ಕೊರೋನಾ ಸಮಯದಲ್ಲೂ ಪುಸ್ತಕ ವಿತರಣೆ ಸಂಕಲ್ಪ ಜಿಲ್ಲೆಗೆ ಮಾದರಿ: ಶಾಸಕ ಹರೀಶ್ ಪೂಂಜ

 

ಅಳದಂಗಡಿ: ಕೊರೋನಾ ಸಂಕಷ್ಟದ ಸಮಯದಲ್ಲೂ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಬೇಕು ಎಂಬ ಸಂಕಲ್ಪವನ್ನು ಮಾಡಿಕೊಂಡಿರುವ ಅಳದಂಗಡಿ ಅರಮನೆಯ ಅರಸರಾದ ಪದ್ಮಪ್ರಸಾದ್ ಅಜಿಲರಿಗೆ ಹಾಗೂ ಶಿವಪ್ರಸಾದ ಅಜಿಲರಿಗೆ ಈ ಭಾಗದ ವಿದ್ಯಾರ್ಥಿಗಳ ಪರವಾಗಿ ತಾಲೂಕಿನ ಶಾಸಕನ ನೆಲೆಯಲ್ಲಿ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಅಳದಂಗಡಿ ಸತ್ಯದೇವತೆ ಟ್ರಸ್ಟ್ ವತಿಯಿಂದ ಸೋಮನಾಥೇಶ್ವರೀ ದೇವಸ್ಥಾನ ವಠಾರದಲ್ಲಿ ಸಾಂಕೇತಿಕವಾಗಿ ನಡೆದ ಪುಸ್ತಕ ವಿತರಣೆಯ ಸರಳ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಳೆದ ಬಾರಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಿ ಸುಮಾರು ಐದು ಸಾವಿರ ವಿದ್ಯಾರ್ಥಿಗಳಿಗೆ ಗೌರವಾನ್ವಿತ ಲೋಕಾಯುಕ್ತ ವಿಶ್ವನಾಥ ಶೆಟ್ಟಿಯವರ ಉಪಸ್ಥಿತಿಯಲ್ಲಿ ಪುಸ್ತಕ ವಿತರಣಾ ಸಮಾರಂಭ ನಡೆದಿತ್ತು. ಪ್ರಾಯಶಃ ಈ ಬಾರಿಯೂ ಅದಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಬೇಕು ಎಂಬ ಯೋಜನೆಯನ್ನು ಮಾಡಿದ್ದರು. ಅದರೂ ಕೊರೋನಾದಂತಹಾ ಸಮಯದಲ್ಲೂ ಹಂತ‌ಹಂತವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮೂಲಕ ಸಹಾಯ ಹಸ್ತ ಮಾಡುತ್ತಿರುವುದು ಇಡೀ ಜಿಲ್ಲೆಗೆ ಮಾದರಿ. ಪ್ರಸಾದದ ರೂಪದಲ್ಲಿ ನೀಡುವ ಪುಸ್ತಕ ಪಡೆದ ವಿದ್ಯಾರ್ಥಿಗಳು ಪ್ರಗತಿಯನ್ನು ಸಾಧಿಸಲಿ ಎಂದು ದೇವರಲ್ಲಿ ಈ ಮೂಲಕ ಬೇಡಿಕೊಳ್ಳುತ್ತೇನೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅಳದಂಗಡಿ ಅರಮನೆಯ ಅರಸರಾದ ಡಾ.ಪದ್ಮಪ್ರಸಾದ ಅಜಿಲ, ಈ ಬಾರಿ ಸರಳ ರೀತಿಯ ಕಾರ್ಯಕ್ರಮದ ಮೂಲಕ ಪುಸ್ತಕ ವಿತರಣೆ ಮಾಡುತಿದ್ದೇವೆ. ಕಳೆದ 17 ವರುಷಗಳಿಂದ ಪುಸ್ತಕ ವಿತರಣೆ ಸವಿನೆನಪಿಗಾಗಿ ಈ ಕಾರ್ಯಕ್ರಮವನ್ನು ಈ ಬಾರಿ ಆಯೋಜಿಸಿದ್ದೇವೆ. 17 ವರ್ಷಗಳ ಹಿಂದೆ ಏನೂ ವ್ಯವಸ್ಥೆ ಇಲ್ಲದ ಸಂದರ್ಭದಲ್ಲೂ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ನಡೆದಿತ್ತು. ಕಳೆದ ಬಾರಿ ಸುಮಾರು ಐದು ಸಾವಿರ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಸೈನಿಕರನ್ನು ಗುರುತಿಸಿ ಸನ್ಮಾನಿಸುವ ಸುಯೋಗ ನಮಗೆ ಬಂದಿತ್ತು. ಬಡವರಿಗೆ ಎಂದು ಈ ಪುಸ್ತಕ ನೀಡುತ್ತಿಲ್ಲ, ದೇವಿಯ ಪ್ರಸಾದದ ರೂಪದಲ್ಲಿ ಈ ಪುಸ್ತಕ ವಿತರಣೆ ಕಾರ್ಯವನ್ನು ಮಾಡುತ್ತಿದ್ದೇವೆ ಎಂದರು.
ಸಾಂಕೇತಿಕವಾಗಿ ಕೆಲವು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಇವತ್ತು ಮಾಡಿ ಮುಂದಿನ ದಿನಗಳಲ್ಲಿ ಹಂತಹಂತವಾಗಿ ಬಂದ ಅರ್ಜಿಗಳನ್ನು ಪರಿಶೀಲಿಸಿ ಪುಸ್ತಕ ವಿತರಣೆ ಮಾಡಲಾಗುವುದು ಎಂದರು.

ಅಳದಂಗಡಿ ಸತ್ಯದೇವತೆ ದೈವಸ್ಥಾನದ ಆಡಳಿತದಾರರಾದ ಶಿವಪ್ರಸಾದ ಅಜಿಲ ಪ್ರಸ್ತಾವನೆಗೈದು ಕಳೆದ 17 ವರುಷಗಳಲ್ಲಿ 100 ರಿಂದ ಆರಂಭವಾದ ವಿದ್ಯಾರ್ಥಿಗಳ ಸಂಖ್ಯೆ ಇದೀಗ 5 ರಿಂದ 6 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆಯನ್ನು ಕ್ಷೇತ್ರದ ವತಿಯಿಂದ ನಡೆಸಿಕೊಂಡು ಬಂದಿದ್ದೇವೆ. ಕಳೆದ ಬಾರಿಯೂ ಅಚ್ಚುಕಟ್ಟಾಗಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸುವಿಕೆ ಹಾಗೂ ರಾಷ್ಟ್ರದ ಹೆಮ್ಮೆಯ ಪುತ್ರರಾದ ಯೋಧರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಮಗೆ ಹೆಮ್ಮೆಯ ವಿಚಾರ. ಈ ಬಾರಿಯೂ ದೇಶದ ಅದರ್ಶ ವ್ಯಕ್ತಿಗಳನ್ನು ಆಹ್ವಾನಿಸಿ ಅವರ ಅದರ್ಶಗಳನ್ನು ನಮ್ಮ ಮಕ್ಕಳಿಗೆ ತಿಳಿಸಿ ರಾಷ್ಟ್ರ ಕಾಯುವ ಯೋಧರನ್ನು ಗೌರವಿಸಿ ಅವರ ಸಮ್ಮುಖದಲ್ಲಿ ಪುಸ್ತಕ ವಿತರಣೆ ಮಾಡಬೇಕು. ಮಕ್ಕಳಿಗೆ ದೇಶಾಭಿಮಾನ ಮೂಡುವ ಕಾರ್ಯಕ್ರಮ ಮಾಡಬೇಕು ಎಂಬ ಯೋಚನೆಯನ್ನು ಮಾಡಿದ್ದೇವು. ಅದರೆ ಕೊರೊನಾ ಸಂಕಷ್ಟದಿಂದ ಶಾಲೆಗಳು ಇನ್ನೂ ಪ್ರಾರಂಭವಾಗಿಲ್ಲ ಸರ್ಕಾರ ಯಾವ ರೀತಿಯಲ್ಲಿ ಶಾಲೆ ಪ್ರಾರಂಭಿಸಬೇಕು ಎಂಬ ಚಿಂತನೆಯನ್ನು ಮಾಡುತ್ತಿದೆ. ಅದಷ್ಟು ಬೇಗ ಕೊರೊನಾ ಮುಕ್ತ ಸಮಾಜ ನಿರ್ಮಾಣವಾಗಿ ಶಾಲೆಗಳು ಎಂದಿನಂತೆ ಪ್ರಾರಂಭವಾಗಲಿ. ಮಕ್ಕಳ ಭವಿಷ್ಯ ಉತ್ತಮವಾಗಿ ಸಾಗಲಿ ಎಂದು ದೇವರಲ್ಲಿ ಭೇಡಿಕೊಳ್ಳುತ್ತ ಈ ಸಲ ಸರಳವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೊಟ್ಯಾನ್, ಅಳದಂಗಡಿ ಸಿಎ ಬ್ಯಾಂಕಿನ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ತಾ.ಪಂ.‌ ಸದಸ್ಯೆ
ವಿನುಷಾ ಪ್ರಕಾಶ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ನಿತ್ಯಾನಂದ ನೊಚ್ಚ ವಂದಿಸಿದರು. ಅಜಿತ್ ಕುಮಾರ್ ಕೊಕ್ರಾಡಿ ಸ್ವಾಗತಿಸಿ, ನಿರೂಪಿಸಿದರು.

error: Content is protected !!