ಬಾಲಕಿಯ ಪ್ರಾಣ ಕಾಪಾಡಲು ಪಣತೊಟ್ಟ ಆಂಬ್ಯುಲೆನ್ಸ್ ಚಾಲಕರು: ಸೈರನ್ ಕೆಟ್ಟರೂ ಛಲಬಿಡದ ಚಾಲಕ ಮೂಡಿಗೆರೆ ಮಂಜುನಾಥ್ ನಡೆಗೆ ಜನಮೆಚ್ಚುಗೆ

ಬೆಳ್ತಂಗಡಿ: ಅಗ್ನಿ ಆಕಸ್ಮಿಕದಿಂದ ತೀವ್ರ ಗಾಯಗೊಂಡಿದ್ದ ಬಾಲಕಿಯನ್ನು ಕಾಪಾಡಲು ಪಣತೊಟ್ಟ ಮೂಡಿಗೆರೆ ಮೂಲದ ಆಂಬ್ಯುಲೆನ್ಸ್ ಚಾಲಕರ ಪ್ರಯತ್ನ ಹಾಗೂ ಆಂಬುಲೆನ್ಸ್ ಸೈರನ್ ಕೆಟ್ಟು ಹೋದರೂ ದ.ಕ. ಜಿಲ್ಲೆಯ ಆಂಬ್ಯುಲೆನ್ಸ್ ಚಾಲಕರ ಸಮಯೋಚಿತ ಸಹಾಯದಿಂದ ಗಾಯಾಳುವನ್ನು ಯಶಸ್ವಿಯಾಗಿ ಆಸ್ಪತ್ರೆಗೆ ಸೇರಿಸಿದ ಘಟನೆಗೆ ಸಾರ್ವಜನಿಕರಿಂದ ಭಾರೀ ಜನಮೆಚ್ಚುಗೆಗೆ ಪಾತ್ರವಾಗಿದೆ.

ಉಜಿರೆಯಿಂದ ಬಿ.ಸಿ.ರೋಡುವರೆಗೆ ಬೆಳಗ್ಗೆ ವಾಹನದಟ್ಟಣೆಯಿದ್ದರೂ ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ಸ್ವಪ್ರೇರಣೆಯಿಂದ ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸಿ, ಅಂಬ್ಯುಲೆನ್ಸ್ ತ್ವರಿತವಾಗಿ ಸಾಗಲು ಸಹಾಯ ಮಾಡುವ ಮೂಲಕ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿ ಬೀಡು ಹೋಬಳಿಯ ಬಾಲಕಿಯೊಬ್ಬರಿಗೆ ಅಗ್ನಿ ಆಕಸ್ಮಿಕದಿಂದ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿದ್ದು ಆಂಬ್ಯುಲೆನ್ಸ್ ಚಾಲಕ ಮೂಡಿಗೆರೆಯ ಮಂಜುನಾಥ್ ಚೇತನ್ ಅವರು ಮೂಡಿಗೆರೆಯಿಂದ ಕೇವಲ 1 ಗಂಟೆ 45 ನಿಮಿಷದಲ್ಲಿ ಮಂಗಳೂರಿನ ಖಾಸಗೀ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಅದೇ ರೀತಿ ಮೂಡುಗೆರೆಯಿಂದ ದ.ಕ. ಜಿಲ್ಲೆ ಪ್ರವೇಶಿಸುವ ಸಂದರ್ಬ ಸೈರನ್ ಕೆಟ್ಟು ಹೋಯಿತು. ಆದರೂ ಅವರು ಧೃತಿಗೆಡದೆ ಯುವತಿಯನ್ನು ರಕ್ಷಿಸಲೇ ಬೇಕು ಎಂಬ ದೃಡ ನಿರ್ಧಾರದಿಂದ ಆದಷ್ಟು ಶೀರ್ಘವಾಗಿ ಮಂಗಳೂರು ಆಸ್ಪತ್ರೆ ಸೇರಿಸುವ ಪ್ರಯತ್ನ ಮಾಡಿದ್ದಾರೆ.
ಆಂಬ್ಯುಲೆನ್ಸ್ ಚಾಲಕರು, ಸಾರ್ವಜನಿಕರ ಸಹಕಾರ:
ಮಂಜುನಾಥ್ ಅವರ ಆಂಬ್ಯುಲೆನ್ಸ್ ಚಾರ್ಮಾಡಿ ಘಾಟಿ ಇಳಿದ ಕೂಡಲೇ ಸಾರ್ವಜನಿಕರಿಗೆ ಸೈರನ್ ಕೆಟ್ಟು ಹೋಗಿರುವ ವಿಚಾರ ತಿಳಿಯಿತು. ಕೂಡಲೇ ಸಾರ್ವಜನಿಕರೊಬ್ಬರು ತಮ್ಮ ಮಾರುತಿ 800 ಕಾರಿನ ಮೂಲಕ ಉಜಿರೆಯವರೆಗೆ ಆಂಬ್ಯುಲೆನ್ಸ್ ಗೆ ದಾರಿ ಮಾಡಿಕೊಡಲು ಸಹಕರಿಸಿದರು. ಬೆಳ್ತಂಗಡಿಯಿಂದ ಉಜಿರೆಯಿಂದ ಮಡಂತ್ಯಾರು, ಕೊಲ್ಪೆದಬೈಲುವರೆಗೆ ಬೆಳ್ತಂಗಡಿಯ ಆಂಬ್ಯುಲೆನ್ಸ್ ಚಾಲಕ ಜಲೀಲ್, ಬೆಳ್ತಂಗಡಿ ಹಳೆಕೋಟೆಯಿಂದ ಕೊಲ್ಪೆದಬೈಲು ವರೆಗೆ ಗುರುವಾಯನಕೆರೆ ಎಸ್.ಡಿಪಿ.ಐ.ನ ಇಬ್ರಾಹಿಂ ಅವರು ಚಾಲನೆ ಮಾಡುತ್ತಿದ್ದ ಮತ್ತೊಂದು ವಾಹನ ಆಂಬ್ಯುಲೆನ್ಸ್ ಗೆ ಹಿಂಭಾಗ ಹಾಗೂ ಮುಂಭಾಗದಲ್ಲಿ ಸಾಗುವ ಮೂಲಕ ತ್ವರಿತವಾಗಿ ಸಾಗಲು ಸಹಾಯ ಮಾಡಿದ್ದಾರೆ. ಮಡಂತ್ಯಾರು ಬಳಿಯಿಂದ ಶಬೀರ್ ಮಡಂತ್ಯಾರು ಅವರು ಮತ್ತೊಂದು ಆಂಬ್ಯುಲೆನ್ಸ್ ನಲ್ಲಿ ಬಿ.ಸಿ.ರೋಡುವರೆಗೆ ದಾರಿ ಮಾಡಿಕೊಡಲು ಸಹಾಯ ಮಾಡಿದರು. ಬಿ.ಸಿ.ರೋಡು ಬಳಿಯಿಂದ ರಸ್ತೆ ವಿಸ್ತಾರವಾಗಿರುವುದರಿಂದ ಮಂಜುನಾಥ್ ಅವರ ಆಂಬ್ಯುಲೆನ್ಸ್ ಸಾಗಿದೆ. ಬಳಿಕ ಮಂಗಳೂರು ನಗರ ಪ್ರವೇಶಿಸುತ್ತಲೇ ಮಂಗಳೂರಿನ ಗಣೇಶ್ ಆಂಬ್ಯುಲೆನ್ಸ್ ನವರು ದಾರಿ ಮಾಡಿಕೊಡಲು ಪ್ರಯತ್ನಿಸಿದ್ದಾರೆ. ಈ ಮೂಲಕನ ಸೈರನ್ ಕೆಟ್ಟು ಹೋದರೂ ಎಲ್ಲ ಆಂಬ್ಯುಲೆನ್ಸ್ ಚಾಲಕರ ಪ್ರಯತ್ನದ ಫಲವಾಗಿ ಉಜಿರೆಯಿಂದ ಮಂಗಳೂರುವರೆಗಿನ ದಾರಿಯನ್ನು ಕೇವಲ 50 ನಿಮಿಷಗಳಲ್ಲಿ ತಲುಪಲು ಸಾಧ್ಯವಾಗಿದೆ.


ಸಹಾಯಕ್ಕೆ ಬಂದ ಸಂಘ ಹಾಗೂ ವಾಟ್ಸ್ಆ್ಯಪ್ ಗ್ರೂಪ್:
ರಾಜ್ಯದ ಎಲ್ಲಾ ಆಂಬ್ಯುಲೆನ್ಸ್ ಚಾಲಕರಿಗೆ ನೆರವಾಗಲು ಕರ್ನಾಟಕ ಆಂಬ್ಯುಲೆನ್ಸ್ ಡ್ರೈವರ್ಸ್ ಆರ್ಗನೈಸೇಷನ್ ಎಂಬ ಸಂಘ ಹಾಗೂ ವಾಟ್ಸ್ ಆ್ಯಪ್ ಗ್ರೂಪ್ ರಚಿಸಿರುವುದರಿಂದ ತ್ವರಿತವಾಗಿ ದ.ಕ. ಜಿಲ್ಲೆಯ ಆಂಬ್ಯುಲೆನ್ಸ್ ಚಾಲಕರನ್ನು ಸಂಪರ್ಕಿಸಿ, ತ್ವರಿತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂಬುದಾಗಿ ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕ ಮಂಜುನಾಥ್ ಚೇತನ್ ತಿಳಿಸಿದರು.
ಮಾನವೀಯತೆ ದೃಷ್ಟಿಯಿಂದ ಸೇವೆ:
ಘಟನೆ ಕುರಿತು ಪ್ರಜಾಪ್ರಕಾಶ ತಂಡಕ್ಕೆ ಪ್ರತಿಕ್ರಿಯಿಸಿರುವ ಆಂಬುಲೆನ್ಸ್ ಚಾಲಕ ಮಂಜುನಾಥ್ ಚೇತನ್, ಮೂಡಿಗೆರೆಯಲ್ಲಿಯೇ ಬಾಲಕಿಯ ಸ್ಥಿತಿ ಗಂಭೀರವಾಗಿತ್ತು. ಆದಷ್ಟು ಶೀಘ್ರವಾಗಿ ಆಸ್ಪತ್ರೆಗೆ ಅವರನ್ನು ತಲುಪಿಸಿ ಜೀವ ಕಾಪಾಡಬೇಕು ಎಂಬುದು ನನ್ನ ಗುರಿಯಾಗಿತ್ತು. ಚಾರ್ಮಾಡಿ ತಿರುವುಗಳಲ್ಲಿ ಚಾಲನೆ ಕಷ್ಟವಾದರೂ ಬೇಗನೆ ಆಸ್ಪತ್ರೆ ತಲುಪಬೇಕು ಎಂಬ ದೃಷ್ಟಿಯಿಂದ ಚಾಲನೆ ಮಾಡಿದೆ. ಚಾರ್ಮಾಡಿಯಿಂದ ಸಾರ್ವಜನಿಕರು ಹಾಗೂ ಉಜಿರೆ ಬಳಿಯಿಂದ ದ.ಕ. ಜಿಲ್ಲೆಯ ಆಂಬುಲೆನ್ಸ್ ಚಾಲಕರು ಬಾಲಕಿಯನ್ನು ತ್ವರಿತವಾಗಿ ಆಸ್ಪತ್ರೆಗೆ ಸೇರಿಸಲು ನೆರವಾದರು. ಮಾನವೀಯತೆ ದೃಷ್ಟಿಯಿಂದ ಈ ಕಾರ್ಯ ಮಾಡಿದೆ ಎಂಬುದಾಗಿ ತಿಳಿಸುತ್ತಾರೆ.
ತಮ್ಮ ಪ್ರಾಣವನ್ನೂ ಪಣಕಿಟ್ಟು ಇತರರ ಜೀವರಕ್ಷಣೆ ಮಾಡಲು ಪಣತೊಡುವ ವಾರಿಯರ್ಸ್‌ ಗಳಾದ ಆಂಬ್ಯುಲೆನ್ಸ್ ಚಾಲಕರ ಸೇವೆಯನ್ನು ಶ್ಲಾಘಿಸುತ್ತಾ ಅವರನ್ನು ಸಮಾಜ ಗುರುತಿಸುವಂತಾಗಲಿ. ಬಾಲಕಿಯನ್ನು ಶೀಘ್ರ ಆಸ್ಪತ್ರೆಗೆ ತಲುಪಿಸುವಲ್ಲಿ ಸಹಾಯ ಮಾಡಿದ ಸಾರ್ವಜನಿಕರು ಹಾಗೂ ಎಲ್ಲಾ ಆಂಬ್ಯುಲೆನ್ಸ್ ಚಾಲಕರಿಗೆ ಪ್ರಜಾಪ್ರಕಾಶ ತಂಡದ ಪರವಾಗಿ ಬಿಗ್ ಸೆಲ್ಯೂಟ್.

error: Content is protected !!