ಇಂದಬೆಟ್ಟು, ನೇತ್ರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ: ಪೊಲೀಸ್ ದಾಳಿ, ಟಿಪ್ಪರ್ ಸಹಿತ ಓರ್ವ ವಶಕ್ಕೆ:

 

 

ಬೆಳ್ತಂಗಡಿ: ಇಂದಬೆಟ್ಟು ಗ್ರಾಮದ ಬೊಳ್ಳೂರುಬೈಲು ಪ್ರದೇಶದಲ್ಲಿ ನೇತ್ರಾವತಿ ನದಿ ಕಿನಾರೆಯಿಂದ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಾಟಕ್ಕೆ ಸಿದ್ಧಪಡಿಸುತ್ತಿದ್ದ ಆರೋಪದ ಮೇಲೆ ಬೆಳ್ತಂಗಡಿ ಪೊಲೀಸರು ಮಹಮ್ಮದ್ ಸುಹೈಲ್ ಎಂಬಾತನನ್ನು ಬಂಧಿಸಿದ್ದಾರೆ. ದಾಳಿಯ ವೇಳೆ ಎರಡು ಟಿಪ್ಪರ್ ಲಾರಿಗಳು ಹಾಗೂ ಮರಳನ್ನು ವಶಪಡಿಸಿಕೊಂಡಿದ್ದಾರೆ.

ಆ.18ರಂದು ಬೆಳಗಿನ ಜಾವ ಸುಮಾರು 4.45ಕ್ಕೆ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಅಕ್ರಮ ಮರಳು ಸಂಗ್ರಹದ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ದಾಳಿ ನಡೆಸಿದರು. ಸುಮಾರು ಆರು ಮಂದಿ ಪ್ಲಾಸ್ಟಿಕ್ ಬುಟ್ಟಿಗಳ ಮೂಲಕ ಮರಳನ್ನು ಟಿಪ್ಪರ್‌ಗಳಿಗೆ ತುಂಬಿಸುತ್ತಿದ್ದರೆನ್ನಲಾಗಿದ್ದು, ಪೊಲೀಸರನ್ನು ಕಂಡ ಕೆಲವರು ಪರಾರಿಯಾಗಿದ್ದಾರೆ. ಅವರಲ್ಲಿ ಮಹಮ್ಮದ್ ಸುಹೈಲ್‌ನನ್ನು ಪೊಲೀಸರು ಬೆನ್ನಟ್ಟಿ ವಶಕ್ಕೆ ಪಡೆದಿದ್ದಾರೆ.

ವಿಚಾರಣೆ ವೇಳೆ ಪರಾರಿಯಾದ ಟಿಪ್ಪರ್ ಚಾಲಕ ಇಬ್ರಾಹಿಂ ಹಾಗೂ ಮರಳು ತುಂಬಿಸುತ್ತಿದ್ದ ಪುನೀತ್ ಎಂಬವರ ಹೆಸರು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮರಳು ಸಂಗ್ರಹಿಸಿ ಸಾಗಾಟ ಮಾಡಲು ಯಾವುದೇ ಸರ್ಕಾರಿ ಪರವಾನಗಿ ಇರಲಿಲ್ಲವೆಂದು ಆರೋಪಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

KA-19-AA-2826 ಟಿಪ್ಪರ್‌ನಲ್ಲಿ ಸುಮಾರು ₹10,000 ಮೌಲ್ಯದ ಮರಳು ಪತ್ತೆಯಾಗಿದ್ದು, ಟಿಪ್ಪರ್‌ನ ಅಂದಾಜು ಮೌಲ್ಯ ₹3.50 ಲಕ್ಷ ಎಂದು ತಿಳಿಸಲಾಗಿದೆ. KA-18-B-1236 ಟಿಪ್ಪರ್‌ನಲ್ಲಿ ಸುಮಾರು 20 ಪ್ಲಾಸ್ಟಿಕ್ ಬುಟ್ಟಿಯಷ್ಟು, ಅಂದಾಜು ₹400 ಮೌಲ್ಯದ ಮರಳು ಪತ್ತೆಯಾಗಿದ್ದು, ಟಿಪ್ಪರ್‌ನ ಮೌಲ್ಯ ₹4 ಲಕ್ಷ ಎಂದು ಅಂದಾಜಿಸಲಾಗಿದೆ.

ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 89/2026ರಂತೆ BNS-2023ರ ಕಲಂ 303(2) ಜೊತೆಗೆ 3(5), MMDR Act ಹಾಗೂ KMMCR-1994ರ ಸಂಬಂಧಿತ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

error: Content is protected !!