ಯಕ್ಷಗಾನ ಕಲಾವಿದ ದಿನೇಶ್ ಕೋಡಪದವು ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದನೆ: ಮಹೇಶ್ ಶೆಟ್ಟಿ ತಿಮರೋಡಿಗೆ ಷರತ್ತು ಬದ್ಧ ನಿರೀಕ್ಷಣಾ ಜಾಮೀನು:

 

 

ಬೆಂಗಳೂರು: ಯಕ್ಷಗಾನ ಕಲಾವಿದ ದಿನೇಶ್ ಕೋಡಪದವು ಅವರ ತಾಯಿಯವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಎದುರಿಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಹೈಕೋರ್ಟ್ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಬಂಧನದ ಭೀತಿಯಿಂದ ತಿಮರೋಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ಪ್ರತಿವಾರ ಪುತ್ತೂರು ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಮಾಡಬೇಕು ಎಂಬ ಕಠಿಣ ಷರತ್ತಿನೊಂದಿಗೆ ಈ ಆದೇಶ ಹೊರಡಿಸಿದೆ.

​ವಿಚಾರಣೆ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಅವರ ವರ್ತನೆ ಹಾಗೂ ಆಡಿಯೋ ತುಣುಕುಗಳ ಕುರಿತು ಕಠಿಣ ಪದಗಳಲ್ಲೇ ತರಾಟೆಗೆ ತೆಗೆದುಕೊಂಡಿತು. ಇದೇ ವೇಳೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಕುರಿತಾಗಿ ಆಡಿಯೋದಲ್ಲಿ ಆಡಲಾದ ಮಾತುಗಳನ್ನು ವಕೀಲರು ನ್ಯಾಯಪೀಠದ ಗಮನಕ್ಕೆ ತಂದಾಗ, “ನಾಯಿ ಬೊಗಳಿದರೆ ಏನೂ ಆಗುವುದಿಲ್ಲ; ಇಂತಹ ಹುಚ್ಚುನಾಯಿಯ ಮಾತುಗಳನ್ನು ಸಮಾಜವು ನಿರ್ಲಕ್ಷಿಸಬೇಕು” ಈ ರೀತಿ, ಸಾರ್ವಜನಿಕ ಸ್ವಾಸ್ಥ್ಯ ಕೆಡಿಸುವ ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡಿತು.

ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರ ವಿರುದ್ಧದ ಆರೋಪಗಳು ಗಂಭೀರವಾಗಿವೆ ಎಂದು ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ತಿರಸ್ಕರಿಸಿದೆ. ದೂರುದಾರರ ವಿರುದ್ಧ ತಿಮರೋಡಿ ಅವರು ಯಾವುದೇ ಮಾನಹಾನಿ ಅಥವಾ ಅಸಭ್ಯ ಪದ ಬಳಕೆ ಮಾಡಿಲ್ಲ. ಪ್ರಜ್ವಲ್‌ ಮತ್ತು ಸಂತ್ರಸ್ತೆಯ ಪುತ್ರ ನಟಿಸಿರುವ ನಾಟಕದ ಬಗ್ಗೆ ಮಾತನಾಡಿದ್ದಾರೆ. ವೀರೇಂದ್ರ ಹೆಗ್ಗಡೆ ಕುಟುಂಬದ ಅಕ್ರಮವನ್ನು ಅನಾವರಣ ಮಾಡಲು ಮುಂದಾಗಿರುವುದರಿಂದ ತಿಮರೋಡಿಯನ್ನು ಗುರಿಯಾಗಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಸರ್ಕಾರದ ಪರ ವಕೀಲರು, ಅರ್ಜಿದಾರರು ದೂರುದಾರರ ಬಗ್ಗೆ ಬಗ್ಗೆ ಮಾಡಿರುವ ಆರೋಪಗಳು ಗಂಭೀರವಾಗಿದ್ದು, ಆಕೆಯ ಘನತೆಗೆ ಚ್ಯುತಿ ಉಂಟು ಮಾಡಲಾಗಿದೆ. ಇದು ಕೋಮು ದ್ವೇಷಕ್ಕೂ ಪ್ರಚೋದನೆ ನೀಡಿದೆ. ತಿಮರೋಡಿಯನ್ನು ಕಸ್ಟಡಿಗೆ ಪಡೆದು ತನಿಖೆ ನಡೆಸಬೇಕಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಮುನ್ನ ದೂರುದಾರರನ್ನು ಪ್ರತಿನಿಧಿಸುವುದಾಗಿ ಹಾಜರಾಗಿದ್ದ ವಕೀಲರು, ತಿಮರೋಡಿಗೆ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುವುದು ಹವ್ಯಾಸವಾಗಿದೆ. ನ್ಯಾಯಮೂರ್ತಿಗಳ ವಿರುದ್ಧವೇ ಆರೋಪ ಮಾಡಿದ್ದಾರೆ. ಅದಕ್ಕೆ ಬೇಷರತ್‌ ಕ್ಷಮೆಯನ್ನೂ ಕೋರಿದ್ದಾರೆ ಎಂದು ಪೀಠಕ್ಕೆ ವಿವರಿಸಿದರು.
ಇದಕ್ಕೆ ಪೀಠ, ಹರಕಲು ಬಾಯಿ ಅಂತ ಇರುತ್ತೆ ಏನು ಮಾಡಲಾಗುತ್ತದೆ? ನಾಯಿ ಬೊಗಳಿದರೆ ಏನಾಗುತ್ತದೆ? ನಾಯಿ ಬೊಗಳಿದರೆ ಬೊಗಳುತ್ತದೆ ಅಷ್ಟೆ. ಅದು ಪದೇ ಪದೇ ಬೊಗಳಿದರೆ ಹುಚ್ಚು ನಾಯಿ ಎಂದು ಪರಿಗಣಿಸಿ, ಮುಂದೆ ಹೋಗಬೇಕು. ಅಲ್ಲದೇ, ತಿಮರೋಡಿ ಏನು ಮಾಡುತ್ತಾರೆ ನಮಗೆ ಬೇಕಿಲ್ಲ. ಮೂರು ವರ್ಷ ಶಿಕ್ಷೆಯಾಗುವ ಅಪರಾಧ ಪ್ರಕರಣ ಇದಾಗಿದೆ. ಅವರಿಗೆ ನಿರೀಕ್ಷಣಾ ಜಾಮೀನು ನೀಡಬಹುದಾಗಿದೆ. ನಿಮ್ಮ ವಾದವನ್ನು ಏಕೆ ಆಲಿಸಬೇಕು? ನಿಮ್ಮ ಅರ್ಜಿಯನ್ನು ಸ್ವೀಕರಿಸಿಲ್ಲ ಎಂದು ತಿರಸ್ಕರಿಸಿತು.

 

error: Content is protected !!