು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಹಲವು ಬಾರಿ ಅಧಿಕಾರಿಗಳನ್ನು ಭೇಟಿಯಾದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಪದೇ ಪದೇ ಸ್ಕಾಲರ್‌ಶಿಪ್ ವಿಚಾರದಲ್ಲಿ ಉಂಟಾಗುತ್ತಿರುವ ಇಂತಹ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿಕೊಂಡು ಇದಕ್ಕೆ ಶಾಶ್ವತ ಪರಿಹಾರ ಕಾಣುವ ನಿಟ್ಟಿನಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿಯು ರಾಜ್ಯಾದ್ಯಂತ ‘ಸ್ಕಾಲರ್ ಶಿಪ್ ಕೊಡಿ’ ರಾಜ್ಯ ವ್ಯಾಪಿ ವಿದ್ಯಾರ್ಥಿ ಆಂದೋಲನವನ್ನು ನಡೆಸಿ ಹೋರಾಟ ನಡೆಸಲು ಕ್ಯಾಂಪಸ್ ಫ್ರಂಟ್ ಅಫ್ ರಾಜ್ಯ ಸಮಿತಿ ತಿರ್ಮಾನಿಸಿದೆ.

ಪ್ರಮುಖ ಬೇಡಿಕೆಗಳಾದ
ಸ್ಕಾಲರ್‌ಶಿಪ್ ವ್ಯವಸ್ಥೆಯನ್ನು ಸರಳೀಕೃತಗೊಳಿಸಬೇಕು, ಬಾಕಿ ಇರುವ ಅರ್ಜಿಯನ್ನು ತಕ್ಷಣ ವಿಲೇವಾರಿ ಮಾಡಬೇಕು,
ಮಂಜೂರಾಗದೇ ಬಾಕಿಯಿರುವ ಎಲ್ಲಾ ಮಾದರಿಯ ವಿದ್ಯಾರ್ಥಿ ವೇತನವನ್ನು ಶೀಘ್ರ ಬಿಡುಗಡೆಗೊಳಿಸಬೇಕು, ಕಡಿತಗೊಳಿಸಿರುವ ಪಿ.ಹೆಚ್.ಡಿ ಫೆಲೋಶಿಪ್ ಆದೇಶವನ್ನು ಹಿಂಪಡೆಯಬೇಕು ಮೊದಲಾದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯ, ಇಮ್ರಾನ್ ಜೈಫ್, ಕ್ಯಾಂಪಸ್ ಫ್ರಂಟ್‌ ಅಧ್ಯಕ್ಷ ಸಪ್ವಾನ್ ಸುನ್ನತ್ ಕೆರೆ, ಉಪಾಧ್ಯಕ್ಷೆ ಫಾತಿಮಾ, ಮಾಧ್ಯಮ ಸಂಯೋಜಕ ಮಹಮ್ಮದ್ ಶಹೀರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!