ಉಪ್ಪಿನಂಗಡಿ: ಸಾಮಾಜಿಕ ಜಾಲತಾಣದ ಮೂಲಕ ಹುಡುಗಿಯರನ್ನು ಬಲೆಗೆ ಬೀಳಿಸಿಕೊಂಡು ಮೋಸ ಮಾಡುವ ಘಟನೆಗಳು ನಡೆಯುತ್ತಲೇ ಇವೆ. ಇಂತಹುದೇ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಯುವಕನೊಬ್ಬ ತನ್ನನ್ನು ತಾನು ಹಿಂದು ಎಂದು ಬಿಂಬಿಸಿಕೊಂಡು, ಫೇಸ್‌ಬುಕ್‌ನಲ್ಲಿ ಯುವತಿಯೊಬ್ಬಳಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ, ಆಕೆಯ ಸ್ನೇಹ ಗಳಿಸಲು ಸಫಲನಾಗಿದ್ದ.
ಫೇಸ್‌ಬುಕ್ ನಿಂದ ವಾಟ್ಸ್ಯಾಪ್ ಗೆ ಶಿಫ್ಟ್:
ಯುವಕ ಫೇಸ್‌ಬುಕ್ ನಲ್ಲಿ ಖುಷಿ ಸಂಜು ಸಂಜು ಎಂಬ ಖಾತೆ ತೆರೆದು ಯುವತಿಯನ್ನು ಪರಿಚಯಿಸಿಕೊಂಡಿದ್ದಾನೆ. ಬಳಿಕ ನನಗೆ ಹೆತ್ತವರಿಲ್ಲ, ಉತ್ತಮ ಸ್ನೇಹಿತರನ್ನು ಬಯಸುತ್ತಿದ್ದೇನೆ ಎಂದು ಅನುಕಂಪ ಗಿಟ್ಟಿಸಿಕೊಂಡು ಯುವತಿಯನ್ನು ಸಂಪರ್ಕಿಸಿದ್ದಾನೆ. ಈ ವಿಚಾರ ನಂಬಿದ ಯುವತಿ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ್ದಾಳೆ. ಬಳಿಕ ಯುವಕ ಆಕೆಯ ಬಳಿಯಿಂದ ವಾಟ್ಸ್ಯಾಪ್ ನಂಬರ್ ಪಡೆದುಕೊಂಡು, ವಾಯ್ಸ್ ಮೆಸೇಜ್ ಹಾಗೂ ಮೆಸೇಜ್ ಗಳ ಮೂಲಕ ನಿರಂತರ ಸಂಪರ್ಕದಲ್ಲಿದ್ದ.
ಸುತ್ತಾಡಲು ತೀರ್ಥಯಾತ್ರೆ:
ಯುವಕ ಹಿಂದು ಎಂದು ನಂಬಿದ ಹುಡುಗಿ ನೇರವಾಗಿ ಆತನ ಪರಿಚಯ ಮಾಡಿಕೊಂಡು ಭೇಟಿ ಮಾಡಲು ಹಿಂದು ಧಾರ್ಮಿಕ ಕ್ಷೇತ್ರಕ್ಕೆ ತೆರಳಿದ್ದಾಳೆ. ಆಕೆಯೊಂದಿಗೆ ವಿವಿಧ ದೇಗುಲಗಳಿಗೆ ತೆರಳಿ ತೀರ್ಥಯಾತ್ರೆ ನಡೆಸಿದ್ದಾನೆ.
ಬಣ್ಣ ಬಯಲು ಮಾಡಿದ ಸಾಮಾಜಿಕ ಜಾಲತಾಣ:
ದೇಗುಲ ಭೇಟಿ ಮಾಡಿದ ಸಂದರ್ಭ ಭಾವಚಿತ್ರ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾನೆ. ಈ ವೇಳೆ ಪೋಟೋದಲ್ಲಿ ಹಣೆ ತುಂಬಾ ತಿಲಕ ಇಟ್ಟುಕೊಂಡು ಯುವತಿಯೊಂದಿಗೆ ಫೋಸ್ ಕೊಟ್ಟಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಗಮನಿಸಿ ಕೆಲವರು ಪರಿಶೀಲಿಸಿದಾಗ ಆರೋಪಿ ಮುಸ್ಲಿಂ ಸಮುದಾಯವನು ಎಂದು ತಿಳಿದುಬಂದಿದೆ.
ಸಂಜು ಯಾನೆ ರಫೀಕ್ ಅಲಿಯಾಸ್ ಕನಕರಾಜು:
ಫೋಟೋ ಸಾಮಾಜಿಕ ತಾಣದಲ್ಲಿ ಕಂಡು ಬಂದ ಬಳಿಕ ಫೋಟೋದಲ್ಲಿದ್ದ ಆರೋಪಿ ಯುವಕ, ಕಡಬ ತಾಲೂಕು ಬಂಟ್ರ ಗ್ರಾಮದ ಮರ್ಧಾಳ ಪಾಲತ್ತಡ್ಕ ಮನೆ ನಿವಾಸಿ ಶೇಖ್ ಇಸ್ಮಾಯಿಲ್ ಎಂಬುವರ ಪುತ್ರ ಅಬ್ದುಲ್ ರಜಾಕ್(25) ಎಂದು ತಿಳಿದುಬಂದಿದೆ. ಫೇಸ್ ಬುಕ್ ನಲ್ಲಿ ಖುಷಿ ಸಂಜು ಸಂಜು ಎಂಬ ಖಾತೆ ಹೊಂದಿದ್ದ, ಜೊತೆಗೆ ಕನಕರಾಜು ಎಂಬ ಹೆಸರಿನಲ್ಲಿ ಇನ್ನೊಂದು ನಕಲಿ ಖಾತೆಯನ್ನೂ ಹೊಂದಿರುವುದಾಗಿ ಯುವತಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲು:
ದುರುದ್ದೇಶಪೂರಿತವಾಗಿ ಆರೋಪಿತ ಯುವಕ ಕೃತ್ಯವೆಸಗಿದ್ದಾನೆ, ಸುಳ್ಳು ಹೇಳಿ ವಂಚಿಸಿದ್ದಾನೆ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.