ಬೆಳ್ತಂಗಡಿ ಮಂಡಲ ಬಿಜೆಪಿ ಪದಾಧಿಕಾರಿಗಳ ಚುನಾವಣಾ ಪೂರ್ವಭಾವಿ ಸಭೆ

ಬೆಳ್ತಂಗಡಿ: ಅಭಿವೃದ್ಧಿ ಆಶಯ ಮರಿಚೀಕೆಯಾಗಿದ್ದ ಬೆಳ್ತಂಗಡಿ ಕ್ಷೇತ್ರಕ್ಕೆ ಶಾಸಕ ಹರೀಶ್ ಪೂಂಜ ಅವರು ರಾಜ್ಯದ ಎಲ್ಲಾ ಇಲಾಖೆಗಳ ಸಚಿವರ ಹಿಂದೆ ಬಿದ್ದು ಅನುದಾನ ತರಿಸಿಕೊಡುವಲ್ಲಿ ಶಕ್ತರಾಗಿದ್ದಾರೆ. ಅಭಿವೃದ್ಧಿಯ ಕಡೆಗೆ ಗಮನ ನೀಡುವ ಶಾಸಕರನ್ನು ಉಳಿಸಿಕೊಳ್ಳಲು ಬೆಳ್ತಂಗಡಿ ಜನತೆ 47 ಗ್ರಾ.ಪಂ.ಗಳಲ್ಲೂ ಬಿಜೆಪಿ ವಿಜಯಿಶಾಲಿಯಾಗುವಂತೆ ಕಾರ್ಯಕರ್ತರು ಕಠಿಬದ್ಧರಾಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಚಿವ ಸಿ.ಟಿ.ರವಿ ಹೇಳಿದರು.
ಅವರು ಬುಧವಾರ ಗುರುವಾಯನಕೆರೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ನಡೆದ ಬಿಜೆಪಿ ಬೆಳ್ತಂಗಡಿ ಮಂಡಲದ ಗ್ರಾ.ಪಂ. ಚುನಾವಣೆಯ ಪ್ರಯುಕ್ತ ಪದಾಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.
ರಾಜಕಾರಣದಲ್ಲಿ ಯಶಸ್ವಿಯಾಗಬೇಕಾದರೆ ಕೂಡುವ ಲೆಕ್ಕವಿರಬೇಕೇ ವಿನಹಃ, ದೂಡುವ ಲೆಕ್ಕವಿರಬಾರದು. ಈ ಮೂಲಕ ಬೆಳ್ತಂಗಡಿ ವಿಧಾನಸಭೆಯ ಎಲ್ಲಾ ಬೂತ್‌ಗಳಲ್ಲಿ ಪ್ರತಿಯೊಬ್ಬ ಪದಾಧಿಕಾರಿಗಳು ಶಾಸಕ ಹರೀಶ್ ಪೂಂಜ ಅವರ ಅಭಿವೃದ್ಧಿ ಸಾಧನೆ ಜನರಿಗೆ ತಲುಪಿಸಿ. ದೇಶದ ಪರವಾಗಿರುವವರು ಎಲ್ಲರೂ ನಮ್ಮವರು ಎಂದು ಪ್ರತಿ ಬೂತ್ ಮಟ್ಟದಲ್ಲಿ 50 ಮಂದಿಯನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸಿ. 47 ಗ್ರಾ.ಪಂ.ಗಳಲ್ಲಿ 47 ಗ್ರಾ.ಪಂ.ಗಳನ್ನೂ ಬಿಜೆಪಿ ಗೆಲ್ಲುವಂತೆ ಮಾಡಿ ಶಾಸಕ ಹರೀಶ್ ಪೂಂಜ ಅವರನ್ನು ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸಿ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಜನಧನ್, ಆಯುಷ್ಮಾನ್, ಕಿಸಾನ್ ಸಮ್ಮಾನ್ ಇತ್ಯಾದಿ ಯೋಜನೆಗಳ ಮೂಲಕ ಸಬ್‌ಕಾ ಸಾತ್ ಸಬ್ ಕಾ ವಿಕಾಸ್ ಎಂಬ ಧ್ಯೇಯದಂತೆ ಈ ದೇಶದ ಐಕ್ಯತೆಯನ್ನು ಸಾರಿದ್ದರೆ. ಆದರೆ ಸಿದ್ಧರಾಮಯ್ಯನಂತವರು ಶಾದಿ ಭಾಗ್ಯ ಯೋಜನೆ ಒಂದು ಧರ್ಮದ ಕೆಲವು ಜನರಿಗೆ ಮಾತ್ರ ಸೀಮಿತವಾಗಿದೆ. ಅದರ ಹೊರತಾಗಿ ಎಲ್ಲಾ ಬಡವರಿಗೆ ವಿವಾಹ ಭಾಗ್ಯ ಯೋಜನೆ ನೀಡಿದ್ದರೆ ಸಿದ್ಧರಾಮಯ್ಯ ಅವರು ಇಂದಿಗೂ ಜನನಾಯಕನಾಗುತ್ತಿದ್ದರು ಎಂದರು.

ಕಿಯೋನಿಕ್ಸ್ ಅಧ್ಯಕ್ಷ, ಮಂಡಲ ಪ್ರಭಾ ಹರಿಕೃಷ್ಣ ಬಂಟ್ವಾಳ ಮಾತನಾಡಿ ಕಿಯೋನಿಕ್ಸ್ ಅಧ್ಯಕ್ಷ, ಮಂಡಲ ಪ್ರಭಾರಿ ಹರಿಕೃಷ್ಣ ಬಂಟ್ವಾಳ ಮಾತನಾಡಿ, ಯಾವುದೇ ಪಕ್ಷಕ್ಕೆ ಕಾರ್ಯಕರ್ತರೇ ಚೈತನ್ಯ. ಗ್ರಾ.ಪಂ. ಚುನಾವಣೆ ಆತ್ಮನಿರ್ಭರ ಭಾರತ ನಿರ್ಮಿಸುವಲ್ಲಿ ರೂಪುರೇಷೆ ಸಿದ್ಧಗೊಳಿಸಿ, ಪ್ರಧಾನಿ ನರೇಂದ್ರ ಮೋದಿಯವರ ಕನಸು ಸಾಕಾರಗೊಳಿಸಬೇಕಿದೆ. ವ್ಯಕ್ತಿ, ಜಾತಿ, ಧರ್ಮ, ದೇಶದ ಬಗ್ಗೆ ಚರ್ಚೆ ಬಂದಾಗ ನಮಗೆ ಜನ್ಮನೀಡಿದ ದೇಶದ ಬಗ್ಗೆ ಸಂಘಟಿತರಾಗಿ ಎಂದು ಕರೆ ನೀಡಿದರು. ಈ ದೇಶಕ್ಕೆ ಕೃಷ್ಣ ಅರ್ಜುನರಂತೆ ಮೋದಿ, ಅಮಿತ್‌ಶಾ ನಮಗೆ ಸಿಕ್ಕಿದ್ದಾರೆ. ಅವರ ಚೈತನ್ಯ ಕುಂದದಂತೆ ಈ ದೇಶವನ್ನು ನಾವೆಲ್ಲ ಮುನ್ನಡೆಸೋಣ ಎಂದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ಗ್ರಾ.ಪಂ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಸಿ.ಟಿ.ರವಿ ಅವರು ಬೆಳ್ತಂಗಡಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಇದು ತಾಲೂಕಿನ ಕಾರ್ಯಕರ್ತರಿಗೆ ಚೈತನ್ಯ ನೀಡಿದೆ. ಅವರ ಮೂಲಕ ಇಂದು 299 ನೆರೆ ಸಂತ್ರಸ್ತರಿಗೆ ನೆರವು ಹಸ್ತಾಂತರಿಸಿದ್ದೇವೆ. ಕೋವಿಡ್ ಸಂದರ್ಭದಲ್ಲೂ 241 ಬೂತ್‌ಗಳಲ್ಲಿ ಪಕ್ಷದ ಸಂಘಟನೆ ಜತೆಗೆ ಕಾರ್ಯಕರ್ತರ ನೆರವಿನಿಂದ 40 ಸಾವಿರ ನೆರವಿನ ಕಿಟ್ ವಿತರಣೆ ಮಾಡಿದ್ದೇವೆ. ಬೂತ್ ಗೆದ್ದರೆ ದೇಶ ಗೆದ್ದಂತೆ ಎಂದರು.


ನಿವೃತ್ತ ಶಿಕ್ಷಕ ಯುವರಾಜ್ ಜೈನ್, ಕಾಶಿಪಟ್ಣದ ವಿಲಿಯಂ ಮಿನೇಜಸ್, ಮಾಲಾಡಿ ಸುಧಾಕರ ಅಳ್ವ, ಮಡಂತ್ಯಾರು ರಿಚರ್ಡ್ ಟಿ.ರೋಡ್ರಿಗಸ್, ಮಡಂತ್ಯಾರು ಫ್ರಾನ್ಸಿಸ್ ವಿ.ವಿ. ಬಿಜೆಪಿಗೆ ಸೇರ್ಪಡೆಗೊಂಡರು.
ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ಪ್ರಭಾಕರ ಬಂಗೇರ, ಮಂಡಲ ಉಪಾಧ್ಯಕ್ಷ ಕೊರಗಪ್ಪ ನಾಯ್ಕ್, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಜನಾರ್ದನ್ ಉಪಸ್ಥಿತರಿದ್ದರು.
ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಸ್ವಾಗತಿಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಧರ್ಮಸ್ಥಳ ನಿರೂಪಿಸಿದರು. ಸೀತರಾಮ್ ಬೆಳಾಲು ವಂದಿಸಿದರು.

error: Content is protected !!