ಬೆಳ್ತಂಗಡಿ:ಪರಾವಲಂಬಿಯಾಗದೆ ಸ್ವಾವಲಂಬಿಗಳಾಗಿ ಸ್ವಾಭಿಮಾನಿಗಳಾಗಿ ಸ್ವದೇಶಿಗಳಾಗಿ ಪ್ರಧಾನಿ
ನರೇಂದ್ರ ಮೋದಿಯ ಕರೆಯಂತೆ ರಾಷ್ಟ ಕಟ್ಟುವೆಡೆಗೆ ಸಾಗೋಣ ಎಂದು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಹೇಳಿದರು.
ಗ್ರಾಮವಿಕಾಸ ಸಮಿತಿ ಮಂಗಳೂರು, ಸಹಕಾರ ಭಾರತಿ ದ.ಕ. ಜಿಲ್ಲೆ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಆಶ್ರಯದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು ಸಹಯೋಗದೊಂದಿಗೆ ಉಜಿರೆ ಶಾರದಾ ಮಂಟಪದಲ್ಲಿ ಸೆ.19ರಂದು ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾವು ನಿರುದ್ಯೋಗಿಗಳು ಎಂಬ ಕಿಳರಿಮೆಯನ್ನು ತೊರೆದು, ಆತ್ಮನಿರ್ಭರದೊಂದಿಗೆ ಸ್ವಾವಲಂಬಿ ಜೀವನಕ್ಕಾಗಿ ಸ್ವ ಉದ್ಯೋಗದ ಮೂಲಕ ಭವಿಷ್ಯ ಕಟ್ಟಿಕೊಳ್ಳಬೇಕು. ಎಂದ ಅವರು ಕೃಷಿ ಪ್ರಧಾನವಾಗಿರುವ ಕರಾವಳಿ ಭಾಗದಲ್ಲಿ ಹೈನುಗಾರರು ಮೊದಲಿಗರಾಗಿದ್ದಾರೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ ಬೆಳ್ತಂಗಡಿ ತಾಲೂಕು ದ.ಕ.ಜಿಲ್ಲೆಯಲ್ಲಿ ಅತೀ ಹೆಚ್ಚು ಹಾಲು ಉತ್ಪಾದನೆಯಲ್ಲಿ ತೊಡಗಿದೆ.
ಮುಂದಿನ ದಿನಗಳಲ್ಲಿ ಶಿಬಿರದಲ್ಲಿ ಪಾಲ್ಗೊಂಡ ಬಂಧುಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಸಹಕಾರ ಕ್ಷೇತ್ರದಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವ ನಿಟ್ಟಿನಲ್ಲಿ ಶಾಸಕನ ನೆಲೆಯಲ್ಲಿ ಅವಶ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಗ್ರಾಮವಿಕಾಸ ವಿಭಾಗ ಸಂಯೋಜಕ ಪ್ರವೀಣ್ ಸರಳಾಯ ಮಾತನಾಡಿ ನೈಪುಣ್ಯ ಕಲಿಕೆ ಕೊನೆ ಇಲ್ಲದ ಅಧ್ಯಾಯ. ಕೊರೊನಾ ನಡುವೆಯೂ ಶಿಬಿರಗಳು ಜೀವನದಲ್ಲಿ ವಿಶ್ವಾಸ ತುಂಬುವ ಕಾರ್ಯ ಮಾಡಿದೆ. ಬಾಲ್ಯದಿಂದಲೇ ಶಿಕ್ಷಣ ಪದ್ಧತಿಯಲ್ಲಿ ನೈಪುಣ್ಯತೆ ನೀಡಿದಾಗ ನಮ್ಮೊಳಗಿನ ಶಕ್ತಿ ಸಹಜವಾಗಿ ಪ್ರಕಟವಾಗುತ್ತದೆ ಎಂದರು.
ಆರ್‌ಎಸ್‌ಎಸ್ ಜಿಲ್ಲಾ ಕಾರ್ಯದರ್ಶಿ ವಿನೋದ್ ಕೊಡ್ಮಣ್ಣು, ಉಪಸ್ಥಿತರಿದ್ದರು.
ಸಹಕಾರ ಭಾರತಿ ಅಧ್ಯಕ್ಷ ಸುಂದರ ಹೆಗ್ಡೆ ಸ್ವಾಗತಿಸಿದರು. ಉದ್ಯೋಗ ನೈಪುಣ್ಯ ಪ್ರಧಾನ ಸಂಯೋಜಕ ರಾಜೇಶ್ ಪೆಂರ್ಬುಡ ಕಾರ್ಯಕ್ರಮ ನಿರೂಪಿಸಿದರು.
ಸೆ.14 ರಿಂದ 19ರವರೆಗೆ 6 ದಿನಗಳ ಕಾಲ ಉಜಿರೆ ಶಾರದಾ ಮಂಟಪ, ಜನಾರ್ದನ ದೇವಸ್ಥಾನದ ರಾಮಕೃಷ್ಣ ಮಂಟಪ ಹಾಗೂ ಕೃಷ್ಣಾನುಗ್ರಹ ಸಭಾಭವನದಲ್ಲಿ ಏಕಕಾಲದಲ್ಲಿ 12 ತಂಡಗಳಿಗೆ ತರಬೇತಿ ನಡೆಯಿತು. ಶಿಬಿರದಲ್ಲಿ ಪಾಲ್ಗೊಂಡ 278 ಮಂದಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಫೋಟೋ: ಉದ್ಯೋಗ ನೈಪುಣ್ಯ ಸಮಾರೋಪ ಸಮಾರಂಭದಲ್ಲಿ ಶಾಸಕ ಹರೀಶ್ ಪೂಂಜ ಮಾತನಾಡಿದರು.