ಪುತ್ತೂರು: ಆಸ್ಪತ್ರೆಯ ಬಿಲ್ ಕಟ್ಟಲು ಕೂಡಿಟ್ಟಿದ್ದ ಹಣ ನಾಪತ್ತೆಯಾಗಿ, ಪೌರಕಾರ್ಮಿಕರ ಶ್ರಮದ ಫಲವಾಗಿ ಡಂಪಿಂಗ್ ಯಾರ್ಡ್ ನಲ್ಲಿ ಪತ್ತೆಯಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಹಣವನ್ನು ಹುಡುಕಿ ತೆಗೆದು, ಸಂಬಂಧಪಟ್ಟವರಿಗೆ ಹಸ್ತಾಂತರಿಸಿದ ಪೌರ ಕಾರ್ಮಿಕರ ನಡೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ವ್ಯಕ್ತಿಯೊಬ್ಬರು ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಿಂದ ಬಿಡುಗಡೆ ಹೊಂದುವ ನಿರೀಕ್ಷೆ ಇದ್ದುದರಿಂದ ಕೂಡಿಟ್ಟಿದ್ದ ಹಣದ ಕಟ್ಟನ್ನು ಮನೆಯಿಂದ ತರಿಸಿ, ತಮ್ಮ ಪ್ಯಾಂಟ್ ಒಂದರ ಜೇಬಿನಲ್ಲಿ ಇಟ್ಟಿದ್ದರು. ಆದರೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಹೊಂದುವ ಸಂದರ್ಭ ಹಣ ಇಟ್ಟಿದ್ದ ಪ್ಯಾಂಟ್ ನಾಪತ್ತೆಯಾಗಿರುವ ವಿಚಾರ ತಿಳಿದುಬಂತು.
ಕಸದ ಬುಟ್ಟಿ ಸೇರಿದ್ದ ಪ್ಯಾಂಟ್!:
ಹಣದ ಕಟ್ಟು ಇಟ್ಟಿದ್ದ ಪ್ಯಾಂಟ್ ಆಸ್ಪತ್ರೆಯಲ್ಲಿಯೇ ಇದ್ದು, ಆಸ್ಪತ್ರೆ ಸ್ವಚ್ಛಗೊಳಿಸುವ ಸಂದರ್ಭ ಆಕಸ್ಮಿಕವಾಗಿ ಕಸದ ಬುಟ್ಟಿ ಸೇರಿದೆ. ಈ ಕಸವನ್ನು ಎಂದಿನಂತೆ ನಿತ್ಯ ಕಸ ವಿಲೇವಾರಿ ಮಾಡುವ, ಪೌರ ಕಾರ್ಮಿಕರು ಸಾಗಿಸುವ ದೊಡ್ಡ ಬುಟ್ಟಿಗೆ ಹಾಕಲಾಗಿದೆ. ಆದರೆ ಆ ಕಸದಲ್ಲಿ ಹಣವಿದ್ದ ವಿಚಾರ ಯಾರಿಗೂ ತಿಳಿದಿರಲಿಲ್ಲ. ಹಣದ ಕಟ್ಟು ತಂದವರಿಗೂ ಈ ವಿಚಾರ ಗಮನಕ್ಕೆ ಬಂದಿರಲಿಲ್ಲ. ಆದರೆ ಬಿಲ್‍ಕಟ್ಟುವ ಸಂದರ್ಭ ರೋಗಿಗೆ ಹಣದ ಕಟ್ಟು ಇಟ್ಟಿದ್ದ ವಿಚಾರ ನೆನಪಿಗೆ ಬಂದಿದೆ, ಹಣ ಇಟ್ಟಿದ್ದ ಪ್ಯಾಂಟ್ ಹುಡುಕಾಡಿದಾಗ ಆಸ್ಪತ್ರೆಯಿಂದ ಪ್ಯಾಂಟ್ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಆಸ್ಪತ್ರೆಯನ್ನು ವಿಚಾರಿಸಿದಾಗ ಸ್ವಚ್ಛತೆ ನಡೆಸಿ, ಕಸವನ್ನು ವಿಲೇವಾರಿ ಮಾಡಿದ ವಿಚಾರ ತಿಳಿದುಬಂದಿದೆ.
ಡಂಪಿಂಗ್ ಯಾರ್ಡ್ ಸೇರಿದ್ದ ಹಣದ ಕಟ್ಟು:
ವಿಚಾರ ತಿಳಿಯುವ ಹೊತ್ತಿಗಾಗಲೇ ಆಸ್ಪತ್ರೆಯ ಕಸದ ಕಟ್ಟನ್ನು ನಗರಸಭೆ ಪೌರಕಾರ್ಮಿಕರು ಎಂದಿನಂತೆ ಸಂಗ್ರಹಿಸಿ, ಬನ್ನೂರಿನ ಡಂಪಿಂಗ್ ಯಾರ್ಡ್ ಬಳಿ ಸುರಿದು ಬಿಟ್ಟಿದ್ದರು. ನಿತ್ಯದಂತೆ ಅವರೂ ಕಾರ್ಯನಿರ್ವಹಿಸಿದ್ದರಿಂದ ಯಾರಿಗೂ ವಿಚಾರ ತಿಳಿದಿರಲಿಲ್ಲ.
ಆಂಬ್ಯುಲೆನ್ಸ್ ಚಾಲಕರ ಸಮಯ ಪ್ರಜ್ಞೆಗೆ ಮೆಚ್ಚುಗೆ:
ಆಸ್ಪತ್ರೆಯಿಂದ ಹಣದ ಕಟ್ಟು ಇಟ್ಟಿದ್ದ ಪ್ಯಾಂಟ್ ನಾಪತ್ತೆಯಾಗಿರುವುದು ಆಸ್ಪತ್ರೆ ಸಿಬ್ಬಂದಿ ಗಮನಕ್ಕೆ ಬಂದ ಕೂಡಲೇ ಎಲ್ಲರೂ ಹುಡುಕಾಡುವ ಪ್ರಯತ್ನ ನಡೆಸಿದ್ದಾರೆ. ಅದೇ ರೀತಿ ಆಸ್ಪತ್ರೆಯ ಕಸವನ್ನು ನಗರಸಭೆ ಪೌರಕಾರ್ಮಿಕರು ಎಂದಿನಂತೆ ಸಂಗ್ರಹಿಸಿ, ಸಾಗಿಸಿದ ವಿಚಾರವೂ ತಿಳಿದುಬಂದಿದೆ. ಈ ಸಂದರ್ಭ ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕ ದಯಾನಂದ್ ಅವರು ಕರೆ ಮಾಡಿ ಪೌರಕಾರ್ಮಿಕರಿಗೆ ವಿಚಾರವನ್ನು ತಿಳಿಸುವ ಮೂಲಕ ಸಮಯ ಪ್ರಜ್ಞೆ ಮೆರೆದಿದ್ದು, ಅವರ ಸಮಯಪ್ರಜ್ಞೆಗೂ ಶ್ಲಾಘನೆ ವ್ಯಕ್ತವಾಗಿದೆ.
ತ್ಯಾಜ್ಯದಲ್ಲೂ ಹಣದ ಕಟ್ಟು ಹುಡುಕಿದ ಯಮುನಪ್ಪ, ಸದ್ದಾಂ ಹುಸೇನ್:
ಇತ್ತ ಆಂಬ್ಯುಲೆನ್ಸ್ ಚಾಲಕ ದಯಾನಂದ್ ಅವರ ಕರೆ ಸ್ವೀಕರಿಸಿದ ಪೌರ ಕಾರ್ಮಿಕರಾದ ಯಮುನಪ್ಪ ಹಾಗೂ ಸದ್ದಾಂ ಹುಸೇನ್ ಅವರು ಕಾರ್ಯ ಪ್ರವೃತ್ತರಾಗಿದ್ದಾರೆ. ಹಣವನ್ನು ಸಂಬಂಧಪಟ್ಟವರಿಗೆ ತಲುಪಿಸುವ ಸಲುವಾಗಿ ಹುಡುಕಾಡುವ ಪ್ರಯತ್ನ ನಡೆಸಿದ್ದಾರೆ. ಆದರೆ ಅದಾಗಲೇ ಇಡೀ ಪುತ್ತೂರು ನಗರದ ಕಸವನ್ನು ಸಂಗ್ರಹಿಸಿಕೊಂಡು ಬಂದು ಸುರಿದಿದ್ದರಿಂದ, ಅಷ್ಟೊಂದು ಕಸದ ನಡುವೆ ಹುಡುಕಾಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಆದರೂ ಛಲಬಿಡದೆ ಯಮುನಪ್ಪ ಹಾಗೂ ಸದ್ದಾಂ ಹುಸೇನ್ ಅವರು ಹುಡುಕಾಡಿ ಹಣ ಇಟ್ಟಿದ್ದ ಪ್ಯಾಂಟ್ ಅನ್ನು ಪತ್ತೆ ಹಚ್ಚುವ ಮೂಲಕ, ತಮ್ಮ ನಿಸ್ವಾರ್ಥ ಸೇವೆ ಹಾಗೂ ಪ್ರಾಮಾಣಿಕತೆಯ ಮೂಲಕ ಜನಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಹಣಕ್ಕಾಗಿ ಜನತೆ ಹಲವಾರು ಕುಕೃತ್ಯಗಳನ್ನು ಮಾಡುತ್ತಿರುವ ಅದೆಷ್ಟೋ ನಿದರ್ಶನಗಳನ್ನು ಕಾಣುತ್ತೇವೆ. ಹಣದ ಮೊತ್ತ ಎಷ್ಟೇ ಇರಲಿ, ಪೌರ ಕಾರ್ಮಿಕರು ರೋಗಿಯ ಹಣವನ್ನು ಹುಡುಕಾಡಲು ಮಾಡಿರುವ ಪ್ರಯತ್ನ ಮಾತ್ರ ಶ್ಲಾಘನೀಯ. ಇಂತಹಾ ಪ್ರಾಮಾಣಿಕತೆಯ ವಿಚಾರಗಳು ಜಗತ್ತಿಗೆ ತಿಳಿದು, ಸಾಮಾನ್ಯ ಜನರ ನಡುವೆ ಅಸಮಾನ್ಯರಾಗಿರುವ ಇಂತಹಾ ವ್ಯಕ್ತಿಗಳ ಪ್ರಾಮಾಣಿಕತೆಗೆ ಗೌರವ ನೀಡಬೇಕಾದ ಕರ್ತವ್ಯ ಸಮಾಜದ್ದಾಗಿದೆ. ಹಣವನ್ನು ಹುಡುಕಲು ಪ್ರಾಮಾಣಿಕ ಪ್ರಯತ್ನ ಮಾಡಿದ ಪೌರಕಾರ್ಮಿಕರಿಗೆ ಪ್ರಜಾಪ್ರಕಾಶ ತಂಡದ ಶುಭಾಶಯಗಳು.