ಬೆಳ್ತಂಗಡಿ: ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ‘ಯುವಬರಹಗಾರರ ಚೊಚ್ಚಲ ಕೃತಿ- 2019’ ಬಹುಮಾನಕ್ಕೆ ಉಜಿರೆ ಎಸ್.ಡಿ.ಎಂ. ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಗುರುಗಣೇಶ ಭಟ್ ಡಬ್ಗುಳಿ ಪಾತ್ರವಾಗಿದ್ದಾರೆ. ಈ ವರ್ಷ ದ್ವಿತೀಯ ಎಂಸಿಜೆ ಮುಗಿಸಿರುವ ಗಣೇಶ್ ಅವರ ‘ಇದುವರೆಗಿನ ಪ್ರಾಯ’ ಕವಿತೆಗಳ ಹಸ್ತಪ್ರತಿ ಆಯ್ಕೆಯಾಗಿದೆ. ಯುವ ಬರಹಗಾರರ ಚೊಚ್ಚಲ ಕೃತಿ ಪ್ರಕಟಣೆಗೆ ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಗೌರವ ಪುರಸ್ಕಾರ ಇದಾಗಿದ್ದು, ಪ್ರಾಧಿಕಾರದ ಉಪಸಮಿತಿಯು ಆಯ್ಕೆ ಪ್ರಕ್ರಿಯೆ ನಡೆಸಿದೆ.
ಪ್ರಶಸ್ತಿ ಪಡೆದ ಕುರಿತು ಪ್ರಜಾಪ್ರಕಾಶಕ್ಕೆ ಪ್ರತಿಕ್ರಿಯಿಸಿದ ಗುರುಗಣೇಶ್, ನಾನು ಬದುಕಿದ ವಾತಾವರಣ, ಜನಜೀವನಗಳನ್ನೇ ಬರೆಯುತ್ತಿದ್ದೆ. ಬರೆಯುವ ದಾರಿಯಲ್ಲಿ ನೆರವಾದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ಕವಿತೆಗಳನ್ನು ಬರೆಯುವ ಹುಕಿ ಬಂದ ದಿನ ಸ್ಪಷ್ಟವಾಗಿ ನೆನಪಿಲ್ಲ. ನಿಜಕ್ಕೂ ನಾನು ಬರೆದದ್ದು ಕವಿತೆ ಆಗಿದೆಯೇ ಎಂಬ ಪ್ರಶ್ನೆ ಈಗಲೂ ನನ್ನನ್ನು ಕಾಡುತ್ತದೆ. ಅದೊಂದು ಪ್ರಯತ್ನ ಎಂದಷ್ಟೇ ತಿಳಿದಿದ್ದೇನೆ. ಪುರಸ್ಕಾರಕ್ಕೆ ಪಾತ್ರವಾಗಿದ್ದು ಉತ್ಸಾಹ ತುಂಬಿದೆ ಎಂದರು.
ಗುರುಗಣೇಶ ಅವರು ಇದಕ್ಕೂ ಮುನ್ನಾ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ‘ಜಿಲ್ಲಾ ರಾಜ್ಯೋತ್ಸವ ಯುವ ಕೃತಿ ಪುರಸ್ಕಾರ-2019’ ಪಡೆದಿದ್ದರು. ಸಾಹಿತ್ಯ, ಸಂಶೋಧನೆ, ಪರಿಸರ, ಸುಸ್ಥಿರ ಅಭಿವೃದ್ಧಿ, ಕನ್ನಡ ಡಿಜಿಟಲ್ ಸಮುದಾಯದ ಅಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಗುರುಗಣೇಶ್ ಒಲವು ಹೊಂದಿದ್ದಾರೆ.