ಸವಣಾಲು: ಬೆಳ್ತಂಗಡಿ ತಾಲೂಕಿನ ಕೆರೆಕೋಡಿ ಬಳಿಯ ಸುಂದರ ಆಚಾರ್ಯ ಅವರ ಮನೆ ಬಳಿ ಬೃಹತ್ ಗಾತ್ರದ ಉಡ ಬಂದಿದ್ದು, ಮನೆಯವರನ್ನು ಹಾಗೂ ಊರವರನ್ನು ಅಚ್ಚರಿಗೆ ಕೆಡವಿದೆ.
ಸವಣಾಲು ಬಳಿ ಮನೆಯ ಆಸುಪಾಸು ಸಾಮಾನ್ಯವಾಗಿ ಸಣ್ಣ ಗಾತ್ರದ ಉಡಗಳು ಕಾಣಸಿಗುತ್ತವೆ. ಆದರೆ ಈ ಬಾರಿ ದೊಡ್ಡ ಗಾತ್ರದ ಉಡ ಕಂಡುಬಂದಿದ್ದು, ಇಲ್ಲಿಯವರೆಗೆ ಇಷ್ಟು ದೊಡ್ಡ ಉಡವನ್ನು ನೋಡಿಲ್ಲ ಎಂದು ಸುಂದರ ಆಚಾರ್ಯ ಮನೆಯವರು ತಿಳಿಸಿದ್ದಾರೆ.
ಅ.30ರಂದು ಮಧ್ಯಾಹ್ನ ಒಮ್ಮೆ ಇವರ ಮನೆಯ ಬಳಿಗೆ ಬಂದಿದ್ದು ಬಳಿಕ ಸಂಜೆ 4 ಗಂಟೆ ಸುಮಾರಿಗೆ ಮತ್ತೆ ಸುಂದರ ಆಚಾರ್ಯ ಅವರ ಮನೆಯ ಬಳಿ ಸುಳಿದಾಡಿದೆ. ಈ ಸಂದರ್ಭ ಸುಂದರ ಆಚಾರ್ಯ ಅವರ ಪುತ್ರ ರವಿ ಆಚಾರ್ಯ ಅವರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡುವ ಮೂಲಕ ಸೆರೆ ಹಿಡಿದಿದ್ದಾರೆ.
ಮನೆಯ ಬಳಿಗೆ ಬಂದ ಉಡ ನಿಧಾನಕ್ಕೆ ಅಡ್ಡಾಡಿತು, ನಾಯಿ ಇದ್ದ ಗೂಡಿನ ಸಮೀಪ ತೆರಳಿತು. ಬಳಿಕ ಬೇರೆಡೆ ತೆರಳಿತು. ಅದು ಯಾವುದೇ ರೀತಿಯ ಸಮಸ್ಯೆ ಉಂಟು ಮಾಡಿಲ್ಲ. ನಾವೂ ಅದಕ್ಕೆ ಯಾವುದೇ ರೀತಿಯ ಸಮಸ್ಯೆ ನೀಡಿಲ್ಲ. ಜನತೆಯೂ ಯಾವುದೇ ಸಮಸ್ಯೆ ಉಂಟುಮಾಡಬಾರದು ಎಂದು ರವಿ ಆಚಾರ್ಯ ಅವರು ಪ್ರಜಾಪ್ರಕಾಶಕ್ಕೆ ತಿಳಿಸಿದ್ದಾರೆ.
ಏಪ್ರಿಲ್‍ನಿಂದ ಅಕ್ಟೋಬರ್ ಇವುಗಳ ಸಂತಾನೋತ್ಪತ್ತಿ ಸಮಯವಾಗಿದ್ದು, ಹೆಣ್ಣು ಗುಳಿ ತೋಡಿ ಮೊಟ್ಟೆ ಇಡುತ್ತವೆ. ಆದ್ದರಿಂದ ಈ ಉಡ ಮೊಟ್ಟೆ ಇಡಲು ಸುರಕ್ಷಿತ ಜಾಗವನ್ನು ಅರಸಿ ಮನೆಯ ಬಳಿ ಸುಳಿದಾಡಿರುವ ಸಾಧ್ಯತೆ ಇದೆ. ಅಳಿವಿನಂಚಿನಲ್ಲಿರುವ ಈ ಜೀವಿಯನ್ನು ಜನತೆ ಕೊಲ್ಲದೆ, ರಕ್ಷಿಸುವ ಜವಾಬ್ದಾರಿಯನ್ನು ಪ್ರದರ್ಶಿಸಬೇಕು ಎಂಬ ಕಳಕಳಿ ಪ್ರಜಾ ಪ್ರಕಾಶ ತಂಡದ್ದು.
ಉಡ ಕಾಡು ಪ್ರಾಣಿಯಾಗಿದ್ದು, ರೆಪ್ಟೀಲಿಯ ವರ್ಗದ ವೆರಾನಿಡೀ ಕುಟುಂಬಕ್ಕೆ ಸೇರಿದೆ. ಭಾರತದಲ್ಲಿ ಸಾಮಾನ್ಯವಾಗಿ ವೆರಾನಸ್ ಬೆಂಗಾಲೆನ್ಸಿಸ್ ಎಂಬ ಶಾಸ್ತ್ರೀಯ ಹೆಸರಿನ ಉಡಗಳು ಕಂಡುಬರುತ್ತವೆ. ಸಾಮಾನ್ಯವಾಗಿ ಸುಮಾರು 1.75 ಮೀ. ಉದ್ದ ಬೆಳೆಯುತ್ತದೆ. ಇವುಗಳ ಬಾಲವೇ ಸುಮಾರು ಒಂದು ಮೀ. ಉದ್ದ ಬೆಳೆಯುತ್ತದೆ. ಸಾಮಾನ್ಯವಾಗಿ
ಹಸಿರು ಅಥವಾ ಕಂದು ಬಣ್ಣದ ಈ ಉಡಕ್ಕೆ ಅಲ್ಲಲ್ಲಿ ಕಪ್ಪು ಚುಕ್ಕೆಗಳಿರುತ್ತವೆ. ಈ ಜಾತಿಯ ಸರೀಸೃಪ ಸುಲಭವಾಗಿ ಮರಹತ್ತಬಲ್ಲುದು ಮತ್ತು ಈಜಬಲ್ಲುದು. ಇವುಗಳು ಮಾಂಸಾಹಾರಿಯಾಗಿದ್ದು, ತಾನು ಹಿಡಿಯಬಲ್ಲ ಯಾವ ಬಗೆಯ ಪ್ರಾಣಿಯನ್ನಾದರೂ ತಿನ್ನುತ್ತವೆ. ಪಕ್ಷಿಗಳ ಮತ್ತು ಮೊಸಳೆಗಳ ಮೊಟ್ಟೆ, ಏಡಿ, ಸಣ್ಣ ಆಮೆ, ಕೀಟಗಳು ಇವುಗಳ ಆಹಾರ.