ನವದೆಹಲಿ: ಕೊರೊನಾ ನಿಯಂತ್ರಣಕ್ಕೆ ಬಾರದ ಕಾರಣ ಎರಡನೇ ಬಾರಿ ಫ್ರಾನ್ಸ್, ಇಂಗ್ಲೆಂಡ್ ನಲ್ಲಿ ಮತ್ತೆ ಲಾಕ್ಡೌನ್ ಹೇರಲಾಗಿದೆ. ಫ್ರಾನ್ಸ್ ನಲ್ಲಿ ಈಗಾಗಲೇ ಲಾಕ್ ಡೌನ್ ಆರಂಭವಾಗಿದ್ದು, ಡಿ. 1ರವರೆಗೆ ಲಾಕ್ ಡೌನ್ ಇರಲಿದೆ. ಇದು ವಿಸ್ತಾರಣೆಯಾಗುವ ಸಾಧ್ಯತೆಯೂ ಹೆಚ್ಚಾಗಿದೆ.
ಸಾವಿನ ಸಂಖ್ಯೆಯಲ್ಲಿ ಜಗತ್ತಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ 92.12 ಲಕ್ಷ ಸೋಂಕಿತರಿದ್ದು, ಮೃತರ ಸಂಖ್ಯೆ 2.34 ಲಕ್ಷಕ್ಕೆ ಏರಿಕೆಯಾಗಿದೆ. ಸೋಂಕಿತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ 80.88 ಲಕ್ಷ ಪ್ರಕರಣಗಳು ಪತ್ತೆಯಾಗಿದ್ದು, 1.21 ಲಕ್ಷ ಜನರು ಬಲಿಯಾಗಿದ್ದಾರೆ.
ಬ್ರೆಜಿಲ್ ಮೂರನೇ ಸ್ಥಾನದಲ್ಲಿದ್ದು 54.96 ಲಕ್ಷ ಪ್ರಕರಣಗಳು ದಾಖಲಾಗಿವೆ ಮತ್ತು 1.59 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. 4ನೇ ಸ್ಥಾನದಲ್ಲಿ ರಷ್ಯಾ ಇದ್ದು 15.81 ಲಕ್ಷ ಪ್ರಕರಣಗಳಿವೆ, 27 ಸಾವಿರ ಮಂದಿ ಮೃತಪಟ್ಟಿದ್ದಾರೆ.
ಪ್ರಸ್ತುತ ವಿಶ್ವದಾದ್ಯಂತ 4.53 ಕೋಟಿಗೂ ಹೆಚ್ಚು ಜನರಿಗೆ ಕೊರೋನಾ ದೃಢಪಟ್ಟಿದ್ದು, 11.86 ಲಕ್ಷ ಸೋಂಕಿತರು ಮೃತಪಟ್ಟಿದ್ದಾರೆ. ಜಗತ್ತಿನಾದ್ಯಂತ ಒಟ್ಟು 188 ರಾಷ್ಟ್ರಗಳು ಕೋವಿಡ್ ಹೊಡೆತಕ್ಕೆ ಸಿಲುಕಿವೆ. ಧನಾತ್ಮಕ ಅಂಶವೆಂದರೆ ಸೋಂಕಿತರ ಪೈಕಿ 3.29 ಕೋಟಿಗೂ ಹೆಚ್ಚು ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ.
ಕೊರೋನಾ ಸೋಂಕು ಪತ್ತೆಯಾದ ಚೀನಾದಲ್ಲಿ 2019ರ ಡಿಸೆಂಬರ್ನಿಂದ ಈವರೆಗೆ 85,940 ಪ್ರಕರಣಗಳು ಹಾಗೂ 4,634 ಸಾವುಗಳು ವರದಿಯಾಗಿವೆ.
ಒಟ್ಟಿನಲ್ಲಿ ಕೊರೋನಾ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿವೆ ಎಂದು ಜನತೆ ನಿಟ್ಟುಸಿರು ಬಿಡುತ್ತಿರುವ ಸಂದರ್ಭದಲ್ಲೇ ಫ್ರಾನ್ಸ್, ಇಂಗ್ಲೆಂಡ್ ಲಾಕ್ ಡೌನ್ ಆಗುತ್ತಿವೆ ಎಂಬ ವಿಚಾರ ಕಳವಳಕಾರಿಯಾಗಿದೆ.