
ಬೆಳ್ತಂಗಡಿ: ತಾಲೂಕಿನ ಶಿರ್ಲಾಲಿನಲ್ಲಿ ಎಸ್ಐಆರ್ ಕರ್ತವ್ಯದಲ್ಲಿದ್ದ ಪರಿಶಿಷ್ಟ ಜಾತಿಗೆ ಸೇರಿದ ಬಿಎಲ್ಒ ಒಬ್ಬರನ್ನು ಮನೆಯೊಳಗೆ ಪ್ರವೇಶಿಸಲು ಅನುಮತಿ ನೀಡದೆ ಜಾತಿ ನಿಂದನೆ ಮಾಡಿರುವ ಆರೋಪದಲ್ಲಿ ವೇಣೂರು ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆಯೊಬ್ಬರು ಬಿಎಲ್ಒ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇವರು ಶಿರ್ಲಾಲು ಗ್ರಾಮದ ಪಲ್ಲದೋಡಿ ಕಾಳಿಕಾಂಬ ನಿವಾಸಿ ಯಶೋಧ ಆಚಾರಿ ಎಂಬವರ ಮನೆಗೆ ಎಎಲ್ಒ ಮಾಧವ ಎಂಬರೊಂದಿಗೆ ಜು.6 ರಂದು ತೆರಳಿದ್ದರು. ಆಗ ಯಶೋಧ ಆಚಾರಿಯವರು, ”ನೀನು ಅಲ್ಲಿಯೇ ನಿಲ್ಲು. ನಿಮ್ಮ ಜಾತಿಯವರು ಇಲ್ಲಿಗೆ ಬರುವುದಿಲ್ಲ” ಎಂದು ಹೇಳಿ ಮನೆಯ ಸಿಟ್‌ಔಟ್‌ಗೆ ಪ್ರವೇಶ ನಿರಾಕರಿಸಿದ್ದಾರೆ. ತಮ್ಮನ್ನು ಮೆಟ್ಟಿಲು ಬಳಿಯೇ ತಡೆದು ನಿಲ್ಲಿಸಿ ಅಪಮಾನ ಮಾಡಿ ಜಾತಿ ನಿಂದನೆ ಮಾಡಿರುವುದಾಗಿ ಬಿಎಲ್‌ಒ ಅವರು ಜು.7ರಂದು ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬಿ.ಎಲ್.ಒ ನೀಡಿರುವ ದೂರಿನ ಆಧಾರದಲ್ಲಿ ವೇಣೂರು ಪೊಲೀಸ್ ಠಾಣೆಯಲ್ಲಿ ಆರೋಪಿ ಯಶೋಧ ಆಚಾರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.