ವಿಜಯ ದಶಮಿ ವಿಶೇಷ:  ಜ್ಞಾನ‌ವಿಕಾಸದಿಂದ ಮಹಿಳೆಯರಿಗೆ ಸಮಾನತೆ ಸಿಗಲಿ ಎಂಬ ನವರಾತ್ರಿ ಸಂದೇಶ ಸಾರುವ ವಿಡಿಯೋ

ಧರ್ಮಸ್ಥಳ: ಮಹಿಳೆಯರ‌ ಅಭಿವೃದ್ಧಿಗೆ ವಿಶೇಷ ಪ್ರಾಶಸ್ತ್ಯ ನೀಡುವ ಶ್ರೀ ಕ್ಷೇತ್ರ ಧರ್ಮಸ್ಥಳ ಜ್ಞಾನವಿಕಾಸದ ವಿಡಿಯೋ ಜನ ಮೆಚ್ಚುಗೆಗೆ ಪಾತ್ರವಾಗಿದೆ. ನವರಾತ್ರಿ ಅಂಗವಾಗಿ ವಿಶೇಷ ವಿಡಿಯೋ ರಚಿಸಲಾಗಿದ್ದು ಯೂಟ್ಯೂಬ್ ಚಾನಲ್ ನಲ್ಲಿ 2 ಸಾವಿರಕ್ಕೂ ಹೆಚ್ಚು ಜನ ಹಾಗೂ ಫೇಸ್ ಬುಕ್ ಪೇಜ್  ನಲ್ಲಿ  17 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದ ಅಧ್ಯಕ್ಷರಾದ ಹೇಮಾವತಿ ವೀ. ಹೆಗ್ಗಡೆ, ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದ ನಿರ್ದೇಶಕಿ ಶ್ರದ್ಧಾ ಅಮಿತ್ ಅವರ ಮಾರ್ಗದರ್ಶನದಲ್ಲಿ ಯೂಟ್ಯೂಬ್ ಚಾನಲ್ ರೂಪಿಸಲಾಗಿದ್ದು, ತಮ್ಮ ಚಾನಲ್ ಮೂಲಕ ಮಹಿಳೆಯರ ಆರೋಗ್ಯ, ಅಭಿವೃದ್ಧಿಗೆ ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ನಿರ್ವಹಿಸುತ್ತಿದೆ. ಈ ಬಾರಿ ನವರಾತ್ರಿಗೆ ವಿಶೇಷ ವಿಡಿಯೋ ಬಿಡುಗಡೆ ಮಾಡಿದ್ದು ಮಹಿಳೆಯರಿಗೆ ಪ್ರೋತ್ಸಾಹ ನೀಡಿದರೆ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ ಎಂಬ ಸಂದೇಶವನ್ನು ಸಾರಲಾಗಿದೆ.
ಶ್ರದ್ಧಾ ಅಮಿತ್ ಸಂದೇಶ:
ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದ ನಿರ್ದೇಶಕಿ ಶ್ರದ್ಧಾ ಅಮಿತ್, ನವರಾತ್ರಿ ಹಬ್ಬದ ಶುಭಕೋರುವ ಜೊತೆಗೆ ಮಹಿಳೆಯರಿಗೆ ಪ್ರಾಶಸ್ತ್ಯ ನೀಡಬೇಕಾದ ಅಗತ್ಯತೆ, ಸಮಾನತೆಯ ಬಗ್ಗೆ ತಿಳಿಸಿದ್ದಾರೆ. ನವರಾತ್ರಿ ಸಂದರ್ಭ ದೇವರ ಪೂಜೆಯ ಜೊತೆಗೆ ತಮ್ಮ ತಮ್ಮ ಮನೆಗಳಲ್ಲಿರುವ ಮಹಿಳೆಯರು ಜವಾಬ್ದಾರಿ ನಿಭಾಯಿಸಲು ಸೂಕ್ತ ಸಹಕಾರ ಲಭಿಸಿದರೆ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ. ಮಹಿಳೆಯರೂ ಪುರುಷರಷ್ಟೇ ಸಮಾನರಾಗಿ ಸಮಾಜದಲ್ಲಿ ಬದುಕುವಂತಾಗಬೇಕು ಎಂಬ ಸಂದೇಶ ಸಾರಿದ್ದಾರೆ‌.


ವಿಡಿಯೋ ಹಾಡಿನಲ್ಲಿ ಐಗಿರಿ ನಂದಿನಿ ಹಾಡನ್ನು ಬಳಸಲಾಗಿದ್ದು, ನವ ದುರ್ಗೆಯರನ್ನು ಚಿತ್ರಿಸಲಾಗಿದೆ. ಜ್ಞಾನ ವಿಕಾಸ ಯೋಜನೆಯಡಿ ಮೂಡಿ ಬಂದಿರುವ ಈ ವಿಡಿಯೋಗೆ ಡಾ. ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ಸುನಿಲ್ ಹೆಗ್ಡೆ, ಗೀತಾ ನೃತ್ಯಾಲಯದವರು ಸಹಕಾರ ನೀಡಿದ್ದಾರೆ. ಸಂದೀಪ್ ದೇವ್ ಹಾಗೂ ಪ್ರಜ್ವಲ್ ಎನ್. ಆರ್. ಅವರ ಛಾಯಾಗ್ರಹಣವಿದ್ದು ಅತ್ಯುತ್ತಮವಾಗಿ ಮೂಡಿಬಂದಿದೆ ಎಂಬ ಪ್ರತಿಕ್ರಿಯೆ ವೀಕ್ಷಕರಿಂದ ಲಭ್ಯವಾಗಿದೆ. ವಿದುಷಿ ಚೈತ್ರಾ ಭಟ್ ನೃತ್ಯ ಸಂಯೋಜನೆ ಮಾಡಿದ್ದು, ಯಶವಂತ್ ಬೆಳ್ತಂಗಡಿ ಮತ್ತು ತಂಡ ಕಲಾ ನಿರ್ದೇಶನ ಮಾಡಿದ್ದಾರೆ. ವಿಡಿಯೋವನ್ನು ರಕ್ಷಿತ್ ರೈ ಸಂಕಲನ ಮಾಡಿದ್ದಾರೆ. ಇನ್ನು ನವ ದುರ್ಗೆಯರ ರೂಪದಲ್ಲಿ ವಿದುಷಿ ಚೈತ್ರ ಭಟ್, ವಿದುಷಿ ಶ್ರಾವ್ಯ ಭಟ್, ವಿದುಷಿ ಪ್ರತಿಕ್ಷಾ ಆಚಾರ್ಯ, ಸೃಜನ, ಅನುರಾಧ, ಐಶ್ವರ್ಯ ಭಟ್, ವೈಷ್ಣವಿ, ಪೃಥ್ವಿ ಗೌಡ, ಹರಿಪ್ರಿಯ ಕಲಾವಿದರಾಗಿ ಹೆಜ್ಜೆ ಹಾಕಿದ್ದಾರೆ.
ಈ ವಿಡಿಯೋ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಯಾದ ಎರಡು ದಿನದಲ್ಲಿಯೇ ಎರಡು ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿ, ಪ್ರೇರಣೆ ಪಡೆದಿರುವುದು ಮೆಚ್ಚುಗೆಯ ವಿಚಾರ.
ಪ್ರಜಾಪ್ರಕಾಶ ತಂಡದಿಂದ ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಶುಭಾಶಯಗಳು.

error: Content is protected !!