ಬೆಳ್ತಂಗಡಿ, ಅ.4: ಕೋವಿಡ್ ಸಂದರ್ಭದಲ್ಲೂ ತಾಲೂಕಿನ ಶಿಕ್ಷಕ ವರ್ಗ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಶಿಕ್ಷಕರ ಸರ್ವತೋಮುಖ ಅಭಿವೃದ್ಧಿಗೆ ಶಾಸಕರಾಗಿ ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕ ಹರೀಶ್ ಪೂಂಜ ಹೇಳಿದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘ, ಬೆಳ್ತಂಗಡಿ ಮತ್ತು ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ಬೆಳ್ತಂಗಡಿ ವತಿಯಿಂದ
ಕೋವಿಡ್ -19 ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಅನುದಾನ ರಹಿತ ಶಾಲಾ ಶಿಕ್ಷಕರು, ಸಿಬಂದಿ ಮತ್ತು ಪ್ರೌಢಶಾಲಾ ಬಿಸಿಯೂಟ ಸಿಬಂದಿಗಳಿಗೆ ಅ.4 ರಂದು ಶ್ರೀ.ಧ.ಮಂ. ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್ಥಿಕ ನೆರವು ಹಾಗೂ ಸಾಧಕರಿಗೆ ಸಮ್ಮಾನ ನೆರವೇರಿಸಿ ಮಾತನಾಡಿದರು.
ಶಿಕ್ಷಕರ ಆದರ್ಶದಿಂದ ಜಗತ್ತು ಅನೇಕ ಸಾಧಕರನ್ನು ಪರಿಚಯಿಸಿದೆ. ನಮ್ಮ ಸಾಧನೆ ಹಿಂದೆ ಗುರುವಿನ ಅಚಲ ನಂಬಿಕೆ ಜಾಗೂ ಕರ್ತವ್ಯ ಸೇವೆ ಗಮನಾರ್ಹ. ಜಗತ್ತಿಗೆ ಗುರುತತ್ವ ನೀಡಿದ ದೇಶ ಭಾರತವಾದ್ದರಿಂದ ನಾವು ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಶಿಕ್ಷಕರು ಕೋವಿಡ್ ಸಂದರ್ಭದಲ್ಲೂ ನೀಡಿದ ಸೇವೆ ಅಪಾರ. ಈ ನೆಲೆಯಲ್ಲಿ ಸರಕಾರವೂ ಪೂರ್ಣ ರೀತಿಯ ಸಹಕಾರ ನೀಡಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಶಾಲೆ ಆರಂಭಿಸಲು ನಾನು ಸರಕಾರವನ್ನು ಈಗಾಗಲೇ ಒತ್ತಾಯಿಸಿದ್ದೇನೆ. ಶಿಕ್ಷಣ ವ್ಯವಸ್ಥೆ ಭವಿಷ್ಯದ ಬುನಾದಿಯಾಗಿರುವುದರಿಂದ ಸಂಪೂರ್ಣ ಸಹಾಕರ ನೀಡುವುದಾಗಿ ಭರವಸೆ ನೀಡಿದರು.
ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಯಾಕುಬ್ ಎಸ್. ಸಮ್ಮಾನ ಸ್ವೀಕರಿಸಿ ಮಾತನಾಡಿ, ಜೀವನದ ಸಾಧನೆಯ ಸ್ವರೂಪಗಳಲ್ಲಿ ಹಲವು ಪ್ರೇರಕ ಸಂಗತಿಗಳು ಬಂದೊದಗುತ್ತವೆ. ನಾವು ಅವಕಾಶಗಳನ್ನು ಸದ್ಬಳಸಿಕೊಂಡು ಜೀವನದಲ್ಲಿ ಮುನ್ನಡಯಬೇಕು. ಇಂದಿನ ದಿನ ಬದುಕಿನಲ್ಲಿ ಬಂದೊದಗಿರುವ ಅದ್ಭುತ ಹಾಗೂ ರೋಮಾಂಚನ ಕ್ಷಣ. ಸಾಧನೆಯ ಹಾದಿಯಲ್ಲಿ ಅವಮಾನವನ್ನು ಅಭಿಮಾನದಿಂದ ಸ್ವೀಕರಿಸಿ ಮುನ್ನಡೆದಾಗ ಯಶಸ್ಸು ನಿಮ್ಮದಾಗಲಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಶಿಕ್ಷಣ ಸಂಯೋಜಕರಾದ ದಿನೇಶ್ ಕೊಕ್ಕಡ, ನಿವೃತ್ತ ಶಿಕ್ಷಣ ಸಂಯೋಜಕ ರಮೇಶ್ ಕೆ., ಪ್ರೌ.ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾಧ್ಯಕ್ಷ ಸ್ಟ್ಯಾನಿ ತಾವ್ರೊ, ತಾಲೂಕು ಮುಖ್ಯಶಿಕ್ಷಕರ ಸಂಘ ಅಧ್ಯಕ್ಷ ಲಕ್ಮೀನಾರಾಯಣ ರಾವ್ ಉಪಸ್ಥಿತರಿದ್ದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘ, ಬೆಳ್ತಂಗಡಿ ಮತ್ತು ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದಿಂದ ಶಾಸಕ ಹರೀಶ್ ಪೂಂಜ ಅವರನ್ನು ಸನ್ಮಾನಿಸಲಾಯಿತು.
ತಾಲೂಕು ಪ್ರೌಢಶಾಲ ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್ ಮಯ್ಯ ಸ್ವಾಗತಿಸಿದರು. ಸಂಘದ ತಾಲೂಕು ಕಾರ್ಯದರ್ಶಿ ಮಹಮ್ಮದ್ ರಿಯಾಜ್ ಪ್ರಾಸ್ತಾವಿಸಿದರು. ಕೊಯ್ಯೂರು ಪ್ರೌ.ಶಾಲ ಮುಖ್ಯಶಿಕ್ಷಕಿ ರಾಧಕೃಷ್ಣತಚ್ಚಮೆ, ಬೆಳಾಲು ಪ್ರೌ.ಶಾಲೆ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಚೊಕ್ಕಾಡಿ ಅಭಿನಂದನಾ ಭಾಷಣ, ಪುತ್ತಿಲ ಪ್ರೌ.ಶಾಲೆ ಮುಖ್ಯಶಿಕ್ಷಕ ಆದಂ ಪುತ್ತಿಲ, ನಾರಾವಿ ಪ್ರೌ.ಶಾಲೆ ಮುಖ್ಯಶಿಕ್ಷಕ ಗೋಪಾಲಕೃಷ್ಣ ತುಳುಪುಳೆ, ಪದಾಧಿಕಾರಿಗಳಾದ ಶಿವಪುತ್ರ ಸುಣಗಾರ, ಮಂಜ ನಾಯ್ಕ ಪ್ರಶಸ್ತಿಪತ್ರ ವಾಚಿಸಿದರು.
ಶಿಕ್ಷಣ ಸಂಯೋಜಕ ಸುಭಾಷ್ ಜಾದವ್ ವಂದಿಸಿದರು.