ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ‌ ಒದೆಯಬೇಡಿ: ಇದು‌ ಸಂಚಾರಿ ‘ಅವಸ್ಥಾಂತರ’

ಬೆಂಗಳೂರು: ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ‌ ಒದೆಯಬೇಡಿ ಹೀಗೆ ವಿಭಿನ್ನ ಟ್ಯಾಗ್ ಲೈನ್ ಜೊತೆ ಸಿನಿಮಾದ ಫಸ್ಟ್ ಲುಕ್ ಅನಾವರಣಗೊಂಡಿದೆ.‌ ರಾಷ್ಟ್ರ ಪ್ರಶಸ್ತಿ ಸಂಚಾರಿ ವಿಜಯ್ ಅವರು ನಟಿಸುತ್ತಿರುವ ಈ ಚಿತ್ರದ ಹೆಸರು ‘ಅವಸ್ಥಾಂತರ’, ವಿಶೇಷ ಅಂದರೆ ಲಾಕ್ ಡೌನ್ ಬಳಿಕ ಸಂಚಾರಿ ವಿಜಯ್ ಅವರು ನಟಿಸಲು ಸಹಿ‌ ಮಾಡಿರುವ ಪ್ರಥಮ ಚಿತ್ರ ಇದಾಗಿದೆ.
ಮಠ ಖ್ಯಾತಿಯ ಗುರುಪ್ರಸಾದ್ ಅವರ ಗರಡಿಯಲ್ಲಿ ಪಳಗಿದ ನಿರ್ದೇಶಕ ಜಿ.ದೀಪಕ್ ಕುಮಾರ್ ಈ ಚಿತ್ರವನ್ನು ‌ನಿರ್ದೆಶಿಸುವ ಮೂಲಕ ಪ್ರಥಮ ಬಾರಿಗೆ ನಿರ್ದೇಶಕನ ಕ್ಯಾಪ್ ಧರಿಸಲಿದ್ದಾರೆ. ಈ ಹಿಂದೆ ಮಲಯಾಳಂನ ಪ್ರಸಿದ್ಧ ನಟ ಮೋಹನ್ ಲಾಲ್ ಮತ್ತು ಮಮ್ಮುಟಿ ಅವರ ಚಿತ್ರಗಳಿಗೆ ಕೆಲಸ ಮಾಡಿದ ಅನುಭವ ಇದೆ. ಜೊತೆಗೆ‌ ಸಾಕಷ್ಟು ಡಾಕ್ಯುಮೆಂಟರಿ ಮತ್ತು ಆಡ್ ಫಿಲ್ಮ್ಸ್ ಮಾಡಿದ್ದಾರೆ.
ಸಿನಿಮಾದಲ್ಲಿ ಹದಿಹರೆಯದ ಯುವಕನೊಬ್ಬನಿಗೆ ತನಗರಿವಿಲ್ಲದೆ ಹುಟ್ಟುವ ಬಯಕೆಗಳು, ಕಾಮನೆಗಳು ಹೇಗೆ ಅವನನ್ನು ಅತಂತ್ರ ಸ್ಥಿತಿಗೆ ತಳ್ಳುತ್ತದೆ ಮತ್ತು ಅದರಿಂದ ಏನೆಲ್ಲಾ ಫಜೀತಿ, ಅವಸ್ಥೆ, ಅನಾಹುತಗಳು ಜರುಗುತ್ತವೆ ಎನ್ನುವುದನ್ನು ತಿಳಿ ಹಾಸ್ಯದ ಮೂಲಕ ಒಂದು ಸಂದೇಶ ಕಟ್ಟಿ ಕೊಡುವ ಪ್ರಯತ್ನವನ್ನು ಸಿನಿಮಾ ಮಾಡಲಿದೆ.
ವಿಭಿನ್ನ ಪಾತ್ರಗಳಲ್ಲಿ ಸಿನಿಮಾಗಳಲ್ಲಿ ಮಿಂಚುವ ಸಂಚಾರಿ ವಿಜಯ್ ಅವರ ಪಾತ್ರ ಹೇಗಿರಲಿದೆ ಎನ್ನುವ ಕುತೂಹಲ ಅವರ ಅಭಿಮಾನಿಗಳು ಹಾಗೂ ಸಿನಿ ಪ್ರೇಮಿಗಳಲ್ಲಿ ಮೂಡಿದೆ. ಅಂದಹಾಗೆ ಡಿಸೆಂಬರ್ ಕೊನೆಯ ವಾರದಲ್ಲಿ ‘ಅವಸ್ಥಾಂತರ’ ಚಿತ್ರೀಕರಣ ಪ್ರಾರಂಭವಾಗಲಿದೆ.

error: Content is protected !!