ಜಾತಿ‌, ಧರ್ಮಗಳನ್ನು ‌ಮೀರಿದ್ದು ಮಾನವೀಯತೆ: ಶ್ರೀನಿವಾಸ ಗೌಡ: ರಾಜ್ಯಮಟ್ಟದ ಸೇವಾಸಿಂಧು ಪ್ರಶಸ್ತಿ ಪ್ರಧಾನ

ಬೆಳ್ತಂಗಡಿ: ನ್ಯಾಯಕ್ಕಾಗಿ ಹೋರಾಡಿ ಕಾನೂನಿನಡಿಯಲ್ಲಿ ನೊಂದವರಿಗೆ, ನಿರ್ಗತಿಕರಿಗೆ ಸೇವೆ ಮಾಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿ (ರಿ) ಬೆಂಗಳೂರು ಸೇವೆ ಸಲ್ಲಿಸುತ್ತಿದೆ. ಇದಕ್ಕೆ ಸಮಾನವಾಗಿ ಬೆಳ್ತಂಗಡಿ ಡಿಕೆಆರ್‌ಡಿಎಸ್ ಸಂಸ್ಥೆಯು ತೆರೆಮರೆಯಲ್ಲಿ ಬೆಲೆಕಟ್ಟಲಾಗದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದೆ. ಈ ಸಂಸ್ಥೆಗೆ ಸೇವಾಸಿಂಧು ಪ್ರಶಸ್ತಿ ನೀಡಲು ಹೆಮ್ಮೆಯಾಗುತ್ತಿದೆ. ಯಾವುದೇ ಧರ್ಮ, ಜಾತಿ‌ ಅಥವಾ ರಾಜಕೀಯ ‌ಮಾಡದೆ, ಎಲ್ಲವನ್ನೂ ‌ಮೀರಿದ ಮಾನವೀಯತೆ ಗಮನದಲ್ಲಿಟ್ಟುಕೊಂಡು ಸಮಾಜಿಕ ಸೇವೆ ಮಾಡುವ ಈ ಸಂಸ್ಥೆಗಳ ಕಾರ್ಯ ಅನನ್ಯ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಶ್ರೀನಿವಾಸ ಗೌಡ ಹೇಳಿದರು.


ಅವರು ಬೆಳ್ತಂಗಡಿ ಸಾಂತೋಮ್ ಟವರ್‌ ಸಭಾಂಗಣದಲ್ಲಿ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿ ಬೆಂಗಳೂರು ಇದರ ವತಿಯಿಂದ ಹಮ್ಮಿಕೊಂಡಿದ್ದ ಸಮಾನತೆ ಹಾಗೂ ಮಾನವ ಘನತೆ ಆಧಾರಿತ ನೀತಿಯುತ ಕಾರ್ಯಕ್ರಮ, ಬಡ ಮತ್ತು ಶೋಷಿತ ವರ್ಗದ ಜನರ ಸೇವೆ, ಮಹಿಳಾ ಸಬಲೀಕರಣ, ಕೋವಿಡ್ ಕಾಲಘಟ್ಟದಲ್ಲಿ ಸಲ್ಲಿಸಿದ ಅಪೂರ್ವ ಸಮಾಜಿಕ ಸೇವೆಯನ್ನು ಗುರುತಿಸಿ ದ.ಕ ರೂರಲ್ ಡೆವಲಪ್‌ಮೆಂಟ್ ಸೊಸೈಟಿ (ಡಿಕೆಆರ್‌ಡಿಎಸ್) ಬೆಳ್ತಂಗಡಿ ಸಂಸ್ಥೆಗೆ ರಾಜ್ಯಮಟ್ಟದ ‘ಸೇವಾಸಿಂಧು’ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದರು.
ಸಂಸ್ಥೆಯು ಜಾತಿ, ಧರ್ಮ ನೋಡದೆ ಮಾನವ ಜಾತಿಯೊಂದೇ ನಮಗೆ ಮುಖ್ಯ ಎಂಬ ಭಾವನೆಯಿಂದ ಸೇವೆ ಸಲ್ಲಿಸುತ್ತಿದೆ. ಸಮಾಜದ ಜನತೆ ರಾಜಕೀಯ ರಹಿತವಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳೊಂದಿಗೆ ಕೈಜೋಡಿಸಿ ಸಮಾಜದ ಅಭಿವೃದ್ಧಿಗೆ ಸಹಕರಿಸಬೇಕಿದೆ‌ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದ.ಕ ಜಿಲ್ಲೆ ಮಂಗಳೂರು ಇದರ ಜಿಲ್ಲಾ ಉಪನಿರ್ದೇಶಕ ಟಿ.ಪಾಪಭೋವಿ ಮಾತನಾಡಿ, ಮಾನವ ಹಕ್ಕುಗಳ ಸಮಿತಿ ಮತ್ತು ಡಿಕೆಆರ್‌ಡಿಎಸ್ ಸಂಸ್ಥೆಯು ನೊಂದವರ ಕಣ್ಣೀರು ಒರೆಸುವ ಸೇವೆ ಮಾಡುತ್ತಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರಂತರ ಸಹಾಯ ಮಾಡಲು ಸಿದ್ಧವಿದೆ. ವಿಕಲಾಂಗರಿಗೆ ದ್ವಿಚಕ್ರ ವಾಹನ, ಊರುಗೋಲು ಇನ್ನಿತರ ಸೌಲಭ್ಯ ಇಲಾಖೆಯಲ್ಲಿದ್ದು ಅರ್ಹರಿಗೆ ನೆರವು ನೀಡಲು ಸಿದ್ಧ ಎಂದರು.
ಪ್ರಶಸ್ತಿ ಸ್ವೀಕರಿಸಿದ ಡಿಕೆಆರ್‌ಡಿಎಸ್ ಸಂಸ್ಥೆ ನಿರ್ದೇಶಕ ಫಾ. ಬಿನೋಯ್ ಎ.ಜೆ. ಮಾತನಾಡಿ, ಪ್ರಶಸ್ತಿ ಬಂದಿರುವುದು ಸಂತೋಷವಾಗಿದೆ. ಜೊತೆಗೆ ಜವಾಬ್ದಾರಿಯೂ ಹೆಚ್ಚಿದೆ. 37ವರ್ಷಗಳ ಹಿಂದೆ ಪ್ರಾರಂಭವಾದ ನಮ್ಮ ಸಂಸ್ಥೆಯು ಶೋಷಿತರ, ದುರ್ಬಲ ವರ್ಗದವರ ಸೇವೆಯನ್ನು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಮಾಡುತ್ತಿದೆ. ಯಾವುದೇ ಪ್ರಶಸ್ತಿಯನ್ನು, ಪ್ರಚಾರವನ್ನು ಬಯಸದೇ ನಿಸ್ವಾರ್ಥ ಸೇವೆ ಮಾಡುತ್ತಿದ್ದು ಇಂದು ನಮಗೆ ಸಿಕ್ಕಿದ ಪ್ರಶಸ್ತಿ ನಮ್ಮಂತೆ ಸೇವೆ ಸಲ್ಲಿಸುವ ಎಲ್ಲಾ ಸಂಸ್ಥೆಗಳಿಗೆ ಸಂದ ಗೌರವ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ಉಪಸ್ಥಿತರಿದ್ದರು.
ತಾಲೂಕು ಅಧ್ಯಕ್ಷ ಪಿ.ಸಿ ಸೆಬಾಸ್ಟಿಯನ್ ಸ್ವಾಗತಿಸಿದರು. ತಾ. ಪ್ರಧಾನ ಸಂಯೋಜಕ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಜೇಮ್ಸ್ ಅಬ್ರಾಹಂ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘ, ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

error: Content is protected !!