
ಬೆಳ್ತಂಗಡಿ: ಚಾರ್ಮಾಡಿ ಚೆಕ್‌ಪೋಸ್ಟ್ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಮಹೇಂದ್ರ ಬೊಲೆರೋ ಪಿಕ್‌ಅಪ್ ವಾಹನವನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಗಸ್ಟ್ 15ರಂದು ಬೆಳಗ್ಗೆ 9.45ರ ಸುಮಾರಿಗೆ ಚಾರ್ಮಾಡಿ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ, ಕಕ್ಕಿಂಜೆಯಿಂದ ಚಾರ್ಮಾಡಿ ಕಡೆಗೆ ಬರುತ್ತಿದ್ದ KA-21-B-0593 ನೋಂದಣಿ ಸಂಖ್ಯೆಯ ಪಿಕ್‌ಅಪ್ ವಾಹನವನ್ನು ಪೊಲೀಸರು ನಿಲ್ಲಿಸಲು ಸೂಚಿಸಿದ್ದಾರೆ. ಚಾಲಕ ವಾಹನ ನಿಲ್ಲಿಸಿ ಕೆಳಗಿಳಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.
ವಾಹನವನ್ನು ಪರಿಶೀಲಿಸಿದಾಗ ಹಿಂಬದಿ ಬಾಡಿಯಲ್ಲಿ ಸುಮಾರು 30 ಬುಟ್ಟಿಯಷ್ಟು ಮರಳು ಪತ್ತೆಯಾಗಿದೆ. ಯಾವುದೇ ಇಲಾಖಾ ಅನುಮತಿ ಪಡೆಯದೆ ಹಾಗೂ ಸರ್ಕಾರಕ್ಕೆ ರಾಜಸ್ವ ಪಾವತಿಸದೆ ಮರಳು ಸಾಗಾಟ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.
ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಮರಳಿನ ಅಂದಾಜು ಮೌಲ್ಯ ರೂ.5,500 ಹಾಗೂ ಪಿಕ್‌ಅಪ್ ವಾಹನದ ಅಂದಾಜು ಮೌಲ್ಯ ರೂ.2.50 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಚಾರ್ಮಾಡಿ ಗ್ರಾಮದ ಬೀಟಿಗೆ ನಿವಾಸಿ ಫಾಯಾಜ್ ಎಂಬ ಪಿಕ್‌ಅಪ್ ಚಾಲಕನ ವಿರುದ್ಧ BNS-2023ರ ಕಲಂ 303(2), MMCR Actನ ಕಲಂ 42, 43, 44 ಹಾಗೂ MMRD Actನ ಕಲಂ 4(1), 4(1A), 21(1), 21(1A) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.