‘ಪುಂಡಿ’ ಹಾಡಿಗೆ ಪ್ರೇಕ್ಷಕರು ಫಿದಾ: ಯುವ ಜನತೆಯ ನಿದ್ದೆಗೆಡಿಸಿದ ಸ್ಯಾಂಡಲ್ ವುಡ್ ಹಾಡು

ಬೆಂಗಳೂರು: ‘ಕನಸು ಮಾರಾಟಕ್ಕಿದೆ’ ತಂಡ ತನ್ನ ವಿಭಿನ್ನ ಪ್ರಯತ್ನಗಳ‌ ಮೂಲಕವೇ ಸ್ಯಾಂಡಲ್ ವುಡ್ ನಲ್ಲಿ ಗಮನ ಸೆಳೆಯುತ್ತಿದ್ದು, ಸಿನಿಮಾದ ಟೀಸರ್ ಬಿಡುಗಡೆಯಾಗಿ ಪ್ರೇಕ್ಷಕರಲ್ಲಿ ಸಿನಿಮಾದ ಕುರಿತು ಕುತೂಹಲ ಮೂಡಿಸಿತ್ತು. ಇದೀಗ ಕಾಲೇಜು ಹುಡುಗರಿಗಾಗಿ ರಚಿಸಿರೋ, ‘ಪುಂಡಿ’ ಸಾಂಗ್ ರಿಲೀಸ್ ಆಗಿದ್ದು, ಹದಿಹರೆಯದ ಯುವಕರ ನಿದ್ದೆಗೆಡಿಸಿದೆ.
ಹಾಡನ್ನು ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಬಿಡುಗಡೆ ‌ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಹಾಡಿನಲ್ಲಿ ಪುಂಡಿ‌ ಅಂದ್ರೆ ಏನು? ಪುಂಡಿಯಿಂದ ಆಗುವ ಪರಿಣಾಮಗಳು ಏನು‌ ಅನ್ನೋದನ್ನು ಹಾಸ್ಯಾತ್ಮಕವಾಗಿ ವಿವರಿಸಲಾಗಿದೆ‌. ಬಿಡುಗಡೆಯಾದ 3 ದಿನದಲ್ಲೇ ನಾಡಿನ ಪ್ರೇಕ್ಷಕರ ಮನಗೆದ್ದಿದೆ. ಬೋಧಿ ಮಿಡಿಯಾ ಯೂಟ್ಯೂಬ್ ಚಾನಲ್ ಮೂಲಕ ಹಾಡು ಬಿಡುಗಡೆ ಮಾಡಲಾಗಿದೆ.


ಹಾಡಿನಲ್ಲಿ ‘ಕಾಮಿಡಿ ಕಿಲಾಡಿ’ ಖ್ಯಾತಿಯ ಅನೀಶ್ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳುವ ಜೊತೆಗೆ ಧೀರಜ್ ನೀರುಮಾರ್ಗ ನಗುವಿನ ಕಚಗುಳಿ ಇಟ್ಟಿದ್ದಾರೆ. ಸ್ಯಾಂಡಲ್ ವುಡ್ ನ ಹಿಟ್ ಹಾಡುಗಳನ್ನು ಹಾಡಿರುವ ಶಶಾಂಕ್ ಶೇಷಗಿರಿ, ಸರಿಗಮಪ ಖ್ಯಾತಿಯ ಶ್ರೀಹರ್ಷ, ಶುಭಾ ರಾಘವೇಂದ್ರ ಪುಂಡಿ ಸಾಂಗಿಗೆ ಧ್ವನಿಯಾಗಿದ್ದಾರೆ. ಹಾಡಿಗೆ ಸುಕೇಶ್ ಶೆಟ್ಟಿ ಸಾಹಿತ್ಯವಿದ್ದು, ಯುವಕರ ಪುಂಡಿ ಖಾಯಿಲೆ ಕುರಿತು ವಿವರಣೆಯಿದೆ. ಸಂಗೀತ ನಿರ್ದೇಶಕಿ ಮಾನಸ ಹೊಳ್ಳ ಸ್ಯಾಂಡಲ್ ವುಡ್ ಗೆ ಸಖತ್ ಟ್ರೆಂಡ್ ಹಾಡು ನೀಡಿದ್ದಾರೆ ಎಂಬುದು ಪ್ರೇಕ್ಷಕರ ಅಭಿಪ್ರಾಯ.
ನಾಯಕನಾಗಿ ಪ್ರಜ್ಞೇಶ್‌ ಶೆಟ್ಟಿ ಬಣ್ಣ ಹಚ್ಚಿದ್ದು, ಸ್ವಸ್ತಿಕಾ ಪೂಜಾರಿ ಮತ್ತು ನವ್ಯಾ ಪೂಜಾರಿ ಪ್ರಜ್ಞೇಶ್ ಗೆ ಸಾಥ್ ನೀಡಿದ್ದಾರೆ. ಕಾಲೇಜು ವಿದ್ಯಾರ್ಥಿಯ ಪಾತ್ರವನ್ನು ಪ್ರಜ್ಞೇಶ್ ನಿರ್ವಹಿಸಿದ್ದು, ತ್ರಿಕೋನ ಪ್ರೇಮಕಥೆ ಸಿನಿಮಾದಲ್ಲಿ ಇರಲಿದ್ಯಾ ಅನ್ನೋ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. ಚಿತ್ರಕ್ಕೆ ಮನಃಶಾಸ್ತ್ರ ಉಪನ್ಯಾಸಕರಾಗಿದ್ದ ಸ್ಮಿತೇಶ್ ಎಸ್. ಬಾರ್ಯ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್‍ ಪೂಜಾರಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಜೊತೆಗೆ ಚಿತ್ರಕಥೆ, ಸಂಭಾಷಣೆ ಹಾಗೂ ಸಹ ನಿರ್ದೇಶನದ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ.
ತಾರಾಗಣದಲ್ಲಿ ಹಿರಿಯ ನಟ ಸಿದ್ಲಿಂಗು ಶ್ರೀಧರ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ, ಸೂರ್ಯ ಕುಂದಾಪುರ, ಧೀರಜ್‍ ಮಂಗಳೂರು, ಚಿದಂಬರ ಮೊದಲಾದವರು ನಟಿಸಿದ್ದಾರೆ.
‘ಕನಸು ಮಾರಾಟಕ್ಕಿದೆ’ ಚಿತ್ರವನ್ನು ಮಡಿಕೇರಿಯ ಶಿವಕುಮಾರ್ ನಿರ್ಮಿಸಿದ್ದಾರೆ. ಉಳಿದಂತೆ ಸಂತೋಷ್‍ ಆಚಾರ್ಯ ಗುಂಪಲಾಜೆ ಛಾಯಾಗ್ರಹಣ, ಗಣೇಶ್ ನಿರ್ಚಾಲ್ ಸಂಕಲನ, ವಿ.ನಾಗೇಂದ್ರ ಪ್ರಸಾದ್, ಕವಿರಾಜ್, ‘ಭರ್ಜರಿ’ ಖ್ಯಾತಿಯ ಚೇತನ್‍ ಕುಮಾರ್, ಮಜಾ ಟಾಕೀಸ್ ರೆಮೋ ಅವರ ಸಾಹಿತ್ಯ ಚಿತ್ರಕ್ಕಿದೆ. ಇದಕ್ಕೂ ಮೊದಲು ಗಾಯಕ ವಿಜಯ್ ಪ್ರಕಾಶ್ ಅವರು ಕನಸಿನ ಕುರಿತು ಹಾಡಿದ್ದ ಹಾಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು.
ದಕ್ಷಿಣ ಕನ್ನಡ, ಉಡುಪಿ, ಹಾಸನ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಿದ್ದು, ಚಿತ್ರ ಜ.15ರಂದು ಟಾಕೀಸ್ ಓ.ಟಿ.ಟಿ. ಆಪ್ ಮೂಲಕ ಬಿಡುಗಡೆಯಾಗಲಿದೆ. ಕರಾವಳಿ ಪ್ರತಿಭೆಗಳು ಕನಸಿನ‌ ಮೂಟೆ ಹೊತ್ತು ಸ್ಯಾಂಡಲ್ ವುಡ್ ನಲ್ಲಿ ಛಾಪು ಮೂಡಿಸಲು ತಯಾರಾಗಿದ್ದು, ಚಂದನವನದ ಪ್ರೇಕ್ಷಕರಲ್ಲಿ ಸಿನಿಮಾ ಕುರಿತು ಕುತೂಹಲ ಹೆಚ್ಚಿಸಿದೆ.
ಕನ್ನಡ ಸಿನಿ ಪ್ರೇಕ್ಷಕರು ‘ಕನಸು ಮಾರಟಕ್ಕಿದೆ’ ತಂಡವನ್ನು ಭರ್ಜರಿಯಾಗಿ ಸ್ವಾಗತಿಸಲು ತಯಾರಾಗಿದ್ದಾರೆ.


ಕಾಮಿಡಿ ಕಿಲಾಡಿಗಳು‌ ಖ್ಯಾತಿಯ ರಾಕೇಶ್ ಉಡುಪಿ, ಸೂರ್ಯ ಕುಂದಾಪುರ, ವಿಶ್ವ, ರಘು,‌ ಮಡೆಯನೂರು ಮನು, ಸದಾನಂದ ಮೊದಲಾದವರು ಹಾಡಿನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹ್ಹಾ…. ಇಷ್ಟಕ್ಕೂ ನಿಮ್ಗೆ ಪುಂಡಿ ಅಂದ್ರೆ ಏನು? ಅದು ಹೇಗಿರುತ್ತೇ ಅಂತಾ ಗೊತ್ತಾಯ್ತಾ…?? ಇಲ್ಲ ಅಂದ್ರೆ ಕೂಡ್ಲೇ ಪುಂಡಿ ಹಾಡನ್ನು ನೋಡಿ, ಖುಷಿ ಪಡಿ.

– ಕನಸುಗಳನ್ನು ಹೊತ್ತು, ಚಂದನ ವನಕ್ಕೆ ಮುಂದಡಿಯಿಟ್ಟಿರುವ ‘ಕನಸು ಮಾರಾಟಕ್ಕಿದೆ’ ತಂಡಕ್ಕೆ ‘ಪ್ರಜಾಪ್ರಕಾಶ’ ತಂಡದ ಶುಭಾಶಯಗಳು.

error: Content is protected !!