ಇಳಂತಿಲ: “ಎರಡು ವಾರಕ್ಕೊಮ್ಮೆ ನಲ್ಲಿಯಲ್ಲಿ ಕೇವಲ ಅರ್ಧ ಗಂಟೆ ಅಥವಾ ಹೆಚ್ಚೆಂದರೆ ಒಂದು ಗಂಟೆಗಳ ಕಾಲ ನೀರು ಬರುತ್ತೆ. ಬರುವ ನೀರು ಶುದ್ಧವಾಗಿಲ್ಲ. ಕೆಸರಿನಂತೆ ಕೆಂಪು ಕೆಂಪಾಗಿರುತ್ತೆ, ಕುಡಿಯೋದಕ್ಕೂ ಯೋಗ್ಯವಾಗಿಲ್ಲ. ಸ್ನಾನ ಮಾಡಲು ಬಳಸಿದರೆ ಚರ್ಮ ರೋಗಗಳು ಬರುತ್ತಿವೆ. ಈ ನೀರನ್ನು ಶೌಚಾಲಯಕ್ಕೂ ಬಳಸಲೂ ಸಾಧ್ಯವಿಲ್ಲ. ಆದ್ದರಿಂದ ಬಯಲು ಶೌಚಾಲಯವನ್ನೇ ಅವಲಂಬಿಸಬೇಕಾಗುವ ದಿನ ದೂರವಿಲ್ಲ. ಕುಡಿಯುವ ನೀರಿಗೆ ಊರೆಲ್ಲ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೋನಾದಿಂದಲಾದರೂ ಬದುಕಬಹುದು, ಕೊಳಚೆ ನೀರನ್ನು ಕುಡಿದರೆ ನರಳಿ ಸಾಯುವ ದಿನ ದೂರವಿಲ್ಲ ” ಇದು ಯಾವುದೋ ಉತ್ತರ ಕರ್ನಾಟಕ ಅಥವಾ ಬಯಲುಸೀಮೆ ಭಾಗದ ಜನರ ಗೋಳಲ್ಲ. ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ನೇಜಿಕಾರು, ಪೆರ್ಲಾಪು ಜನರ ದಿನನಿತ್ಯದ ಗೋಳು.
ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಉಪ್ಪಿನಂಗಡಿಯಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ನೇಜಿಕಾರು ಬಳಿಯ ಪೆರ್ಲಾಪು ಜನರಿಗೆ ಇಳಂತಿಲ ಗ್ರಾಮ ಪಂಚಾಯತ್‍ನಿಂದ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಉಪ್ಪಿನಂಗಡಿಯ ನೇತ್ರಾವತಿ ನದಿಯಿಂದ ಪೆರ್ಲಾಪಿಗೆ ಟ್ಯಾಂಕ್ ನೀರು ಹರಿದು ಬರಬೇಕಿದ್ದು, ಸಮರ್ಪಕವಾಗಿ ನೀರು ಪೂರೈಕೆಯಾಗದೆ ಸ್ಥಳೀಯ ಜನತೆ ಹೈರಾಣಾಗಿದ್ದಾರೆ. ಕುಡಿಯುವ ನೀರು ಬಿಡಿ, ಇತರ ದೈನಂದಿನ ಚಟುವಟಿಕೆಗಳಿಗೂ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಪರಿಶಿಷ್ಟ ವರ್ಗದವರ ಕಾಲನಿ ಇದಾಗಿದ್ದರೂ, ಅಧಿಕಾರಿಗಳಿಂದ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ ಎಂಬುದು ಗ್ರಾಮಸ್ಥರ ಆರೋಪ.
ಉಪ್ಪಿನಂಗಡಿ ನದಿಗೆ ಕೋಳಿ ತ್ಯಾಜ್ಯ ಹಾಗೂ ಇತರೆ ತ್ಯಾಜ್ಯಗಳನ್ನು ನೀರಿಗೆ ಬಿಡಲಾಗುತ್ತಿದೆ. ಗ್ರಾಮ ಪಂಚಾಯತ್‍ಗೆ ಈ ಬಗ್ಗೆ ಅರಿವಿದ್ದರೂ, ಅದೇ ನೀರನ್ನು ಸ್ವಚ್ಛಗೊಳಿಸದೆ ಮನೆಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಸ್ಥಳೀಯ ಜನತೆಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಇವುಗಳಿಗೆ ಜನಪ್ರತಿನಿಧಿಗಳು ಹಾಗೂ ಸರಕಾರಿ ಅಧಿಕಾರಿಗಳೇ ನೇರ ಹೊಣೆ ಎಂದು ಪೆರ್ಲಾಪು ಜನರು ಆರೋಪಿಸಿದ್ದಾರೆ.
ಕೆಸರು ತುಂಬಿದ್ದ ಟ್ಯಾಂಕ್ ಸ್ವಚ್ಛತೆ:
ಕುಡಿಯುವ ನೀರು ಸಮರ್ಪಕವಾಗಿ ದೊರೆಯದೆ, ಕೊಳಚೆ ನೀರು ಬರುವುದನ್ನು ಗಮನಿಸಿ ಸ್ಥಳೀಯರು, ಜನಪ್ರತಿನಿಧಿಗಳು ಹಾಗೂ ಗ್ರಾ.ಪಂ. ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಗ್ರಾ.ಪಂ. ಅಧಿಕಾರಿಗಳು ನೀರು ಸಂಗ್ರಹ ಮಾಡುವ ಟ್ಯಾಂಕ್ ಸ್ವಚ್ಛಗೊಳಿಸಲು ಯಾವುದೇ ಕ್ರಮಕೈಗೊಳ್ಳಲಿಲ್ಲ. ಇದನ್ನು ಗಮನಿಸಿದ ಸ್ಥಳಿಯರು ತಾವೇ ಸ್ವಚ್ಛಗೊಳಿಸುವುದಾಗಿ ತಿಳಿಸಿದರು. ಟ್ಯಾಂಕ್‍ಗೆ ಇಳಿದಾಗ ಸುಮಾರು ಅರ್ಧ ಅಡಿಗಳಷ್ಟು ಕೆಸರು ತುಂಬಿಕೊಂಡಿತ್ತು. ಈ ಕೆಸರು ತೆಗೆದು ಸ್ವಚ್ಛತೆಯನ್ನೂ ತಾವೇ ಮಾಡಿದರು. ಸ್ವಚ್ಛತೆಗೆ ಗ್ರಾ.ಪಂ. ಸಂಬಳವನ್ನೇನೋ ನೀಡಿತು. ಆದರೆ ಈ ಊರಿನ ಜನರ ಸಮಸ್ಯೆ ಮಾತ್ರ ಬಗೆಹರಿಯಲಿಲ್ಲ.
ಸಾವಿರಾರು ಮನೆಗಳ ದಾಟಿ ಬರಬೇಕು ನೀರು:
ಉಪ್ಪಿನಂಗಡಿ ಕಡವಿನ ಬಾಗಿಲು ಬಳಿಯಿಂದ ಟ್ಯಾಂಕ್‍ಗೆ ಹೋಗಿ, ನಲ್ಲಿಯಲ್ಲಿ ನೀರು ಬರಬೇಕು. ಈ ಸಂದರ್ಭ ಹಲವು ಗೇಟ್‍ವಾಲ್‍ಗಳನ್ನು, ಸಾವಿರಾರು ಮನೆಗಳನ್ನು ದಾಟಿ ನೀರು ಈ ನೇಜಿಕಾರು, ಪೆರ್ಲಾಪು ಬಳಿ ಬರಬೇಕಿದೆ. ಈ ಭಾಗಕ್ಕೆ ನೀರು ಬಿಡುವ ಸಮಯ ನಿಗದಿಪಡಿಸಿಲ್ಲ. ಸ್ಥಳೀಯರೇ ಹೋಗಿ ಗೇಟ್‍ವಾಲ್ ಬಿಟ್ಟು ನೀರು ಬಿಡಬೇಕಿದೆ. ಸುಮಾರು ಒಂದು ಗಂಟೆಗಳಷ್ಟು ಕಾಲ ಬರುವ ನೀರನ್ನು ಇರುವ ಅಷ್ಟೂ ಮನೆಯವರು ಹಂಚಿಕೊಂಡು ಬಳಸಬೇಕಿದೆ.
ಗ್ರಾ.ಪಂ. ಮಾಜಿ ಅಧ್ಯಕ್ಷರೇ ನೀರ ಗಂಟಿ!:
ನೀರು ಬಿಡಲು ಸರಕಾರದಿಂದ ನೀರಗಂಟಿಗಳನ್ನು ನೇಮಿಸಬೇಕು. ಆದರೆ ಇಲ್ಲಿ ನೀರು ಬಿಡಲು ಯಾರೂ ಇಲ್ಲ ಎಂಬ ನೆಪ ಮಾಡಿಕೊಂಡು ಗ್ರಾ.ಪಂ. ಮಾಜಿ ಅಧ್ಯಕ್ಷ ಇಸುಬು ಪೆದಮ್ಮಲೆ ಅವರೇ ನೀರು ಬಿಡುತ್ತಿದ್ದರು. ಸ್ಥಳೀಯವಾಗಿ 9 ತಿಂಗಳ ಹಿಂದೆ ನೀರಿನ ಸಂಪರ್ಕ ಕಲ್ಪಿಸಲಾಗಿದ್ದು, ಸಮಸ್ಯೆ ಮತ್ತಷ್ಟು ಹೆಚ್ಚಿದೆ. ನೀರು ಪೂರೈಕೆಗೆ ಒತ್ತಾಯಿಸಿದರೆ, ಯಾವಾಗ ನೋಡಿದರೂ ಪಂಪ್ ಸರಿ ಇಲ್ಲ ಎಂಬ ಉತ್ತರ ದೊರೆಯುತ್ತದೆ. ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡರೂ ಚುನಾವಣೆ ಬಳಿಕ ಎಲ್ಲ ನೋಡಿಕೊಳ್ಳುವಾ ಎಂಬ ಮಾತುಗಳು ಕೇಳಿ ಬರುತ್ತಿದೆ. ಹೀಗಾದಲ್ಲಿ ನಮ್ಮ ಸಮಸ್ಯೆಗಳು ಕೊನೆಗೊಳ್ಳುವುದು ಯಾವಾಗ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು.
ಮೂಲ ಸೌಕರ್ಯದಿಂದ ವಂಚಿತ:
ನೀರು ಮಾತ್ರವಲ್ಲ, ರಸ್ತೆಯೂ ಸಮರ್ಪಕವಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸಮೀಪದ ಕೆಲ ಊರುಗಳಿಗೆ ಹೆಚ್ಚು ಅನುದಾನ ಬಿಡುಗಡೆ ಮಾಡಲಾಗಿದೆ. ಪರಿಶಿಷ್ಟ ವರ್ಗದವರ ಮನೆಗಳಿದ್ದರೂ ನಿರ್ಲಕ್ಷ್ಯ ವಹಿಸಲಾಗುತ್ತಿದೆ. 2018-19 ನೇ ಸಾಲಿನಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ. ರಸ್ತೆ ಮಂಜೂರಾಗಿತ್ತು. ಬಳಿಕ ಯಾವುದೇ ಹಣ ಈ ಭಾಗಕ್ಕೆ ಬಿಡುಗಡೆಯಾಗಿಲ್ಲ. ಬಿಡುಗಡೆಯಾಗಿದ್ದರೂ ಯೋಜನೆ ಸಮರ್ಪಕ ರೀತಿಯಲ್ಲಿ ಅನುಷ್ಠಾನಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳೀಯವಾಗಿ ಸಮರ್ಪಕ ವಿದ್ಯುತ್ ಸಂಪರ್ಕವಿಲ್ಲ. ಸಂಜೆ ಬಳಿಕ ಓಡಾಡಲು ಅನುಕೂಲವಾಗಲು ಬೀದಿ ದೀಪದ ವ್ಯವಸ್ಥೆಯಿಲ್ಲ. ಗಿಡಗಂಟಿಗಳಿಂದ ಸ್ಥಳ ಆವೃತವಾಗಿದ್ದು, ಹೆಬ್ಬಾವು ಹಾಗೂ ವಿಷಕಾರಿ ಹಾವುಗಳು ಅಡ್ಡಾಡುತ್ತಿರುತ್ತವೆ. ಆದ್ದರಿಂದ ಸಮರ್ಪಕ ಸೌಲಭ್ಯಗಳಿಲ್ಲದೆ ನಿತ್ಯ ನರಳುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗ್ರಾ.ಪಂ. ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ:
ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಶಾಸಕ ಹರೀಶ್ ಪೂಂಜಾ, ಜಿಲ್ಲಾ ಪಂಚಾಯತ್ ಸದಸ್ಯ ಶಾಹುಲ್ ಹಮೀದ್, ಇಳಂತಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಇಸುಬು ಪೆದಮ್ಮಲೆ, ತಾ.ಪಂ. ಸದಸ್ಯ ಕೃಷ್ಣಯ್ಯ ಆಚಾರ್ಯ ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಸಮಸ್ಯೆ ಬಗೆಹರಿಸಿಲ್ಲ. ಸರಕಾರ ಹಾಗೂ ಜನಪ್ರತಿನಿಧಿಗಳು ನಮ್ಮನ್ನು ನಿರ್ಲಕ್ಷಿಸಿದರೆ, ನಾವೂ ಅವರನ್ನು ನಿರ್ಲಕ್ಷ್ಯ ಮಾಡಬೇಕಾಗುತ್ತದೆ. ಆದ್ದರಿಂದ ಕೂಡಲೇ ನಮ್ಮ ಸಮಸ್ಯೆ ಪರಿಹರಿಸದಿದ್ದಲ್ಲಿ ಮುಂಬರುವ ಗ್ರಾ.ಪಂ. ಚುನಾವಣೆ ಬಹಿಷ್ಕರಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಲತಾಯಿ ಧೋರಣೆ ಆರೋಪ:
ಸ್ಥಳೀಯ ಊರುಗಳಿಗೆ ಲಕ್ಷಗಟ್ಟಲೆ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ. ಆದರೆ ಎಲ್ಲಾ ಜಾತಿ ಮತಗಳ ಜನತೆ ಒಂದಾಗಿ ಬದುಕುತ್ತಿರುವ ಈ ಪೆರ್ಲಾಪು ಪರಿಶಿಷ್ಟ ವರ್ಗದ ಕಾಲನಿಯನ್ನು ಮಾತ್ರ ಅಭಿವೃದ್ಧಿ ಕಾರ್ಯಗಳಿಂದ ದೂರವಿಡುತ್ತಿರುವುದು ಬೇಸರ ತರಿಸಿದೆ. ಇದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಲತಾಯಿ ಧೋರಣೆ ಪ್ರದರ್ಶಿಸುತ್ತಿರುವಂತೆ ಭಾಸವಾಗುತ್ತಿದೆ. ಶಾಸಕರು ಕೆಲ ತಿಂಗಳುಗಳ ಹಿಂದೆ ಭೇಟಿ ನೀಡಿ ಸ್ಥಳೀಯರಿಗೆ ಸ್ಥೈರ್ಯ ತುಂಬಿದ್ದರು. ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನೂ ನೀಡಿದ್ದರು. ಆದರೆ ಅವರೂ ಮೌನವಾಗಿರುವುದು ಬೇಸರ ತರಿಸಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.
ಇನ್ನಾದರೂ ಜನಪ್ರತಿನಿಧಿಗಳು ಎಚ್ಚೆತ್ತು, ಈ ಪ್ರದೇಶದ ಜನರಿಗೆ ರಸ್ತೆ, ನೀರು, ವಿದ್ಯುತ್ ಮೊದಲಾದ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಟ್ಟು, ಜನಸಾಮಾನ್ಯರ ನೋವಿಗೆ ಧ್ವನಿಯಾಗಬೇಕು. ಈ ಮೂಲಕ ಉತ್ತಮ ಸಮಾಜ ನಿರ್ಮಿಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎನ್ನುವುದೇ ಪ್ರಜಾಪ್ರಕಾಶ ತಂಡದ ಆಶಯವಾಗಿದೆ.