ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮನವಿಗೆ ಮಹಾರಾಷ್ಟ್ರ ಸಿಎಂ ಸ್ಪಂದನೆ: ತಡೆ ಹಿಡಿದ ಅಡಿಕೆ ಸರಕು ಬಿಡುಗಡೆ, ಸಾಗಣೆಗೆ ಅಡ್ಡಿಯಾಗದಂತೆ ಸೂಕ್ತ ಕ್ರಮದ ಭರವಸೆ:

 

 

ಹುಬ್ಬಳ್ಳಿ: ಕರ್ನಾಟಕದ ಅಡಿಕೆ ಸರಕುಗಳ ವಾಹನಗಳನ್ನು  ಮಹಾರಾಷ್ಟ್ರದಲ್ಲಿ ತಡೆಹಿಡಿದಿದ್ದು ಇದರ ಬಿಡುಗಡೆಗಾಗಿ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಜೊತೆ ಯಶಸ್ವಿ ಮಾತುಕತೆ ನಡೆಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಹಾರಾಷ್ಟ್ರ ಸಿಎಂ ಫಡ್ನವೀಸ್, ತಮ್ಮ ರಾಜ್ಯದಲ್ಲಿ ತಡೆಹಿಡಿದಿರುವ ಕರ್ನಾಟಕದ ಅಡಿಕೆ ಸರಕನ್ನು ತಕ್ಷಣವೇ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ಅಲ್ಲದೇ, ಮುಂದಿನ ದಿನಗಳಲ್ಲೂ ಅಡಿಕೆ ಸಾಗಣೆಗೆ ಯಾವುದೇ ಅಡ್ಡಿಯಾಗದಂತೆ ಅಗತ್ಯ ಕ್ರಮ ಕೈಗೊಂಡು ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಸಹ ಹೇಳಿದ್ದಾರೆ. ಈ ಮೂಲಕ ಜೋಶಿ ಅವರು ಕರ್ನಾಟಕದ ರೈತರ ಮತ್ತು ಅಡಿಕೆ ವರ್ತಕರ ಹಾಗೂ ಪ್ರಮುಖ ಅಡಿಕೆ ಸಹಕಾರಿ ಸಂಸ್ಥೆಗಳ ಸಮಸ್ಯೆಯನ್ನು ಪರಿಹರಿಸಿದ್ದಾರೆ.

ಏನಿದು ಸಮಸ್ಯೆ?

ಅಡಿಕೆಯು ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲೊಂದಾಗಿದೆ . ರಾಜ್ಯದಿಂದ ಉತ್ತರ ಭಾರತದ ಮಾರುಕಟ್ಟೆಗಳಿಗೆ ಅಡಿಕೆ ರವಾನೆ ಆಗುತ್ತಿತ್ತು. ಆದರೆ, ಇತ್ತೀಚೆಗೆ ಮಹಾರಾಷ್ಟ್ರದ ಎಲ್ಲೆಡೆ ಕರ್ನಾಟಕದ ಅಡಿಕೆ ಸಾಗಣೆ ವಾಹನಗಳನ್ನು ತಪಾಸಣೆಗೆಂದು ದಿನಗಟ್ಟಲೇ ತಡೆಹಿಡಿಯಲಾಗುತ್ತಿತ್ತು. ಹೀಗಾಗಿ ಕರ್ನಾಟಕದ ರೈತರು ಮತ್ತು ವರ್ತಕರು, ಅಡಿಕೆ ಸಹಕಾರಿ ಸಂಸ್ಥೆಗಳಿಗೆ ತೀವ್ರ ಸಮಸ್ಯೆಯಾಗಿತ್ತು. ಅಲ್ಲದೇ, ಅಡಿಕೆ ಹಾನಿಗೊಳಗಾಗಿ ಬೆಳೆಗಾರರಿಗೆ ತೀವ್ರ ಆರ್ಥಿಕ ನಷ್ಟವೂ ಎದುರಾಗಿತ್ತು.

ಈ ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಮುಖ ಅಡಿಕೆ ಸಹಕಾರಿ ಸಂಸ್ಥೆಗಳಾದ ಕ್ಯಾಂಪ್ಕೋ (CAMPCO), ಮಾಮ್ಕೋಸ್ (MAMCOS), ತುಮ್ಕೋಸ್ (TUMCOS) ಹಾಗೂ ರಾಜ್ಯ ಅಡಿಕೆ ಸಹಕಾರಿ ಮಹಾಮಂಡಲದ ನಿಯೋಗವು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ನೇತೃತ್ವದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿ, ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿತ್ತು. ಮಹಾರಾಷ್ಟ್ರದಲ್ಲಿ ತಡೆಹಿಡಿಯಲಾಗಿರುವ ಅಡಿಕೆ ಸಾಗಣೆ ವಾಹನಗಳ ಬಿಡುಗಡೆಗೆ ಮನವಿ ಮಾಡಿತ್ತು.

 

 

 

ಹೀಗಾಗಿ ಕೇಂದ್ರ ಸಚಿವ ಜೋಶಿ ಅವರು ಮಂಗಳವಾರ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌ ಅವರನ್ನು ದೆಹಲಿಯಲ್ಲೇ ಭೇಟಿ ಮಾಡಿ, ಚರ್ಚಿಸಿದ್ದಲ್ಲದೆ, ಕರ್ನಾಟಕದ ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ರಾಜ್ಯದ ಅಡಿಕೆ ಸರಕುಳ್ಳ ವಾಹನಗಳನ್ನು ತಡೆಯದಂತೆ ಯಶಸ್ವಿ ಮಾತುಕತೆ ನಡೆಸಿದರು. ಮಹಾರಾಷ್ಟ್ರ ಸಿಎಂ ಸಮ್ಮತಿಸಿದ್ದರಿಂದ ಅವರಿಗೆ ರಾಜ್ಯದ ರೈತರ ಪರವಾಗಿ ಸಚಿವ ಪ್ರಲ್ಹಾದ ಜೋಶಿ ಧನ್ಯವಾದ ಅರ್ಪಿಸಿದ್ದಾರೆ.ನಿಯೋಗದಲ್ಲಿ  ಮಂಗಳೂರು ಹಾಗೂ ಉಡುಪಿ    ಸಂಸದರುಗಳಾದ  ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ  ಇದ್ದರು.

error: Content is protected !!