ಶಿಶಿಲ ದೇವಳದ ನದಿ ಸುತ್ತಮುತ್ತ ಮೀನುಗಾರಿಕೆ ನಿಷೇಧ: ಕೋಟ ಶ್ರೀನಿವಾಸ ಪೂಜಾರಿ: ಕ್ಷೇತ್ರದ ಅಭಿವೃದ್ಧಿಗೆ ಕ್ರಿಯಾ ಯೋಜನೆ

ಶಿಶಿಲ: ಧಾರ್ಮಿಕತೆ ಮತ್ತು ಮತ್ಸ್ಯ ಸಂಪತ್ತಿಗೂ ಭಾವನಾತ್ಮಕ ಸಂಬಂಧ ಇರುವ ಕ್ಷೇತ್ರವಾದ ಶಿಶಿಲದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ, ಒಂದು ತಿಂಗಳ ಒಳಗಾಗಿ ಬೇಕಾದ ಕ್ರಿಯಾ ಯೋಜನೆ ರೂಪಿಸಲಾಗುವುದು.

ಮುಖ್ಯವಾಗಿ ಈ ಕ್ಷೇತ್ರ ಅಭಿವೃದ್ಧಿಪಡಿಸಲು ಬೇಕಾದ ಯೋಚನೆ, ಯೋಜನೆ ರೂಪಿಸಲಾಗುವುದು. ಸ್ಥಳೀಯ ಶಾಸಕರ ಹಾಗೂ ಜನತೆಯ ಬೇಡಿಕೆಯಂತೆ ಕಪಿಲಾ ನದಿಯ ಎರಡೂ ಬದಿ ಮತ್ಸ್ಯ ವೀಕ್ಷಣೆಗೆ, ವೀಕ್ಷಣಾ ಗ್ಯಾಲರಿ ಮಾಡಬೇಕು ಎಂಬ ಬೇಡಿಕೆಯಿದೆ ಈ ಕುರಿತು ಚಿಂತನೆ ನಡೆಸಿ, ಧಾರ್ಮಿಕ ದತ್ತಿ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಯಿಂದ ಬಿಡುಗಡೆ ಮಾಡಬಹುದಾದ ಅನುದಾನದ ಕುರಿತು ಯೋಚನೆ ಮಾಡಲಾಗುವುದು. ಅದೇ ರೀತಿ ಸಣ್ಣ ನೀರಾವರಿ ಇಲಾಖೆಯಿಂದ ಹೂಳೆತ್ತಲು ಸಾಧ್ಯವಿದೆ, ಅದಕ್ಕೂ ಪ್ರಯತ್ನ ಮಾಡಲಾಗುವುದು. ಮುಖ್ಯವಾಗಿ ಇಂದು ನಾಮಫಲಕ ಅಳವಡಿಸಿ ದೇಗುಲದ 4ಕಿ.ಮೀ. ಸುತ್ತಮುತ್ತ ಮೀನುಗಾರಿಕೆ ನಿಷೇಧಿಸಲಾಗಿದೆ ಮತ್ತು ಸಂರಕ್ಷಣಾ ವಲಯ ಎಂಬುದಾಗಿ ಸರಕಾರದ ಪರವಾಗಿ ಘೋಷಣೆಯನ್ನು ಮೀನುಗಾರಿಕೆ ಇಲಾಖೆ ಪರವಾಗಿ ಮಾಡುತ್ತಿದ್ದೇನೆ ಎಂದು ಮೀನುಗಾರಿಕೆ, ಬಂದರುಗಳು ಹಾಗೂ ಒಳನಾಡು ಜಲಸಾರಿಗೆ, ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.


ಅವರು ಶಿಶಿಲೇಶ್ವರ ದೇಗುಲ ಮಹಾದ್ವಾರ ಹಾಗೂ ದೇಗುಲದ ಬಳಿ ಮತ್ಸ್ಯ ಸಂರಕ್ಷಣಾ ಫಲಕ ಅನಾವರಣಗೊಳಿಸಿ, ಮತ್ಸ್ಯ ಸಂಕುಲದ ವೀಕ್ಷಣೆ ನಡೆಸಿ ಮಾತನಾಡಿದರು.


ಮೀನುಗಾರಿಕೆ ನಿಷೇಧಿಸಿ ಸರಕಾರದಿಂದ ಆದೇಶ ಬಂದಿರುವುದು ಉತ್ತಮ ಬೆಳವಣಿಗೆ. ಪೌರಾಣಿಕ ಕ್ಷೇತ್ರವಾದ ಇಲ್ಲಿನ ಜನರ ಶ್ರದ್ಧೆ, ನಂಬಿಕೆ, ಭಾವನಾತ್ಮಕ ಸಂಬಂಧಗಳಿಗೆ ಸಹಾಯಕವಾಗುವಂತೆ ಆದೇಶವಿದೆ ಅದೇ ರೀತಿ ನೈಸರ್ಗಿಕವಾದ ಈ ಪ್ರದೇಶ ಪ್ರವಾಸೋದ್ಯಮ ತಾಣವಾಗಿ ಬೆಳೆಯಬೇಕಿದೆ. ಈ ಮೂಲಕ ಜಿಲ್ಲೆಯಿಂದ ಹಾಗೂ ರಾಜ್ಯದಿಂದ ಹೊರಗಿನವರು ಇಲ್ಲಿಗೆ ಆಗಮಿಸಿ ಪ್ರವಾಸೋದ್ಯಮ ತಾಣವಾಗಿ ಕ್ಷೇತ್ರ ರೂಪುಗೊಳ್ಳಬೇಕು. ದೇಗುಲಕ್ಕೆ ಅಗತ್ಯವಾಗಿರುವ ಸಂಪರ್ಕರಸ್ತೆ, ಭೋಜನ ಶಾಲೆ, ವಸತಿ ಗೃಹ ಮೊದಲಾದ ಬೇಡಿಕೆಗಳನ್ನು ಈಡೇರಿಸಿ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು. ಶಾಸಕ ಹರೀಶ್ ಪೂಂಜಾ ಅವರು ರಸ್ತೆ ಮೊದಲಾದ ವಿಚಾರಗಳಿಗೆ ರಾಜ್ಯದಲ್ಲೇ ಹೆಚ್ಚು ಅನುದಾನ ಬೆಳ್ತಂಗಡಿಗೆ ಬಿಡುಗಡೆ ಮಾಡಿಸಿಕೊಳ್ಳುತ್ತಿದ್ದು, ಅವರ ಅಭಿವೃದ್ಧಿ ಕಾರ್ಯಗಳಿಗೂ ಕೈಜೋಡಿಸಲಾಗುವುದು ಎಂದರು.


ಕೊರೋನಾದಿಂದ ಧಾರ್ಮಿಕ ದತ್ತಿ ಇಲಾಖೆಗೂ ನಷ್ಟ:
ಜಗತ್ತಿನಲ್ಲಿ ಒಳಿತು ಕೆಡುಕು ಎರಡೂ ಇದೆ. ಕೆಟ್ಟದ್ದನ್ನು ಪ್ರತ್ಯೇಕಿಸಿ ಒಳಿತನ್ನು ಸಮಾಜಕ್ಕೆ ನೀಡಬೇಕಾಗಿದೆ. ಕೆಟ್ಟದ್ದನ್ನು ಪ್ರತ್ಯೇಕಿಸಿ, ಒಳ್ಳೆಯದನ್ನು ವೈಭವೀಕರಿಸಬೇಖಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಮೀನುಗಳಿಗೆ ವಿಷ ಹಾಕುವ ವಿಕೃತರೂ ಇದ್ದಾರೆ, ಆದರೆ ಅದಕ್ಕಿಂತಲೂ ಹೆಚ್ಚಾಗಿ ಸಂರಕ್ಷಣೆ ಮಾಡುವ ಮನೋಭಾವದ ಸಮಾಜ ದೊಡ್ಡ ಮಟ್ಟದಲ್ಲಿ ಇರುವುದು ನಿಜಕ್ಕೂ ಮೆಚ್ಚಬೇಕಾದ ವಿಚಾರ. ಮೀನುಗಳನ್ನು ಸಂರಕ್ಷಣೆ ಮಾಡಬೇಕಾದ ಜವಾಬ್ದಾರಿ ಸರಕಾರಕ್ಕೂ ಇದೆ, ಸಮಾಜಕ್ಕೂ ಇದೆ. ಇಲ್ಲಿನ ಮೀನನ್ನು ದೇವರ ಸಮಾನ ಎಂದು ನಂಬುತ್ತೇವೆ ಆದ್ದರಿಂದ ಜನಸಾಮಾನ್ಯರು ಒಳಿತನ್ನು ಮಾಡುವ ಸಂಕಲ್ಪದೊಂದಿಗೆ ಮೀನುಗಳ ಸಂರಕ್ಷಣೆ ಮಾಡಬೇಕಿದೆ. ಕೊರೋನಾದಿಂದಾಗಿ ಎಲ್ಲಾ ಇಲಾಖೆಗಳಂತೆ ಧಾರ್ಮಿಕ ದತ್ತಿ ಇಲಾಖೆಗೂ ಕೋಟ್ಯಂತ ರೂ. ನಷ್ಟವಾಗಿದೆ. ಆದರೆ ಇಂದು ದೇಗುಲಗಳು ತೆರೆದಿವೆ. ದೇಗುಲಗಳನ್ನು ತೆರೆದಾಗ ಜನ ದೇಗುಲಗಳಿಗೆ ಆಗಮಿಸಲು ಹಿಂಜರಿಯುತ್ತಾರೆ ಎಂದುಕೊಳ್ಳಲಾಗಿತ್ತು. ಆದರೆ ಈಗ ದೇಗುಲಗಳಿಗೆ ಆಗಮಿಸುವ ಭಕ್ತರನ್ನು ಗಮನಿಸಿದಾಗ ದೇವರು ರಕ್ಷಣೆ ಕೊಡುತ್ತಾರೆ ಎಂಬ ಭಾವನೆ ಬಂದಿದೆಯೇನೊ ಎಂಬಂತೆ ಜನ ಸಾಲು ಸಾಲಾಗಿ ಆಗಮಿಸುತ್ತಿದ್ದಾರೆ. ಕೊರೋನಾ ಕಾರಣದಿಂದಾಗಿ, ದೇವರ ಮೇಲಿನ ನಂಬಿಕೆ ಇನ್ನಷ್ಟು ಹೆಚ್ಚಾದಂತೆ ಕಂಡು ಬರುತ್ತಿದೆ ಎಂದರು.


ಸ್ಥಳೀಯರ ಬೇಡಿಕೆ ಈಡೇರಿಕೆ:
ಶಾಸಕ ಹರೀಶ್ ಪೂಂಜ ಮಾತನಾಡಿ,  ಮೀನುಗಾರಿಕೆ ನಿಷೇಧಿಸಿದರೆ ದೇಗುಲದ ಮೀನುಗಳ ಸಂರಕ್ಷಣೆ ಮಾಡಲು ಸಾಧ್ಯ ಎಂಬ ಸ್ಥಳೀಯರ ಆಶಯವನ್ನು ಪರಿಗಣಿಸಿ, ಸರಕಾರದಿಂದ ಬೇಡಿಕೆ ಈಡೇರಿಸಲಾಗಿದೆ. ಅದರಲ್ಲೂ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಈ ಆದೇಶ ಹೊರಡಿಸುವಂತೆ ಮಾಡುವ ಕಾರ್ಯ ಕೋಟಾ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ನಡೆದಿರುವುದು ಸಂತಸ ತಂದಿದೆ. ಸ್ಥಳೀಯರ ಬೇಡಿಕೆ ಈಡೇರಿಸಲು ಕ್ರಮಕೈಗೊಳ್ಳಲಾಗುವುದು ಎಂದರು.


ಹೈಮಾಸ್ಕ್ ದೀಪ ಅಳವಡಿಕೆ:
ಸುಮಾರು 6 ಕಿ.ಮೀ. ಇರುವ ರಸ್ತೆ ಸಂಪರ್ಕ ಕೊಕ್ಕಡ- ಶಿಶಿಲ- ಭೈರಾಪುರ ಸಂಪರ್ಕ ರಸ್ತೆ ಊರಿನ ಜನರ ಗ್ರಾಮಸ್ಥರ ಅಪೇಕ್ಷೆಯಾಗಿದೆ. ಶೀಘ್ರ ಈ ಸಂಪರ್ಕ ರಸ್ತೆ ಈಡೇರಿಸಲು ಸಚಿವರು ಸಹಕಾರ ನೀಡಬೇಕು. ಶಿಬಾಜೆ- ಶಿಶಿಲವೂ ಸಂಪರ್ಕ ರಸ್ತೆಗೂ ಸಹಕಾರ ನೀಡಬೇಕು. ಪ್ರವಾಸೋದ್ಯಮ ಅಭಿವೃದ್ಧಿಯಾದಲ್ಲಿ ಸ್ಥಳೀಯರಿಗೆ ಅನುಕೂಲವಾಗಲಿದೆ. ಹಲವು ಬೇಡಿಕೆಗಳ ಪಟ್ಟಿಯನ್ನು ಸ್ಥಳೀಯರು ನೀಡಿದ್ದು ಬೇಡಿಕೆ ಸಚಿವರ ಮೂಲಕ ಈಡೇರುವ ವಿಶ್ವಾಸವಿದೆ. ನದಿಯ ಹೂಳು ತೆಗೆಸಿ, ಗ್ಯಾಲರಿ ನಿರ್ಮಾಣ ಮಾಡಿಸುವ ಪ್ರಕ್ರಿಯೆ ಆದಷ್ಟು ಶೀಘ್ರ ನಡೆಯಲು ಕ್ರಮಕೈಗೊಳ್ಳಲಾಗುವುದು. ಹಂತ-ಹಂತವಾಗಿ ಅಭಿವೃದ್ಧಿ ನಡೆಸುವ ವಿಶ್ವಾಸವಿದೆ. ಕೂಡಲೇ ಹೈಮಾಸ್ಕ್ ದೀಪ ಅಳವಡಿಕೆ ಮಾಡಲಾಗುವುದು. ಅದೇ ರೀತಿ ದೇಗುಲಕ್ಕೆ ಆಡಳಿತಾಧಿಕಾರಿ ನೇಮಕಕ್ಕೂ ಸಚಿವರ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹರೀಶ್ ಪೂಂಜಾ ತಿಳಿಸಿದರು.
ಕಾಲ್ನಡಿಗೆಯಲ್ಲಿ ಸಾಗಿದ ಸಚಿವರು:
ತಮ್ಮ ಸರಳತೆಯ ಮೂಲಕ ಮನೆಮಾತಾಗಿರುವ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ರಸ್ತೆ ಬದಿ ಮಹಾದ್ವಾರದ ಬಳಿ ಫಲಕ ಅನಾವರಣಗೊಳಿಸಿ, ಬಳಿಕ ದೇಗುಲವರೆಗೂ ನಡೆದುಕೊಂಡೇ ಆಗಮಿಸಿದರು. ಈ ಸಂದರ್ಭದಲ್ಲಿ ನದಿಯ ಸೇತುವೆಯ ಬಳಿಗೆ ಆಗಮಿಸಿ ಮತ್ಸ್ಯ ಸಂಕುಲ ವೀಕ್ಷಣೆ ನಡೆಸಿ ಮಾಹಿತಿ ಪಡೆದರು. ಬಳಿಕ ದೇಗುಲ ಬಳಿಯ ಮತ್ಸ್ಯ ವೀಕ್ಷಣಾ ಸ್ಥಳಕ್ಕೆ ತೆರಳಿ ಮೀನುಗಳಿಗೆ ಆಹಾರ ನೀಡಿ ಕೆಲ ನಿಮಿಷಗಳ ಕಾಲ ವೀಕ್ಷಣೆ ನಡೆಸಿದರು. ಬಳಿಕ ದೇಗುಲಕ್ಕೆ ತೆರಳಿ ಶಿಶಿಲೇಶ್ವರ ಸ್ವಾಮಿಯ ದರ್ಶನ ಪಡೆದರು, ಈ ಸಂದರ್ಭ ದೇಗುಲದ ಆಡಳಿತ ಮಂಡಳಿ ವತಿಯಿಂದ ಸಚಿವರನ್ನು ಗೌರವಿಸಲಾಯಿತು. ಈ ಸಂದರ್ಭ ಶಾಸಕರು, ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಸಚಿವರನ್ನು ಹಿಂಬಾಲಿಸಿದರು. ವಿವಿಧ ಬೇಡಿಕೆಗಳ ಈಡೇರಿಕೆಗೆ ಶಿಶಿಲೇಶ್ವರ ದೇಗುಲದ ಆಡಳಿತ ಮಂಡಳಿ, ಸ್ಥಳೀಯರು, ಸಂಘಟನೆಗಳ ವತಿಯಿಂದ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಸ್ಥಳೀಯರು ವಿವಿಧ ಬೇಡಿಕೆ ಈಡೇರಿಕೆಗೆ ಸಚಿವರಿಗೆ ಮನವಿ ಸಲ್ಲಿಸಿದರು. ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ್, ತಹಶೀಲ್ದಾರ್ ಮಹೇಶ್, ತಾ.ಪಂ. ಅಧ್ಯಕ್ಷೆ ದಿವ್ಯ ಜ್ಯೋತಿ, ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯ್ಕ್, ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಪಾರ್ಶ್ವನಾಥ್, ಮೀನುಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಡಾ. ಸುಶ್ಮಿತಾ, ಶಿಶಿಲ ದೇವಸ್ಥಾನ ಆಡಳಿತಾಧಿಕಾರಿ ಶ್ರೀನಿವಾಸ ಮೂಡಿತ್ತಾಯ ಉಪಸ್ಥಿತರಿದ್ದರು. ಕೃಷಿ ಇಲಾಖೆ ಆಡಳಿತಾಧಿಕಾರಿ ಚಿದಾನಂದ ಹೂಗಾರ್ ಸ್ವಾಗತಿಸಿದರು. ಚಂದ್ರಶೇಖರ್ ವಂದಿಸಿದರು.

error: Content is protected !!