ಶ್ರದ್ಧಾ, ಭಕ್ತಿಯಿಂದ ಸರಳವಾಗಿ ನವರಾತ್ರಿ ಆಚರಿಸಬೇಕು: ಡಾ. ಡಿ. ವೀರೇಂದ್ರ ಹೆಗ್ಗಡೆ


ಬೆಳ್ತಂಗಡಿ: ನವರಾತ್ರಿ ಉತ್ಸವದ ಮೂಲಕ ಕೊರೊನಾ ಅಸುರನನ್ನು ದೂರ ಇಡಬೇಕಾದರೆ ಈಗಾಗಲೇ ಸರ್ಕಾರ ಸೂಚಿಸಿದ ಮಾರ್ಗಸೂಚಿ ಸೂತ್ರಗಳಾದ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡುವುದು, ಹೆಚ್ಚು ಜನ ಗುಂಪು ಸೇರದಂತೆ ಮಾಡುವುದು, ಸ್ಯಾನಿಟೈಸೇಶನ್ ಇತ್ಯಾದಿ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಆದುದರಿಂದ ಎಲ್ಲರೂ ಈ ಬಾರಿ ತಮ್ಮ ಮನೆಗಳಲ್ಲಿಯೇ ಸರಳವಾಗಿ ನವರಾತ್ರಿ ಪೂಜೆ ಮತ್ತು ಆಚರಣೆಗಳನ್ನು ನೆರವೇರಿಸಿ ಸಾರ್ವಜನಿಕವಾಗಿ ಜನರು ಒಟ್ಟು ಸೇರುವುದನ್ನು ತಡೆಗಟ್ಟಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸಲಹೆ ನೀಡಿದ್ದಾರೆ.
ಕಳೆದ ಮಾರ್ಚ್ ತಿಂಗಳಿನಿಂದ ಕೊರೊನಾ ವ್ಯಾಧಿ ಜನಜೀವನದಲ್ಲಿ ಹೊಕ್ಕು ಸಾಕಷ್ಟು ಸಮಸ್ಯೆಗಳನ್ನು ಮತ್ತು ವ್ಯತ್ಯಾಯಗಳನ್ನು ಉಂಟುಮಾಡಿದೆ. ಅಕ್ಟೋಬರ್ ಮಧ್ಯದವರೆಗೂ ರೋಗ ಹೇಗೆ ಹರಡುತ್ತದೆ? ಮತ್ತು ಅದಕ್ಕೆ ಸೂಕ್ತ ಔಷಧಿ ಏನು? ಇದು ಹೇಗೆ ಕೊನೆಗೊಳ್ಳುತ್ತದೆ? ಎಂಬ ಬಗ್ಗೆ ಖಚಿತ ಪರಿಹಾರವಿಲ್ಲ. ಎಲ್ಲವೂ ಯಕ್ಷಪ್ರಶ್ನೆಯಾಗಿದೆ. ಆದುದರಿಂದ ಹಬ್ಬಗಳ ಮೂಲಕ ಭಕ್ತಿ, ಶ್ರದ್ಧೆ ಮತ್ತು ಆಚರಣೆಗಳು ಇರಬೇಕಾಗುತ್ತದೆ. ಎಲ್ಲರೂ ಸರಳವಾಗಿ ನವರಾತ್ರಿ ಆಚರಿಸೋಣ. ದುಷ್ಟ ಶಕ್ತಿಗಳ ನಿವಾರಣೆಯೇ ನವರಾತ್ರಿ ಉತ್ಸವದ ಉದ್ದೇಶವಾದುದರಿಂದ, ಕೊರೊನಾ ರೋಗ ಆದಷ್ಟು ಶೀಘ್ರ ಸಂಪೂರ್ಣ ನಿರ್ಮೂಲನೆಯಾಗಿ ಎಲ್ಲರೂ ಆರೋಗ್ಯ ಭಾಗ್ಯ ದೊಂದಿಗೆ ಶಾಂತಿ ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ಹೆಗ್ಗಡೆಯವರು ಹಾರೈಸಿದ್ದಾರೆ.

error: Content is protected !!