ಬೆಳ್ತಂಗಡಿ: ಚಾರ್ಮಾಡಿ ಗ್ರಾಪಂ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ನಡ್ತಿಲು,ನಳಿಲು,ಅನ್ನಾರು ಪ್ರದೇಶಗಳಲ್ಲಿ ಮಂಗಳವಾರ ರಾತ್ರಿ ಮರಿಯಾನೆ ಸಹಿತ ೬ ಕಾಡಾನೆಗಳು ಸ್ಥಳೀಯರಿಗೆ ಕಂಡುಬಂದಿವೆ.
ಸುಮಾರು ೨೦ರಷ್ಟು ಕೃಷಿ ಕುಟುಂಬಗಳಿರುವ ಇಲ್ಲಿ ಯಾವುದೇ ಹಾನಿ ಮಾಡದ ಕಾಡಾನೆಗಳು ಪರಿಸರದ ಸಮೀಪದ ಕಾಡಿನಲ್ಲಿ ಬೀಡು ಬಿಟ್ಟಿವೆ. ಈ ಬಗ್ಗೆ ಬುಧವಾರ ಮಾಹಿತಿ ತಿಳಿದ ಅರಣ್ಯ ಇಲಾಖೆಯು ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ನಿರ್ದೇಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಭವಾನಿ ಶಂಕರ್, ಅರಣ್ಯ ವೀಕ್ಷಕ ಪಾಂಡುರಂಗ ಹಾಗೂ ಸ್ಥಳೀಯರ ಸಹಕಾರದಲ್ಲಿ ಪಟಾಕಿ ಸಿಡಿಸುವ ಮೂಲಕ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆಯಲ್ಲಿ ತೊಡಗಿದೆ. ಇತ್ತೀಚೆಗೆ ಇದೇ ಪ್ರದೇಶದಲ್ಲಿ ಚಿರತೆ ಕೂಡ ಹೆದ್ದಾರಿ ಬದಿ ಕಂಡು ಬಂದಿತ್ತು.