‘ಟ್ಯಾಬ್’ ಮೂಲಕ ವಿದ್ಯಾರ್ಥಿಗಳ ಮನೆ‌-ಮನೆಗೆ ಶಿಕ್ಷಣ: ಡಾ. ಹೆಗ್ಗಡೆ: ಶ್ರೀ ಕ್ಷೇತ್ರದ ವಿನೂತನ ಯೋಜನೆ ‘ಜ್ಞಾನತಾಣ’ ಲೋಕಾರ್ಪಣೆ

ಧರ್ಮಸ್ಥಳ: ಕೋವಿಡ್ ಸಂಘರ್ಷದಿಂದ ಮಕ್ಕಳು ತಂತ್ರಜ್ಞಾನದ ಶಿಕ್ಷಣಕ್ಕೆ ಒಗ್ಗಿಕೊಳ್ಳಬೇಕಾದ ಪರಿಸ್ಥಿತಿ ಇಂದಿನದು. ಈ ಸಮಯದಲ್ಲಿ ಅಂತರ್ಜಾಲ ಶಿಕ್ಷಣ ಪಡೆಯುವಲ್ಲಿ ಗ್ರಾಮೀಣ ಮಕ್ಕಳು ವಂಚಿತರಾಗುತ್ತಿದ್ದಾರೆ. ಇದನ್ನರಿತು ಶ್ರೀ ಕ್ಷೇತ್ರದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನದೀಪ ಕಾರ್ಯಕ್ರಮದಡಿ 10 ಸಾವಿರ ಲ್ಯಾಪ್‌ಟಾಪ್, 20 ಸಾವಿರ ಟ್ಯಾಬ್ ವಿತರಿಸಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಸೋಮವಾರ ಧರ್ಮಸ್ಥಳ ಪ್ರವಚನ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಕರ್ನಾಟಕ ರಾಜ್ಯದ ಗ್ರಾಮೀಣ ವಿದ್ಯಾರ್ಥಿಗಳಿಗೆ ಅಂತರ್ಜಾಲ ಶಿಕ್ಷಣಕ್ಕೊಂದು ಮಾದರಿಯಾಗಿ ಲ್ಯಾಪ್ ಟಾಪ್ ಹಾಗೂ ಟ್ಯಾಬ್ ವಿತರಣೆಯ ‘ಜ್ಞಾನತಾಣ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ಧರ್ಮಸ್ಥಳ ಕ್ಷೇತ್ರದಿಂದ ಅನೇಕ ರೀತಿಯ ಸೇವಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಧುನಿಕವಾದ ಮತ್ತು ಕಾಲಕ್ಕೆ ಅವಶ್ಯಕವಾಗುವಂತಹ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದೇವೆ. ಕೋವಿಡ್-19ರಿಂದ ಜನ ಭಯ ಪಡುವಂತಹ ಈ ಸಮಯದಲ್ಲಿ ನಮ್ಮ ಶಾಲಾ ಮಕ್ಕಳಿಗೆ ಶಿಕ್ಷಣದ ಅವಶ್ಯಕತೆಗಳನ್ನು ಗಮನಿಸಿ ಶಿಕ್ಷಣ ಅವರಿಗೆ ಹೇಗೆ ತಲುಪಿಸಬಹುದು ಎಂಬ ಚಿಂತನೆಯಲ್ಲಿರುವಾಗ ಅಧುನಿಕವಾದ ಈ ಕಾಲದಲ್ಲಿ ಕ್ಷೇತ್ರದಿಂದ ಸ್ಪಂದಿಸಿ ಮನೆಯಲ್ಲಿಯೇ ಕುಳಿತು ಅಂತರ್ಜಾಲ ಮೂಲಕ ಶಿಕ್ಷಣ ಪಡೆಯುವಂತಹ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಏಕಕಾಲದಲ್ಲಿ ರಾಜ್ಯಾದ್ಯಂತ ಜ್ಞಾನತಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಹಿಂದಿನ ಕಾಲದಲ್ಲಿ ಈಗಿನ ಸಮಕಾಲೀನ ಅನೇಕ ಜನರಿಗೆ ಇದು ದುಬಾರಿ ಶ್ರೀಮಂತ ವಸ್ತು, ಅದರಲ್ಲಿ ಇರುವ ವಿಚಾರಗಳು ಕೆಟ್ಟದ್ದು ಎಂಬ ಭಾವನೆ ಇದೆ. ಅದರೆ ಲ್ಯಾಪ್‌ಟಾಪ್, ಟ್ಯಾಬ್ ಗಳನ್ನು ಬಳಸಿ ಜೀವನವನ್ನು ರೂಪಿಸಿಕೊಳ್ಳಬಹುದು, ವ್ಯಕ್ತಿತ್ವ ರೂಪಿಸಿಕೊಂಡು ಶಿಕ್ಷಣವನ್ನು ಪಡೆಯಬಹುದು. ಹೊಸ ತಂತ್ರಜ್ಞಾನದ ಮೂಲಕ 5ರಿಂದ 10ನೇ ತರಗತಿವರೆಗೆ ಪಾಠಗಳನ್ನು ಸಂಯೋಜಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಸಮಚಿಂತನೆ ಜತೆಗೆ ಹೊಸ ಪ್ರಯೋಗಶೀಲತೆ ಹೆಚ್ಚಾಗಲಿದೆ. ಜೀವನ ಅಮೂಲ್ಯವಾದುದು, ರೋಗಕ್ಕೆ ಹೆದರಿ ಮನೆಯಲ್ಲೇ ಕುಳಿತುಕೊಳ್ಳುವ ಬದಲಾಗಿ ನಮ್ಮ ಸೃಜನಶೀಲ ಉಪಕ್ರಮಗಳನ್ನು ಅನುಷ್ಠಾನಕ್ಕೆ ತಂದು ಪ್ರಯೋಗಶೀಲರಾಗಿ ಎಂದರು.


ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಧ.ಗ್ರಾ.ಯೋಜನೆ ಮುಖ್ಯಕಾರ್ಯ‌ ನಿರ್ವಾಹಣಾಧಿಕಾರಿ ಅನಿಲ್ ಕುಮಾರ್, ಪ್ರಾದೇಶಿಕ ನಿರ್ದೇಶಕರಾದ ಶಾಂತಾರಾಮ ಪೈ, ಶ್ರೀಹರಿ, ಜಯಶಂಕರ ಶರ್ಮ, ಜಯರಾಮ ನೆಲ್ಲಿತ್ತಾಯ ನಿರ್ದೇಶಕರಾದ ಚಂದ್ರಶೇಖರ, ಓಂಪ್ರಕಾಶ್ ಉಪಸ್ಥಿತರಿದ್ದರು.
ಗ್ರಾ.ಯೋಜನೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕಿ ಮಮತಾ ರಾವ್ ಪ್ರಸ್ತಾವಿಸಿ, ಸ್ವಾಗತಿಸಿದರು. ಬೆಳ್ತಂಗಡಿ ಯೋಜನಾಧಿಕಾರಿ ಜಯಕರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಗುರುವಾಯನಕೆರೆ ಯೋಜನಾಧಿಕಾರಿ ಯಶವಂತ್ ವಂದಿಸಿದರು.

ಇಂಟರ್ನೆಟ್ ಅವಶ್ಯಕತೆಯಿಲ್ಲ:

ಕೋವಿಡ್ ಸಮಸ್ಯೆಯಿಂದ ಶಾಲೆಗಳು ಮುಚ್ಚಿರುವ ಈ ಸಂದರ್ಭವನ್ನು ಉಪಯೋಗಿಸಿಕೊಂಡು ಗ್ರಾಮೀಣ ಮಕ್ಕಳಲ್ಲಿ ಅಂತರ್ಜಾಲದ ಶಿಕ್ಷಣವನ್ನು ತಿಳಿಸಲು ಮಾಡಿರುವ ಪ್ರಯತ್ನವೇ ‘ಜ್ಞಾನತಾಣ’ ಕಾರ್ಯಕ್ರಮ. ಯೋಜನೆಯ ವತಿಯಿಂದ ಪ್ರಥಮ ವರ್ಷ 20 ಸಾವಿರ ಟ್ಯಾಬ್‌ಗಳು ಹಾಗೂ 10 ಸಾವಿರ ಲ್ಯಾಪ್‌ಟಾಪ್‌ಗಳನ್ನು ಒದಗಿಸಲಿದೆ. ಕಾರ್ಯಕ್ರಮದ ಸಮರ್ಪಕ ಅನುಷ್ಠಾನಕ್ಕಾಗಿ ತರಬೇತಿ ಪಡೆದ 450 ಮಂದಿ ಗೌರವ ಶಿಕ್ಷಕರನ್ನು ಯೋಜನೆ ವತಿಯಿಂದ ನಿಯೋಜಿಸಲಾಗುತ್ತದೆ. ರಾಜ್ಯದ ಸುಮಾರು ಒಂದು ಲಕ್ಷ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅಂತರ್ಜಾಲ ಶಿಕ್ಷಣವನ್ನು ಪ್ರಸಕ್ತ ವರ್ಷ ಒದಗಿಸಲಾಗುತ್ತಿದೆ. 5ನೇ ತರಗತಿಯಿಂದ 10ನೇ ತರಗತಿವರೆಗೆ ಆರು ವರ್ಷಗಳ ಪಠ್ಯಗಳನ್ನು ಕನ್ನಡ ಮಾಧ್ಯಮದಲ್ಲಿ ತಯಾರಿಸಲಾಗಿದ್ದು, ಇದು ಪ್ರೀಲೋಡೆಡ್ ಆಗಿವೆ, ಆದ್ದರಿಂದ ಇಂಟರ್ನೆಟ್‌ನ ಅವಶ್ಯಕತೆ ಇರುವುದಿಲ್ಲ. ಇದನ್ನು ಗ್ರಾಮೀಣ ವಿದ್ಯಾರ್ಥಿಗಳಿಗೆ ಟ್ಯಾಬ್‌ನ ಮೂಲಕ ಸೌಕರ್ಯಗಳನ್ನು ಒದಗಿಸಿ ಕೊಡಲಾಗುತ್ತದೆ. ಆದರೆ ಕಾಲೇಜು ವಿದ್ಯಾರ್ಥಿಗಳಿಗೆ ಅಂತರ್ಜಾಲ ಮೂಲಕ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಲ್ಯಾಪ್ ಟಾಪ್ ಗಳನ್ನು ಕೊಡಲಾಗುತ್ತದೆ ‌ಎಂದು ಧ.ಗ್ರಾ.ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್ ಮಾಹಿತಿ ‌ನೀಡಿದ್ದಾರೆ.

 

error: Content is protected !!