ಜಯ ಸಿ. ಸುವರ್ಣ ನಿಧನಕ್ಕೆ ಗಣ್ಯರ ಸಂತಾಪ

ಬೆಳ್ತಂಗಡಿ: ಬಿಲ್ಲವ ಮಹಾಮಂಡಲದ ಸ್ಥಾಪಕ ಅಧ್ಯಕ್ಷ ಜಯ ಸಿ. ಸುವರ್ಣ ನಿಧನಕ್ಕೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ತಮ್ಮ ಫೇಸ್ ಬುಕ್ ಪೇಜ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಜಯ ಸಿ. ಸುವರ್ಣ ಅವರು ಬಿಲ್ಲವ ಮಹಾಮಂಡಲದ ಸ್ಥಾಪಕ ಅಧ್ಯಕ್ಷರಾಗಿ, ಭಾರತ ಕೋ-ಅಪರೇಟೀವ್ ಬ್ಯಾಂಕ್‌ನ ಮಾಜಿ ಅಧ್ಯಕ್ಷರಾಗಿ, ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಕರಾವಳಿ ಭಾಗದಲ್ಲಿ ಹಲವಾರು ಅಭಿವೃದ್ಧಿ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯ ಸಿ. ಸುವರ್ಣರ ಅಗಲಿಕೆ ಈ ಸಮಾಜಕ್ಕೆ ಬಹು ದೊಡ್ಡ ನಷ್ಟವಾಗಿದೆ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಸಂತಾಪ ಸೂಚಿಸಿದ್ದಾರೆ.

ಕೇವಲ 5 ಶಾಖೆಗಳಿದ್ದ ಭಾರತ್ ಬ್ಯಾಂಕನ್ನು 100ಕ್ಕೂ ಹೆಚ್ಚು ಶಾಖೆಗಳಾಗಿ ಮಾಡುವಲ್ಲಿ, ಬಿಲ್ಲವ ಮಹಾಮಂಡಲದ ಮೂಲಕ ಬಡ ಬಿಲ್ಲವ ಸಮುದಾಯವನ್ನು ಮೇಲೆತ್ತುವಲ್ಲಿ ಅವರ ಶ್ರಮ ಅವಿಸ್ಮರಣೀಯ. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಇವರು ಎಲ್ಲಾ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರು. ದ. ಕ. ಜಿಲ್ಲೆ ಮತ್ತು ಮಹಾರಾಷ್ಟ್ರ ಮಣ್ಣಿನ ಕೊಂಡಿಯಾಗಿದ್ದ ಜಯ ಸಿ. ಸುವರ್ಣರು ನಿಜವಾದ ಅರ್ಥದಲ್ಲಿ ಈ ಸಮಾಜದ ಸ್ವರ್ಣವಾಗಿದ್ದರು. ತುಳುನಾಡಿನ ಅವಳಿ ವೀರರಾದ ಕೋಟಿ – ಚೆನ್ನಯರ ಮೂಲಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್‌ನ ಪುನರುತ್ಥಾನದ ಗುರಿಕಾರರಾಗಿ, ಮುಂಬೈ ಬಿಲ್ಲವ ಭವನ ಮತ್ತು ಬಿಲ್ಲವ ಮಹಾಮಂಡಲ ಮೂಲ್ಕಿಯ ಹರಿಕಾರರಾದ ಇವರು ತಾಲೂಕಿನ ಹಲವಾರು ಸಂಘ – ಸಂಸ್ಥೆಗಳಿಗೆ ಸಹಾಯಧನ ನೀಡಿದ ಕೊಡುಗೈ ದಾನಿಯಾಗಿದ್ದರು. ಇವರ ಅಗಲಿಕೆ ಇಡೀ ಬಿಲ್ಲವ ಸಮುದಾಯಕ್ಕೆ ಮಾತ್ರವಲ್ಲ ಇಡೀ ಸಮಾಜಕ್ಕೆ ದುಃಖ ತಂದಿದೆ ಎಂದು ವಸಂತ ಬಂಗೇರ ಅವರು ಸಂತಾಪ ಸೂಚಿಸಿದ್ದಾರೆ.

ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಸ್ಥಾಪಕಾಧ್ಯಕ್ಷ ಜಯ ಸಿ ಸುವರ್ಣ (82) ಅವರು ಮುಂಬಯಿಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದ್ದರು.

ಪ್ರಸ್ತುತ ದ.ಕ. ಜಿಲ್ಲೆಯ ಮುಲ್ಕಿ ಮೂಲದವರಾಗಿದ್ದ ಜಯ ಸಿ. ಸುವರ್ಣರು ಮುಂಬಯಿನಲ್ಲಿ ಹೋಟೆಲ್ ಉದ್ಯಮಿಯಾಗಿ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು.

ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ನಿಕಟವರ್ತಿಯಾಗಿದ್ದ ಜಯ ಸಿ. ಸುವರ್ಣ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ಭಾರತ್ ಕೋ ಆಪರೇಟಿವ್ ಬ್ಯಾಂಕ್​​ನ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಮುಂಬಯಿ ಬಿಲ್ಲವ ಭವನ ಮತ್ತು ಮಹಾಮಂಡಲ ಭವನ ಮುಲ್ಕಿ ಇದರ ನಿರ್ಮಾತೃ ಆಗಿದ್ದರು. ಪತ್ನಿ ಮತ್ತು ನಾಲ್ವರು ಪುತ್ರರನ್ನು ಅಗಲಿದ್ದಾರೆ.

error: Content is protected !!