ಧರ್ಮಸ್ಥಳ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯ ವ್ಯಕ್ತಿಗಳಿಗೆ, ಸಂಘ ಸಂಸ್ಥೆಗಳಿಗೆ ಪ್ರತಿ ವರ್ಷವೂ ರಾಜ್ಯ ಸರಕಾರವು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸುತ್ತಿದ್ದು, ಪ್ರಸ್ತುತ ವರ್ಷ ೨೦೨೦-೨೧ನೇ ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಬೆಳ್ತಂಗಡಿ ತಾಲೂಕಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಆಯ್ಕೆಯಾಗಿದೆ.
ಹೇರಳ ಹಣ ವೆಚ್ಚಮಾಡಿ ಹೊಸ ದೇವಸ್ಥಾನಗಳ ನಿರ್ಮಾಣಕ್ಕಿಂತ ಐತಿಹಾಸಿಕ ಹಿನ್ನೆಲೆಯ ಪುರಾತನ ದೇಗುಲಗಳ ರಕ್ಷಣೆಯ ಕಾರ್ಯ ಹೆಚ್ಚು ಮಹತ್ವಪೂರ್ಣವಾದದ್ದು ಎಂಬ ಆಶಯದೊಂದಿಗೆ ೧೯೯೧ ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷರಾಗಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಪ್ರಾರಂಭಿಸಲಾಯಿತು.
ಕ್ರಿ.ಶ.೧೧ ನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಿಸಲ್ಪಟ್ಟ ರಾಷ್ಟ್ರಕೂಟ ವಾಸ್ತುಶಿಲ್ಪ ಶೈಲಿಯನ್ನು ಹೊಂದಿರುವ ರಾಣೆಬೆನ್ನೂರಿನ ಹಿರೇಮಾಗನೂರು ಗ್ರಾಮದ ಶ್ರೀ ಕಲ್ಲೇಶ್ವರ ದೇವಸ್ಥಾನ, ಕ್ರಿ.ಶ. ೧೦ನೇ ಶತಮಾನದ ರಾಷ್ಟ್ರಕೂಟರ ಶಿಲ್ಪಿ ಶೈಲಿಯ ಹಾನಗಲ್‌ನ ಎಳವಟ್ಟಿಯ ಶ್ರೀರಾಮಲಿಂಗೇಶ್ವರ ದೇವಸ್ಥಾನ, ಕ್ರಿ.ಶ.೧೧ನೇ ಶತಮಾನದ ನಿರ್ಮಿತವಾದ ರಾಷ್ಟ್ರಕೂಟ ಹಾಗೂ ಹೊಯ್ಸಳ ಶಿಲ್ಪ ಶೈಲಿಯ ಬ್ಯಾಡಗಿಯ ಮುತ್ತೂರಿನ ಕಲ್ಲೇಶ್ವರ ದೇವಸ್ಥಾನ ಸೇರಿದಂತೆ ಇನ್ನೂರಕ್ಕೂ ಹೆಚ್ಚು ಐತಿಹಾಸಿಕ, ಪುರಾತನ ದೇವಾಲಯಗಳು ಜೀರ್ಣೋದ್ಧಾರಗೊಂಡಿದೆ.
ಜೀರ್ಣಾವಸ್ಥೆಯಲ್ಲಿರುವ ಹೆಚ್ಚಿನ ಸ್ಮಾರಕಗಳು ಗ್ರಾಮೀಣ ಪ್ರದೇಶದಲ್ಲಿದ್ದು ಸ್ಥಳೀಯರ ಆರ್ಥಿಕ ಸಮಸ್ಯೆ, ಅನುಭವಿ ಕೆಲಸಗಾರರ ಕೊರತೆ ಇತ್ಯಾದಿ ಹತ್ತು ಹಲವು ಕಾರಣಗಳಿಂದ ನಶಿಸಿ ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ತೀರಾ ಶಿಥಿಲಗೊಂಡು ಪುನರ್ ನಿರ್ಮಾಣ ಅಸಾಧ್ಯವೆನ್ನುವ ಸ್ಥಿತಿಯ ಪ್ರಾಚೀನ ಸ್ಮಾರಕಗಳನ್ನು ಸಂಸ್ಥೆ ಗುರುತಿಸಿ, ಅನುಭವೀ ಕುಶಲಕರ್ಮಿಗಳ ಮುಖಾಂತರ ಕಡಿಮೆ ವೆಚ್ಚದಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿರುವ ಸರ್ಕಾರೇತರ ಸಾರ್ವಜನಿಕ ಸಂಸ್ಥೆ. ಐತಿಹಾಸಿಕ ಹಿನ್ನೆಲೆಯ ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾರ್ಯವನ್ನು ಸರ್ಕಾರ ಮತ್ತು ಸಾರ್ವಜನಿಕರ ಸಹಬಾಗಿತ್ವದೊಂದಿಗೆ ನಿರ್ವಹಿಸುತ್ತಿರುವ ದೇಶದಲ್ಲಿಯೇ ಏಕೈಕ ಸಂಸ್ಥೆಯಾಗಿದೆ.
ರಾಜ್ಯದ ೨೫ ಜಿಲ್ಲೆಗಳಲ್ಲಿ ಈವರೆಗೆ ಒಟ್ಟು ೨೫೩ ದೇವಾಲಯಗಳು ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾರ್ಯಕ್ಕಾಗಿ ೨೯.೩೪ ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ. ಇದರಲ್ಲಿ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ೧೦.೪೬ ಕೋ.ರೂ. ಸರ್ಕಾರದ ವತಿಯಿಂದ ೯ ಕೋ.ರೂ. ದೇವಾಲಯ ಸಮಿತಿಯಿಂದ ೯.೮೮ ಕೋ.ರೂ. ಸರ್ಕಾರದ ಸಹಭಾಗಿತ್ವದೊಂದಿಗೆ ಸಂರಕ್ಷಿಸಿದ ಸ್ಮಾರಕಗಳು: ೧೭೬.
೨೦೧೯-೨೦ ರ ಸಾಲಿನಲ್ಲಿ ೧೨ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಕ್ಕಾಗಿ ೧,೭೬,೫೦,೦೦೦ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ೨೦೦೩ರಿಂದ ರಾಜ್ಯ ಸರ್ಕಾರವೂ ಸ್ಮಾರಕಗಳ ಸಂರಕ್ಷಣಾ ಕಾರ್ಯದಲ್ಲಿ ಸಹಭಾಗಿತ್ವ ನೀಡುತ್ತಿದೆ. ಒಟ್ಟು ವೆಚ್ಚದಲ್ಲಿ ಶೇ.೪೦ ಧರ್ಮೋತ್ಥಾನ ಟ್ರಸ್ಟ್, ಶೇ.೪೦ ಕರ್ನಾಟಕ ಸರ್ಕಾರ ಹಾಗೂ ಶೇ. ೨೦ ನ್ನು ದೇವಾಲಯದ ಸಮಿತಿಯವರು ಭರಿಸಬೇಕು. ಜೀರ್ಣೋದ್ಧಾರದ ಬಳಿಕ ದೇವಸ್ಥಾನದ ನಿರ್ವಹಣೆಯನ್ನು ಆಯಾ ಊರಿನ ಸಮಿತಿಯವರಿಗೆ ಬಿಟ್ಟು ಕೊಡಲಾಗುತ್ತದೆ.
ಸಂಸ್ಥೆಯು ಐತಿಹಾಸಿಕ ಹಿನ್ನೆಲೆಯ ಪ್ರಾಚೀನ ದೇವಾಲಯಗಳ ಜೀರ್ಣೋದ್ದಾರ ಕಾರ್ಯವನ್ನು ಊರಿನವರ ಸಹಭಾಗಿತ್ವದಲ್ಲಿ ಮುನ್ನಡೆಸಲಾಗುತ್ತಿದೆ. ಜೀರ್ಣೋದ್ದಾರ ಕಾರ್ಯವು ಸಂಪ್ರದಾಯಬದ್ಧವಾಗಿ ನೆರವೇರಿಸಲು ಸಲಹಾ ಸಮಿತಿ ರಚಿಸಲಾಗಿದ್ದು, ಈ ಸಮಿತಿಯಲ್ಲಿ ಪುರಾತತ್ವ ಶಾಸ್ತ್ರ, ಶಿಲ್ಪಶಾಸ್ತ್ರ, ಕಲೆ, ಕಾನೂನು ಇತಿಹಾಸ, ಧರ್ಮ, ಕ್ಷೇತ್ರಗಳಲ್ಲಿ ಅಪಾರ ಜ್ಞಾನ, ಅನುಭವ ಹೊಂದಿರುವ ತಂತ್ರಜ್ಞರನ್ನು ಹೊಂದಿದೆ.
ಧರ್ಮೋತ್ಥಾನ ಟ್ರಸ್ಟ್ ಆಡಳಿತ ಮಂಡಳಿ: ಟ್ರಸ್ಟಿನ ಅಧ್ಯಕ್ಷರಾಗಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಸದಸ್ಯರಾಗಿ ಹೇಮಾವತಿ ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಕಾರ್ಯದರ್ಶಿಯಾಗಿ ಎ. ವಿ. ಶೆಟ್ಟಿ ಇದ್ದಾರೆ. ಕಳೆದ ೧೨ ವರ್ಷಗಳಲ್ಲಿ ವಿಜಯಾ ಬ್ಯಾಂಕಿನ ನಿವೃತ್ತ ಅಧಿಕಾರಿ ಹರಿರಾಮ ಶೆಟ್ಟಿ ನಿರ್ದೇಶಕರಾಗಿ ಉತ್ತಮ ಸೇವೆ ನೀಡಿದ್ದಾರೆ ಅವರ ಸ್ವಯಂ ನಿವೃತ್ತಿ ಬಳಿಕ ಪ್ರಸ್ತುತ ನೇಮಿರಾಜ್ ಜೈನ್ ನಿರ್ದೇಶಕರಾಗಿದ್ದಾರೆ.
ಧರ್ಮೋತ್ಥಾನ ಟ್ರಸ್ಟಿನ ಕಾರ್ಯಗಳು:
ಟ್ರಸ್ಟ್ ವತಿಯಿಂದ ಈತನಕ ಜೀರ್ಣೋದ್ದಾರ ಕಾರ್ಯ ಕೈಗೊಂಡ ಒಟ್ಟು ಸ್ಮಾರಕಗಳು: ೨೫೩
ಸರ್ಕಾರದ ಸಹಭಾಗಿತ್ವದೊಂದಿಗೆ ಸಂರಕ್ಷಿಸಲ್ಪಟ್ಟ ಪ್ರಾಚೀನ ಸ್ಮಾರಕಗಳು : ೧೭೬
ಧರ್ಮೋತ್ಥಾನ ಟ್ರಸ್ಟಿನ ಕಾರ್ಯವ್ಯಾಪ್ತಿಯ ರಾಜ್ಯದ ಒಟ್ಟು ಜಿಲ್ಲೆಗಳು : ೨೫
ಜೀರ್ಣೋದ್ದಾರ ಕಾರ್ಯಕೈಗೊಂಡಿರುವ ಒಟ್ಟು ಜೈನ ಬಸದಿಗಳು : ೩೯ಸಂರಕ್ಷಣಾ ಕಾರ್ಯಕೈಗೊಂಡಿರುವ ರಾಜ್ಯ ಸರ್ಕಾರದ ಸಂರಕ್ಷಿತ ಸ್ಮಾರಕಗಳು : ೧೮
ಜೀರ್ಣೋದ್ದಾರ ಕಾರ್ಯಗೊಂಡಿರುವ ಧಾರ್ಮಿಕದತ್ತಿ ಇಲಾಖೆಯ ವ್ಯಾಪ್ತಿಯ ದೇವಸ್ಥಾನಗಳು : ೮೪
ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಂರಕ್ಷಿಸಲ್ಪಟ್ಟ ಸ್ಮಾರಕಗಳು : ೧೦
ದೇವಸ್ಥಾನಗಳ ಜೀರ್ಣೋದ್ದಾರ ಕಾಮಗಾರಿಗಾಗಿ ಈತನಕ ತಗಲಿದ ಒಟ್ಟು ವೆಚ್ಚ : ೨೯.೩೪ ಕೋ.ರೂ. ಕೋಟಿಗಳು
ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಭರಿಸಿದ ಮೊತ್ತ : ೧೦.೪೬ ಕೋ. ರೂ.ಸರ್ಕಾರದ ವತಿಯ ಅನುದಾನ : ೯ ಕೋ.ರೂ.
ದೇವಸ್ಥಾನಗಳ ಸಮಿತಿಯ ವತಿಯಿಂದ ಭರಿಸಿದ ಮೊತ್ತ : ೯.೮೮ ಕೋ. ರೂ.
೨೦೧೯-೨೦ನೇ ಸಾಲಿನಲ್ಲಿ ದೇವಸ್ಥಾನಗಳ ಜೀರ್ಣೋದ್ದಾರ ಕಾರ್ಯಕ್ಕಾಗಿ ತಗಲಿದ ಒಟ್ಟು ವೆಚ್ಚ ೧,೭೬,೫೦,೦೦೦
ಈ ಮೊತ್ತದಲ್ಲಿ ಧರ್ಮಸ್ಥಳದಿಂದ ಭರಿಸಿದ ಮೊತ್ತ : ೫೦ ಲಕ್ಷ ರೂ.
ಸರ್ಕಾರದಿಂದ ಬಿಡುಗಡೆಯಾದ ಅನುದಾನ : ೮೦ ಲಕ್ಷ ರೂ.
ದೇವಸ್ಥಾನಗಳ ಸಮಿತಿಯ ವತಿಯಿಂದ ಭರಿಸಿದ ಮೊತ್ತ : ೪೬.೫೦ ಲಕ್ಷ ರೂ.