ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಹಿಂದೂ ರುದ್ರಭೂಮಿಯ ಸಮಿತಿ ಸದಸ್ಯರ ಆಶಯದಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸುಮಾರು 6 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಕಾರ್ಯವು ನಡೆಯುತ್ತಿದ್ದು, ಈ ನವೀಕರಣ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಧರ್ಮಾಧಿಕಾರಿ ಡಾ.ಡಿ. ವೀರೆಂದ್ರ ಹೆಗ್ಗಡೆಯವರು ಪೂರಕ ಅನುದಾನವಾಗಿ ರೂ. 2.50 ಲಕ್ಷ ಮಂಜೂರಾತಿ ನೀಡಿದ್ದಾರೆ.
ಧರ್ಮಸ್ಥಳ ಪ್ರಾಕ್ತನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಿ. ಹರ್ಷೇಂದ್ರ ಕುಮಾರ್‌ರವರ ಸಲಹೆ ಸೂಚನೆಯಂತೆ ನವೀಕರಣದ ಅಂಗವಾಗಿ ನೂತನ ಸಿಲಿಕಾನ್ ಬಾಕ್ಸ್ ಅಳವಡಿಕೆ, ಶವಕಟ್ಟೆ, ವಿಶ್ರಾಂತಿ ಕೊಠಡಿ, ಮುಖ್ಯ ಕಚೇರಿಗೆ ಟೈಲ್ಸ್ ಅಳವಡಿಕೆ, ನೂತನ ನೀರಿನ ಟ್ಯಾಂಕ್, ನಳ್ಳಿ ವ್ಯವಸ್ಥೆ, ವಿದ್ಯುತ್ತೀಕರಣ, ಕುಳಿತುಕೊಳ್ಳಲು ಸಿಮೆಂಟ್ ಬೆಂಚ್‌ಗಳು ಮುಂತಾದುವುಗಳ ಕಾಮಗಾರಿಗಳು ನಡೆಯುತ್ತಿವೆ.
ಪೂರಕ ಅನುದಾನದ ಮಂಜೂರಾತಿ ಪತ್ರವನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಶ್ರೀಹರಿ, ಇಂಜಿನಿಯರ್ ವಿಶ್ವಜಿತ್ ಅವರು ಧರ್ಮಸ್ಥಳದ ಗ್ರಾ.ಪಂ.ಆಡಳಿತಧಿಕಾರಿ ಡಾ.ಜಯಕೀರ್ತಿ ಜೈನ್, ಪಿ.ಡಿ.ಒ. ಉಮೇಶ್, ಹಿಂದೂ ರುದ್ರಭೂಮಿಯ ಅಧ್ಯಕ್ಷ ಶಂಕರ್ ಕುಲಾಲ್, ಕಾರ್ಯದರ್ಶಿ ಪ್ರೀತಮ್, ಕೋಶಾಧಿಕಾರಿ ಡಿ. ಧರ್ಣಪ್ಪರವರಿಗೆ ಹಸ್ತಾಂತರಿಸಿ ನವೀಕರಣ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ರುದ್ರಭೂಮಿಗೆ ಶ್ರೀಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ 2 ಸೋಲಾರ್ ಲೈಟ್‌ಗಳನ್ನು ಕೊಡುಗೆಯಾಗಿ ನೀಡಿದ್ದು ಧರ್ಮಸ್ಥಳ ಗ್ರಾಮ ಪಂಚಾಯಿತಿ ಸಂಪೂರ್ಣ ಸಹಕಾರದೊಂದಿಗೆ ನವೀಕರಣ ಕಾರ್ಯವು ಲೋಕಾರ್ಪಣೆಗೆ ಸಿದ್ದಗೊಳ್ಳುತ್ತಿದೆ.