ಯಾಂತ್ರೀಕರಣ ಭತ್ತ ಬೇಸಾಯ ಕಾರ್ಯಕ್ರಮ ಕರ್ನಾಟಕ ರಾಜ್ಯಾದಾದ್ಯಂತ ಅಳವಡಿಕೆ: ಡಾ.ಎಲ್.ಎಚ್. ಮಂಜುನಾಥ್

ಬೆಳ್ತಂಗಡಿ: ಈ ಬಾರಿ ಧರ್ಮಸ್ಥಳದಲ್ಲಿ ಸಂಪೂರ್ಣ ಯಾಂತ್ರೀಕೃತ ಭತ್ತ ಬೇಸಾಯದ ಪ್ರಾತ್ಯಕ್ಷಿಕೆಯನ್ನು ನಡೆಸಿದ್ದೇವೆ. ಸುಮಾರು 17 ಎಕರೆ ಪ್ರದೇಶದ 8.5 ಎಕರೆ ಜಾಗದಲ್ಲಿ ಸಾಂಪ್ರಾದಾಯಿಕ ಪದ್ಧತಿಯಲ್ಲಿ, ಉಳಿದ 8.5 ಪ್ರದೇಶದಲ್ಲಿ ಯಾಂತ್ರೀಕೃತ ಭತ್ತ ಬೇಸಾಯ ಪ್ರಯೋಗವನ್ನು ಮಾಡಿದ್ದೇವೆ. ಈ ಕಾರ್ಯಕ್ರಮವನ್ನು ಕರ್ನಾಟಕ ರಾಜದಾದ್ಯಂತ ಅಳವಡಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಹೇಳಿದರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ , ಕೃಷಿ ವಿಭಾಗ ಕೇಂದ್ರ ಕಚೇರಿ ಧರ್ಮಸ್ಥಳ ಇದರ ವತಿಯಿಂದ ಕ್ಷೇತ್ರದ ಭತ್ತದ ಗದ್ದೆಗಳಲ್ಲಿ ಯಾಂತ್ರೀಕೃತ ಹಾಗೂ ಸಾಂಪ್ರದಾಯಿಕ ಭತ್ತದ ಬೇಸಾಯ ವಿಧಾನಗಳನ್ನು ಅಳವಡಿಸಿ, ಅಧ್ಯಯನ ನಡೆಸಿ, ಅನುಷ್ಠಾನಗೊಳಿಸಿದ ಕ್ಷೇತ್ರದ ದೇವಳದ ಹಿಂಭಾಗದ ಗದ್ದೆಯಲ್ಲಿ ಭತ್ತದ ಕಟಾವು ಕಾರ್ಯದ ಕುರಿತು ಮಾಹಿತಿ ನೀಡಿದರು.

ಯಾಂತ್ರೀಕೃತ ಪದ್ಧತಿ ಅಳವಡಿಸಿಕೊಂಡು ನಾಟಿ ಮಾಡಿ ಕೊಯ್ಲು ಯಂತ್ರಗಳ ಮೂಲಕ ಗಂಟೆಗೆ ಒಂದು ಎಕರೆಯಷ್ಟು ಪ್ರದೇಶದ ಕೊಯ್ಲನ್ನು ಕಟಾವು ಮಾಡಬಹುದು. ಕಾರ್ಮಿಕರ ಸಮಸ್ಯೆಯಿಂದ ತೊಂದರೆಗೊಳಗಾಗುತ್ತಿರುವ ಈ ಸಮಯದಲ್ಲಿ ಯಾಂತ್ರೀಕೃತ ಬೇಸಾಯ ಮಾಡಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಬಹುದಾಗಿದೆ. ಧರ್ಮಸ್ಥಳದಲ್ಲಿ ಮಾಡಿದ ಈ ಪ್ರಯೋಗದಿಂದ ಸಾಂಪ್ರದಾಯಿಕ ಬೇಸಾಯ ಪದ್ಧತಿಯಲ್ಲಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ 21 ಸಾವಿರ ರೂಪಾಯಿ ವೆಚ್ಚ ತಗಲುತ್ತದೆ. ಅದರೆ ಯಾಂತ್ರೀಕೃತ ಪದ್ಧತಿಯಲ್ಲಿ ಒಂದು ಎಕರೆಗೆ 13 ಸಾವಿರ ವೆಚ್ಚ ತಗಲುತ್ತದೆ. ಸಾಂಪ್ರದಾಯಿಕ ಪದ್ಧತಿಗಿಂತ ಯಾಂತ್ರೀಕೃತ ಪದ್ಧತಿಯಲ್ಲಿ 7 ಸಾವಿರದ ತನಕ ಖರ್ಚು ಉಳಿಕೆಯಾಗಲಿದೆ ಎಂದರು.

ಯಾಂತ್ರೀಕೃತ ಪದ್ಧತಿಯಿಂದ ಬೆಳೆ ಕೂಡ ಉತ್ತಮ ರೀತಿಯಲ್ಲಿ ಬಂದಿದೆ. ಯಾಂತ್ರೀಕೃತ ಪದ್ದತಿಯಿಂದ ಇಳುವರಿ ಹೆಚ್ಚು ಪಡೆದು ಲಾಭ ಹೆಚ್ಚು ಪಡೆಯಬಹುದು. ಸಾಂಪ್ರದಾಯಿಕ ಪದ್ಧತಿಯಲ್ಲಿ ಖರ್ಚು ಜಾಸ್ತಿ ಇಳುವರಿಯೂ ಕಡಿಮೆ. ಅದರೆ ಈ ಬಾರಿ ಹೆಚ್ಚು ಮಳೆ ಬಂದಿರುವುದರಿಂದ ರೈತರ ಸ್ಪಂದನೆ ಸ್ವಲ್ಪ ಕಡಿಮೆಯಾಗಿದೆ. ಅದರೆ ಮುಂದಿನ ದಿನಗಳಲ್ಲಿ ರೈತರು ಯಾಂತ್ರೀಕೃತ ಪದ್ಧತಿ ಕುರಿತು ಉತ್ತಮ ರೀತಿಯಲ್ಲಿ ಸ್ಪಂದಿಸುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭ ಯಂತ್ರಶ್ರೀ (ಸಿಎಚ್‌ಎಸ್‌ಸಿ) ಯೋಜನಾಧಿಕಾರಿ ಸುಧೀರ್ ಜೈನ್, ಪ್ರಬಂಧಕ ಸಚಿನ್, ಸಕೇಂದ್ರ ಕಚೇರಿ ಯೋಜನಾಧಿಕಾರಿ ಸುದರ್ಶನ್, ಕೃಷಿ ವಿಭಾಗ ಮೇಲ್ವಿಚಾರಕ ಹರಿಪ್ರಸಾದ್, ವಲಯ ಮೇಲ್ವಿಚಾರಕ ಪ್ರಶಾಂತ್, ಕ್ಷೇತ್ರದ ತೋಟಗಾರಿಕ ಮೇಲ್ವಿಚಾರಕ ರಾಜೇಂದ್ರ ರೈ, ಒಕ್ಕೂಟದ ಅಧ್ಯಕ್ಷೆ ಶಾಂತ ಶೆಟ್ಟಿ, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

error: Content is protected !!