ಧಕ್ಕೆ ಚಟುವಟಿಕೆ ಸ್ಥಗಿತಕ್ಕೆ ಸಿಎಂ ಡಿಕೆಶಿ ಗರಂ: ಅಧಿಕಾರಿಗಳಿಗೆ ಅಮಾನತು ಎಚ್ಚರಿಕೆ

 

 

 

 

ಮಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಬೆಳಗ್ಗೆ ನಗರದ ಮೀನುಗಾರಿಕಾ ಬಂದರು (ಧಕ್ಕೆ) ಹಾಗೂ ಅಳಿವೆಬಾಗಿಲಿಗೆ ದಿಢೀರ್ ಭೇಟಿ ನೀಡಿ, ಬಂದರಿನ ಸ್ಥಿತಿಗತಿ ಹಾಗೂ ಮೀನುಗಾರರ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿದರು.

ಸಚಿವ ಯು.ಟಿ. ಖಾದರ್ ಹಾಗೂ ಅಧಿಕಾರಿಗಳೊಂದಿಗೆ ಧಕ್ಕೆಗೆ ಆಗಮಿಸಿದ ಸಿಎಂ, ಬೋಟ್‌ನಲ್ಲಿ ಸಮುದ್ರ ಹಾಗೂ ಅಳಿವೆಬಾಗಿಲಿಗೆ ತೆರಳಿ, ಇತ್ತೀಚೆಗೆ ಹೂಳು ತುಂಬಿದ ಪ್ರದೇಶದಲ್ಲಿ ಬೋಟ್ ಮುಳುಗಿದ್ದ ಸ್ಥಳವನ್ನು ವೀಕ್ಷಿಸಿದರು. ಬಳಿಕ ಜೆಟ್ಟಿ ಬಳಿ ಬಂದರು ಇಲಾಖೆಯ ಇಂಜಿನಿಯರ್‌ಗಳು ಸಿದ್ಧಪಡಿಸಿದ್ದ ನೀಲನಕ್ಷೆಯನ್ನು ಪರಿಶೀಲಿಸಿ, ಧಕ್ಕೆ ವಿಸ್ತರಣೆ ಹಾಗೂ ಜೆಟ್ಟಿ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಈ ವೇಳೆ ಮೀನು ಮಾರುಕಟ್ಟೆಗೂ ಭೇಟಿ ನೀಡಿದ ಅವರು, ಮೀನುಗಾರರು ತಂದಿದ್ದ ಬೃಹತ್ ಗಾತ್ರದ ಅಂಜಲ್ (ಸುರ್ಮೆ) ಮೀನುಗಳನ್ನು ವೀಕ್ಷಿಸಿ, ವ್ಯಾಪಾರಸ್ಥರ ಯೋಗಕ್ಷೇಮ ವಿಚಾರಿಸಿದರು. ಆದರೆ, ಮುಖ್ಯಮಂತ್ರಿಗಳ ಭೇಟಿಯ ಹಿನ್ನೆಲೆಯಲ್ಲಿ ಧಕ್ಕೆಯ ದೈನಂದಿನ ಮೀನು ಮಾರಾಟ ಮತ್ತು ವ್ಯಾಪಾರ ಚಟುವಟಿಕೆಗಳನ್ನು ಸ್ಥಗಿತಗೊಳಿಸಿರುವುದನ್ನು ಕಂಡು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

“ನಾನು ಇಲ್ಲಿನ ನೈಜ ವಹಿವಾಟು ಮತ್ತು ಜನರ ಸಮಸ್ಯೆಗಳನ್ನು ಕಣ್ಣಾರೆ ನೋಡಲು ಬಂದಿದ್ದೇನೆ. ನನ್ನ ಭೇಟಿಗಾಗಿ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸುವ ಅಗತ್ಯವಿಲ್ಲ. ನನಗೆ ಯಾವುದೇ ವಿಶೇಷ ಭದ್ರತೆ ಅಗತ್ಯವಿಲ್ಲ” ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಂದ ವರದಿ ಕೇಳಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಪಟ್ಟವರನ್ನು ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಿದರು.

ಹೂಳೆತ್ತುವಿಕೆಗೆ ಶಾಶ್ವತ ಪರಿಹಾರ

ಅಳಿವೆಬಾಗಿಲಿನಲ್ಲಿ ಹೂಳು ತುಂಬಿರುವುದರಿಂದ ಬೋಟ್ ಮುಳುಗಿರುವುದು ಕಣ್ಣೆದುರಿನ ಸಾಕ್ಷಿಯಾಗಿದೆ ಎಂದು ಹೇಳಿದ ಸಿಎಂ, ಡ್ರೆಜ್ಜಿಂಗ್ ಮೂಲಕ ತೆಗೆಯುವ ಮಣ್ಣನ್ನು ಸಮುದ್ರಕ್ಕೆ ಹಾಕಬೇಕೇ ಅಥವಾ ಬಂದರು ವಿಸ್ತರಣೆಗೆ ಬಳಸಬೇಕೇ ಎಂಬ ಬಗ್ಗೆ ಕೇಂದ್ರ ಸರ್ಕಾರದ ತಾಂತ್ರಿಕ ಸಮಿತಿಯ ಸಲಹೆ ಪಡೆಯಲಾಗುವುದು ಎಂದರು.

ಹೂಳೆತ್ತುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಡ್ರೆಜ್ಜರ್ ಯಂತ್ರವನ್ನು ಲೀಸ್‌ಗೆ ಪಡೆಯಬೇಕೇ ಅಥವಾ ಸರ್ಕಾರವೇ ಖರೀದಿಸಬೇಕೇ ಎಂಬುದನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಮೀನುಗಾರರಿಗೆ ಮೂಲಸೌಕರ್ಯ

ಮೀನುಗಾರ ಮಹಿಳೆಯರಿಗೆ ಸುಸಜ್ಜಿತ ಶೌಚಾಲಯ, ಪ್ರಾಥಮಿಕ ಆರೋಗ್ಯ ತಪಾಸಣಾ ಕೇಂದ್ರ ಹಾಗೂ ಬೋಟ್ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು. ಧಕ್ಕೆ ಸುತ್ತಮುತ್ತ ರಸ್ತೆಗಳನ್ನು ಬಂದ್ ಮಾಡಿ ಅಕ್ರಮವಾಗಿ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಂಡು, ಒತ್ತುವರಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ವಾಹನಗಳ ಸುಗಮ ಸಂಚಾರಕ್ಕೂ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಫಿಶರೀಸ್ ಕಾಲೇಜಿಗೆ ವಿಶ್ವವಿದ್ಯಾಲಯದ ಸ್ಥಾನಮಾನ

ಕರಾವಳಿಯ ಮೀನುಗಾರಿಕೆ ಕ್ಷೇತ್ರವನ್ನು ಬಲಪಡಿಸುವ ಉದ್ದೇಶದಿಂದ ಮಂಗಳೂರಿನ ಫಿಶರೀಸ್ ಕಾಲೇಜನ್ನು ವಿಶ್ವವಿದ್ಯಾಲಯವಾಗಿ ಉನ್ನತೀಕರಿಸುವ ಹಾಗೂ ವಿದ್ಯಾರ್ಥಿಗಳ ಪ್ರವೇಶ ಮಿತಿಯನ್ನು 200 ಸೀಟುಗಳಿಗೆ ಹೆಚ್ಚಿಸುವ ಕುರಿತು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ತಿಳಿಸಿದರು.

ಪ್ರವಾಸೋದ್ಯಮ ಹಾಗೂ ಬ್ಲೂ ಎಕಾನಮಿ ಕ್ಷೇತ್ರಗಳಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಲು ಹೊಸ ನೀತಿಗಳನ್ನು ರೂಪಿಸಲಾಗುತ್ತಿದ್ದು, ಕರಾವಳಿಯ ಆರ್ಥಿಕ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.

ಕಸ್ತೂರಿ ರಂಗನ್ ವರದಿ ವಿರುದ್ಧ ವಿಶೇಷ ಅಧಿವೇಶನ

ಕಸ್ತೂರಿ ರಂಗನ್ ವರದಿಯಿಂದ ಮಲೆನಾಡು ಹಾಗೂ ಕರಾವಳಿ ಭಾಗದ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದ ಶಿವಕುಮಾರ್, ಈ ಕುರಿತು ವಿಧಾನಸಭೆಯಲ್ಲಿ ವಿಶೇಷ ಅಧಿವೇಶನ ನಡೆಸಿ ವಾಸ್ತವಾಂಶಗಳನ್ನು ಮುಂದಿಡಲಾಗುವುದು ಎಂದರು. ಜನರ ಬದುಕು ಮತ್ತು ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಕಾನೂನು ಚೌಕಟ್ಟಿನೊಳಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

error: Content is protected !!