ಬೆಳ್ತಂಗಡಿ: ತೀವ್ರ ಕುತೂಹಲ ಮೂಡಿಸಿರುವ ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಾಳೆ (ನ.7ರಂದು) ನಡೆಯಲಿದೆ. ಮೀಸಲಾತಿ ಅನ್ವಯ ಸಾಮಾನ್ಯ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಾಗಿರುವುದರಿಂದ ರಜನಿ ಕುಡ್ವ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆಯೇ ಎಂಬ ಕುತೂಹಲ ಜನತೆಯಲ್ಲಿ ಮೂಡಿದೆ.
ಈಗಾಗಲೇ ಬಿಜೆಪಿ ಬೆಂಬಲಿತ ಮಹಿಳಾ ಸದಸ್ಯರಾದ ರಜನಿ ಕುಡ್ವಹಾಗೂ ತುಳಸಿ ಕರುಣಾಕರ್ ಇವರ ಹೆಸರು ಚರ್ಚೆಯಲ್ಲಿದ್ದು, ಇವರಲ್ಲಿ ಯಾರಿಗೆ ಅಧ್ಯಕ್ಷ ಸ್ಥಾನ ಒಲಿಯಲಿದೆ ಎಂದು ಕಾದುನೋಡಬೇಕಿದೆ. ರಜನಿ ಕುಡ್ವ ಅವರು ಈಗಾಗಲೇ ಬಿಜೆಪಿಯಲ್ಲಿ ಹಲವಾರು ವರ್ಷಗಳಿಂದ ಗುರುತಿಸಿಕೊಂಡಿದ್ದು, ಬಿ.ಜೆ.ಪಿ. ಮಂಡಲದ ಕಾರ್ಯದರ್ಶಿಯಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅದಲ್ಲದೆ ಈ ಹಿಂದೆ ತುಳಸಿ ಕರುಣಾಕರ್ ಅವರು ಕಾಂಗ್ರೆಸ್ ಬೆಂಬಲಿತರಾಗಿ ಆಯ್ಕೆಯಾಗಿದ್ದರು. ಈ ಬಾರಿ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿ ಜಯಗಳಿದ್ದಾರೆ. ಅಧ್ಯಕ್ಷರಾಗಿ ಯಾರು ಆಯ್ಕೆಯಾಗಲಿದ್ದಾರೆ ಎಂಬ ಕುತೂಹಲಕ್ಕೆ ಆ.7ರ ಮಧ್ಯಾಹ್ನ 1.30ರ ಬಳಿಕ ಫಲಿತಾಂಶ ಪ್ರಕಟವಾದ ಬಳಿಕ ತೆರೆ ಬೀಳಲಿದೆ.
ಎರಡು ವರ್ಷಗಳ ಬಳಿಕ ಆಡಳಿತ ಮಂಡಳಿ ಆಯ್ಕೆ:
ಬೆಳ್ತಂಗಡಿ ಪಟ್ಟಣ ಪಂಚಾಯತ್ ಈಗಾಗಲೇ ಒಟ್ಟು 11 ವಾರ್ಡ್ ಗಳನ್ನು ಹೊಂದಿದ್ದು, ಅದರಲ್ಲಿ 7 ಬಿ.ಜೆ.ಪಿ. ಬೆಂಬಲಿತ ಸದಸ್ಯರು ಹಾಗೂ 4 ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿರುತ್ತಾರೆ. 2018ರ ಅಕ್ಟೋಬರ್ 28ರಂದು ಚುನಾವಣೆ ನಡೆದಿದ್ದು, ಅ. 31ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿತ್ತು. 2 ವರ್ಷ 7 ದಿನಗಳ ಬಳಿಕ ಪಟ್ಟಣ ಪಂಚಾಯತ್ ಆಡಳಿತ ಮಂಡಳಿ ಆಯ್ಕೆ ನಡೆಯುತ್ತಿದೆ. ಚುನಾವಣೆ ನಡೆದಿದ್ದರೂ ನ್ಯಾಯಾಲಯದಿಂದ ಮೀಸಲಾತಿ ಕುರಿತು ತಡೆಯಾಜ್ಞೆ ಬಂದಿದ್ದರಿಂದ ಆಯ್ಕೆ ಪ್ರಕ್ರಿಯೆ ತಡವಾಗಿದೆ. ಹಿಂದೊಮ್ಮೆ ಮೀಸಲಾತಿ ಪ್ರಕಟವಾಗಿತ್ತು, ಬಳಿಕ ಮತ್ತೆ ಮೀಸಲಾತಿ ಪ್ರಕಟಗೊಂಡ ಬಳಿಕ ಸಾಮಾನ್ಯ ಮಹಿಳೆಗೆ ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯಕ್ಕೆ ಮೀಸಲಾಗಿದೆ.
ನೂತನ ಅಧ್ಯಕ್ಷರಿಗೆ ಸಾಲು ಸಾಲು ಸವಾಲುಗಳು:
ಅಧ್ಯಕ್ಷರಾಗಿ ಯಾರೇ ಆಯ್ಕೆಯಾದರೂ ಸವಾಲುಗಳು ಮಾತ್ರ ಸಾಲು ಸಾಲಾಗಿ ಕಾದು ಕುಳಿತಿವೆ. ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾರ್ಯಗಳನ್ನು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಹೇಗೆ ನಿಭಾಯಿಸುತ್ತಾರೆ ಎಂದು ಸಾರ್ವಜನಿಕರಲ್ಲಿ ಕುತೂಹಲ ಮೂಡಿದೆ. ಮುಖ್ಯವಾಗಿ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡದಿರುವುದರಿಂದ, ನಿತ್ಯ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕಿದೆ. ಒಳಚರಂಡಿ ವ್ಯವಸ್ಥೆ, ರಸ್ತೆ ನಿರ್ವಹಣೆ, ಕುಡಿವ ನೀರಿನ ವ್ಯವಸ್ಥೆ ಮೊದಲಾದ ಮೂಲ ಸೌಕರ್ಯಗಳನ್ನು ಒದಗಿಸಬೇಕಾದ ಸಾಲು ಸಾಲು ಸವಾಲುಗಳು ಇವೆ.
ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿವೆ. ಆದ್ದರಿಂದ ಅಧ್ಯಕ್ಷರಾಗುವವರು ಈ ಸವಾಲುಗಳನ್ನು ಸ್ವೀಕರಿಸಿ ಉತ್ತಮ ಕಾರ್ಯಗಳನ್ನು ಮಾಡಿದಲ್ಲಿ ಮಾತ್ರ ಜನಮನ ಗೆಲ್ಲಲು ಸಾಧ್ಯವಿದೆ.
ಯಾರೇ ಅಧ್ಯಕ್ಷರಾಗಿ ಆಯ್ಕೆಯಾಗಲಿ, ಅಭಿವೃದ್ಧಿ ಕಾರ್ಯಗಳನ್ನು ಮಾಡಲಿ ಎನ್ನುವುದಷ್ಟೇ ಪ್ರಜಾಪ್ರಕಾಶ ತಂಡದ ಆಶಯ.