
ಬೆಳ್ತಂಗಡಿ: ತಾಲೂಕಿನಲ್ಲಿ ಶನಿವಾರ ಸುರಿದ ಭಾರೀ ಮಳೆಗೆ ಲಾಯಿಲ ಗ್ರಾಮದಲ್ಲಿ ಹರಿಯುತ್ತಿರುವ ಸೋಮವತಿ ನದಿಯಲ್ಲಿ ಬಂದ ಪ್ರವಾಹದಿಂದ ಸುಮಾರು 15 ಕ್ಕಿಂತಲೂ ಅಧಿಕ ಮನೆಗಳು ಜಲಾವೃತ್ತಗೊಂಡು , ಅಂದಾಜು 75 ಜನರನ್ನು ಬೇರೆ ಕಡೆ ಸ್ಥಳಾಂತರಿಸಲಾಗಿತ್ತು.ಭಾನುವಾರ ಸಂಜೆ ಶಾಸಕ ಹರೀಶ್ ಪೂಂಜ ಭಾರೀ ಹಾನಿಯಾದ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಅದಲ್ಲದೇ ಮಂಗಳವಾರ ಬೆಳಗ್ಗೆ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ತುರ್ತು ಸಭೆ ನಡೆಸಿ ಹಾನಿಗೊಂಡ ನಾನಾ ಭಾಗದ ವಿವರ ಹಾಗೂ ಕಾರ್ಯಚರಣೆಯ ಬಗ್ಗೆ ಮಾಹಿತಿ ಪಡೆದು ಜನರ ಸಮಸ್ಯೆಗಳಿಗೆ ತುರ್ತು ಸ್ಪಂದನೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಇದರ ಬೆನ್ನಲ್ಲೇ ಮಧ್ಯಾಹ್ನ ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ .ಹಾನಿಗೊಳಗಾದ ಲಾಯಿಲ ಗ್ರಾಮದ ಪುತ್ರಬೈಲು ಪ್ರದೇಶಕ್ಮೆ ಭೇಟಿ ಗುರಿಂಗಾನ ಸೇತುವೆ ಹಾಗೂ ಸಮೀಪದ ಕಿಂಡಿ ಅಣೆಕಟ್ಟು ವೀಕ್ಷಿಸಿ ತರಾತುರಿಯಲ್ಲಿ ಬೇರೆಡೆ ತೆರಳಿದ್ದು, ಸಂತ್ರಸ್ತರ ಅಸಾಮಾಧಾನಕ್ಕೆ ಕಾರಣವಾಗಿದೆ. ಕೇವಲ ಸೇತುವೆ ಹಾಗೂ ಕಿಂಡಿ ಅಣೆಕಟ್ಟು ವೀಕ್ಷಿಸಲು ಡಿ.ಸಿ ಮಂಗಳೂರಿನಿಂದ ಬರಬೇಕಿತ್ತೆ, ಹಲವಾರು ಮನೆಗಳಿಗೆ ನೀರು ನುಗ್ಗಿ ಆಹಾರ ಸಾಮಾಗ್ರಿ ಸಹಿತ ಇನ್ನಿತರ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿ ಸಂಕಷ್ಟದಲ್ಲಿದ್ದ ಸಂತ್ರಸ್ತರನ್ನು ಮಾತನಾಡಿಸದಿರುವುದು ಬೇಸರ ತರಿಸಿದೆ. ಮನೆಯಲ್ಲಿ ಮಲಗದ ಸ್ಥಿತಿ ನಿರ್ಮಾಣವಾಗಿದೆ. ಚಿಕ್ಕ ಮಕ್ಕಳು ಮಹಿಳೆಯರು ಸೇರಿದಂತೆ ಎಲ್ಲರೂ ಇತರರ ಮನೆಯನ್ನು ಅವಲಂಬಿಸುವ ಸ್ಥಿತಿ ನಿರ್ಮಾಣವಾಗಿದೆ. ಎಲ್ಲ ಮನೆಗೆ ಭೇಟಿ ನೀಡಬೇಕಾಗಿರಲಿಲ್ಲ ರಸ್ತೆ ಬದಿಯಲ್ಲಿದ್ದ ಮನೆ ಹಾಗೂ ಅಲ್ಲೇ ನಿಂತಿದ್ದ ಸಂತ್ರಸ್ತರನ್ಮಾದರೂ ಸೌಜನ್ಯಕ್ಕಾದರೂ ಮಾತನಾಡಿಸಬೇಕಿತ್ತು.ಪಂಚಾಯತ್ ಹಾಗೂ ಇತರರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದರೂ ಡಿ.ಸಿಯವರು ಅಲ್ಲಿ ತನಕ ಹೋಗಿರುವ ಅವರ ನಡೆ ಬೇಸರ ತರಿಸಿದೆ ಎಂದು ಸ್ಥಳೀಯರು ಮಾಧ್ಯಮದವರ ಮುಂದೆ ಹೇಳಿಕೊಂಡಿದ್ದಾರೆ. ಭೇಟಿ ವೇಳೆ ತಹಶೀಲ್ದಾರ್ ಎಸ್.ಎನ್. ನರಗುಂದ, ತಾ ಪಂ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಪಿಡಿಒ ತಾರನಾಥ್ , ಲೆಕ್ಕ ಸಹಾಯಕಿ ಸುಪ್ರಿತಾ ಎಸ್ ಶೆಟ್ಟಿ ,ಗ್ರಾಮ ಆಡಳಿತಾಧಿಕಾರಿ ರನಿತ, ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.ಲಾಯಿಲಕ್ಕೆ ಭೇಟಿ ನೀಡಿದ ನಂತರ ಜಿಲ್ಲಾಧಿಕಾರಿಗಳು ಮುಂಡಾಜೆ ಗ್ರಾಮಕ್ಕೆ ತೆರಳಿ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿ ಹಿಂತಿರುಗಿದರು.