ಬೆಳ್ತಂಗಡಿ : ಅಕ್ರಮವಾಗಿ ಗೋ ವಧೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಎಂಬಲ್ಲಿ ಮಹಮ್ಮದ್ ರಫೀಕ್ ಯಾನೆ ಅಪ್ಪಿ ಎಂಬಾತನ ಮನೆಯಲ್ಲಿ ದನಗಳನ್ನು ಕಳ್ಳತನ ಮಾಡಿಕೊಂಡು ತಂದು ಅಕ್ರಮ ಗೋ ವಧೆ ಮಾಡುತ್ತಿರುವ ಮಾಹಿತಿ ಮೇರೆಗೆ ಸೆ.4 ರಂದು ರಾತ್ರಿ 9 ಗಂಟೆಗೆ ಮೇಲಾಧಿಕಾರಿಗಳಿಂದ ಸರ್ಚ್ ವಾರಂಟ್ ಪಡೆದು ಬೆಳ್ತಂಗಡಿ ಪೊಲೀಸರು ದಾಳಿ ಮಾಡಿದಾಗ ಮೂರು ಕತ್ತಿ,ಎರಡು ಮರದ ಹಿಡಿ ಇರುವ ಚೂರಿ,ಒಂದು ಎಲೆಕ್ಟ್ರಾನಿಕ್ ತೂಕದ ಯಂತ್ರ, ಒಂದು ಮರದ ತುಂಡು, ಒಂದು ನೀಲಿ ಟರ್ಪಾಲು, ಜೀವಂತ ಒಂದು ಹಸು ಮತ್ತು ಒಂದು ಕರು, ದನದ ತ್ಯಾಜ್ಯ ತುಂಬಿದ ಒಂದು ಓಮಿನಿ ಕಾರು, 9 ಕಡಿದ ದನದ ರುಂಡಗಳನ್ನು ಬೆಳ್ತಂಗಡಿ ಪಶು ಇಲಾಖೆಯ ವೈದ್ಯರನ್ನು ಕರೆದು ಮಹಜರು ನಡೆಸಿ ವಶಪಡಿಸಿಕೊಳ್ಳಲಾಗಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸೆ.4 ರಂದು ಕಲಂ 112(2),303(2) BNS 2023 ಮತ್ತು ಕಲಂ 4,5,6,7,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 ಅಡಿಯಲ್ಲಿ ಆರೋಪಿ ಮಹಮ್ಮದ್ ರಫೀಕ್ ಯಾನೆ ಅಪ್ಪಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳು ದಾಳಿ ವೇಳೆ ಪರಾರಿಯಾಗಿದ್ದಾರೆ. ಪ್ರಮುಖ ಆರೋಪಿ ಮೊಹಮ್ಮದ್ ರಫೀಕ್ ಯಾನೆ ಅಪ್ಪಿಗೆ ಬೆಳ್ತಂಗಡಿ ಪೊಲೀಸರು ಹಲವು ಭಾರಿ ಎಚ್ಚರಿಕೆ ನೀಡಿದ್ದರು ಈತ ಮತ್ತೆ ದನ ವಧೆ ಮಾಡುವ ದಂಧೆ ಮುಂದುವರಿಸಿದ್ದ ಎನ್ನಲಾಗಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ್ ನೇತೃತ್ವದಲ್ಲಿ ಸಬ್ ಇನ್ಸ್ಪೆಕ್ಟರ್ ಯಲ್ಲಪ್ಪ ಹೆಚ್ ಮಾದರ ಹಾಗೂ ಸಿಬ್ಬಂದಿ ಶ್ರೀನಿವಾಸ್, ಸತೀಶ್, ಜಗದೀಶ್ ಚಾಲಕ ಧರೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.