ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಆರ್ಮ್ಸ್​ ಆ್ಯಕ್ಟ್​​ ಅಡಿ ಪ್ರಕರಣ ದಾಖಲು:

 

 

 

ಬೆಳ್ತಂಗಡಿ : ವಿಶೇಷ ತನಿಖಾ ತಂಡದ (ಎಸ್​​ಐಟಿ) ಶೋಧ ಕಾರ್ಯಾಚರಣೆ ವೇಳೆ, ಹೋರಾಟಗಾರ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಎರಡು ತಲವಾರು ಮತ್ತು ಒಂದು ಬಂದೂಕು ಪತ್ತೆಯಾಗಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಎಸ್​​ಐಟಿ ಎಸ್​​ಪಿ ಸಿ.ಎ. ಸೈಮನ್ ಸೆ.16ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ARMS ACT 1959(U/S-25(1),25(1-A),24(1-B)(a)) ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ದೂರಿನ ವಿವರ:

ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹಗಳನ್ನು ಹೂತುಹಾಕಿರುವ ಆರೋಪ ಪ್ರಕರಣದ ತನಿಖೆ ಸಂದರ್ಭದಲ್ಲಿ ಆರೋಪಿತನು ನೀಡಿದ ಹೇಳಿಕೆಯಲ್ಲಿ, ತಾನು ಮಹೇಶ್ ಶೆಟ್ಟಿ ತಿಮರೋಡಿ ಎಂಬಾತನ ಮನೆಯಲ್ಲಿ ತಂಗುತ್ತಿರುವ ಬಗ್ಗೆ ತಿಳಿಸಿದ್ದ. ಅದರಂತೆ ಆ.6ರಂದು ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದು ಪಂಚರು, ಸಿಬ್ಬಂದಿ, ಸೋಕೋ ಅಧಿಕಾರಿಗಳು ಹಾಗೂ ಎಸ್‌ಐಟಿ ತಂಡದ ಸದಸ್ಯರ ಜೊತೆಗೆ ಉಜಿರೆ ಗ್ರಾಮದ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಯನ್ನು ಶೋಧ ನಡೆಸಲಾಗಿದೆ. ಆ ಸಮಯದಲ್ಲಿ ಧರ್ಮಸ್ಥಳ ಪ್ರಕರಣದ ಆರೋಪಿಯ ಬಟ್ಟೆಬರೆಗಳು, ಮನೆಯವರಿಗೆ ಸೇರಿದ ಮೊಬೈಲ್ ಪೋನ್‌ಗಳು, ಲ್ಯಾಪ್​ಟಾಪ್‌ಗಳು ಹಾಗೂ ಮನೆಯಲ್ಲಿದ್ದ ಕಬ್ಬಿಣದ 2 ತಲವಾರು ಹಾಗೂ ಒಂದು ಬಂದೂಕು ಸೇರಿದಂತೆ ಒಟ್ಟು 44 ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದರ ಕುರಿತಂತೆ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.

error: Content is protected !!