ಉಪ್ಪಿನಂಗಡಿ, ಇಬ್ಬರು ಮಕ್ಕಳನ್ನು ಬಾವಿಗೆಸೆದ ಮಹಿಳೆ : ಒಂದು ಮಗು ಸಾವು, ಮತ್ತೊಂದು ಗಂಭೀರ:

 

 

ಉಪ್ಪಿನಂಗಡಿ : ವೈವಾಹಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಇಬ್ಬರು ಪುಟ್ಟ ಮಕ್ಕಳನ್ನು ಮನೆಯ ಸಮೀಪದ ಬಾವಿಗೆ ಎಸೆದಿರುವ ಘಟನೆ ಶನಿವಾರ ಮಧ್ಯಾಹ್ನ ಪೆರ್ನೆಯಲ್ಲಿ ನಡೆದಿದೆ. ಘಟನೆಯಲ್ಲಿ ಸುಮಾರು ಮೂರು ವರ್ಷದ ಮಗು ಮೃತಪಟ್ಟಿದ್ದು, ಮತ್ತೊಂದು ಮಗು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದೆ.

ಪೆರ್ನೆಯಲ್ಲಿ ವಾಸವಾಗಿರುವ ಸಿನಾನ್ (32) ಹಾಗೂ ನೂರುನ್ನಿಸಾ (28) ದಂಪತಿ ನಡುವೆ ಶನಿವಾರ ಮಧ್ಯಾಹ್ನ ಫೋನ್‌ ಕರೆಯಲ್ಲಿ ವೈವಾಹಿಕ ವಿಚಾರಕ್ಕೆ ಸಂಬಂಧಿಸಿದಂತೆ ಕಲಹ ನಡೆದಿದೆ ಎನ್ನಲಾಗಿದೆ. ಈ ವೇಳೆ ಕೋಪಗೊಂಡ ನೂರುನ್ನಿಸಾ, ಮನೆಯಲ್ಲಿದ್ದ ತನ್ನ ಸುಮಾರು ಮೂರೂವರೆ ವರ್ಷದ ಮಗು ಹಾಗೂ ಪತಿಯ ತಂಗಿಯ ಮೂರು ವರ್ಷದ ಮಗುವನ್ನು ಮನೆಯ ಸಮೀಪದ ಬಾವಿಗೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಕ್ಕಳು ಬಾವಿಗೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ಇಬ್ಬರು ಮಕ್ಕಳನ್ನೂ ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಆದರೆ, ಈ ಪೈಕಿ ನೂರುನ್ನಿಸಾ ಅವರ ಪತಿಯ ತಂಗಿಯ ಮೂರು ವರ್ಷದ ಮಗು ಮೃತಪಟ್ಟಿದೆ. ಮತ್ತೊಂದು ಮಗುವನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗುವಿನ ಆರೋಗ್ಯ ಸ್ಥಿತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 121/2026ರಂತೆ ಪ್ರಕರಣ ದಾಖಲಾಗಿದೆ. ಆರೋಪಿತೆ ನೂರುನ್ನಿಸಾಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವೈವಾಹಿಕ ಕಲಹಕ್ಕೆ ಕಾರಣವೇನು ಹಾಗೂ ಘಟನೆ ನಡೆದ ಸಂದರ್ಭದ ನಿಖರ ವಿವರಗಳೇನು ಎಂಬುದೂ ಸೇರಿದಂತೆ ಪ್ರಕರಣದ ವಿವಿಧ ಆಯಾಮಗಳ ಕುರಿತು ತನಿಖೆ ಮುಂದುವರಿದಿದೆ.

ಘಟನೆಯಿಂದ ಪೆರ್ಣೆ ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪುಟ್ಟ ಮಕ್ಕಳನ್ನು ಒಳಗೊಂಡ ಈ ದುರಂತ ಘಟನೆ ಸ್ಥಳೀಯರಲ್ಲಿ ತೀವ್ರ ಬೇಸರ ಮೂಡಿಸಿದೆ.

error: Content is protected !!