ವಾಹನ ಸವಾರರಿಗೆ ಮತ್ತೆ ಶಾಕ್ ಪೆಟ್ರೋಲ್ ,ಡಿಸೇಲ್ ಬೆಲೆ ತುಟ್ಟಿ ಎರಡೇ ವಾರದಲ್ಲಿ ₹ 7.5 ರೂಪಾಯಿಯಷ್ಟು ಹೆಚ್ಚಳ:

 

ಬೆಂಗಳೂರು: ಪೆಟ್ರೋಲ್ ಡಿಸೇಲ್ ಬೆಲೆ ಮತ್ತೆ ತುಟ್ಟಿಯಾಗಿದೆ. ಇಂದಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕ್ರಮವಾಗಿ 2.61 ರೂ ಮತ್ತು 2.71 ರೂ.ಗಳಷ್ಟು ಹೆಚ್ಚಿಸಲಾಗಿದೆ. ಈ ಮೂಲಕ ಎರಡೇ ವಾರದಲ್ಲಿ ಇಂಧನ ಬೆಲೆಗಳು ಲೀಟರ್‌ಗೆ 7.5 ರೂಪಾಯಿಯಷ್ಟು ತುಟ್ಟಿಯಾಗಿವೆ.

ಸರ್ಕಾರಿ ಸ್ವಾಮ್ಯದ ತೈಲ ಪೂರೈಕೆ ಕಂಪನಿಗಳು ತಮ್ಮ ನಷ್ಟ ಸರಿದೂಗಿಸಲು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಾದ ಬೆಲೆ ಏರಿಕೆಯನ್ನು ಗ್ರಾಹಕರಿಗೆ ವರ್ಗಾಯಿಸುತ್ತಿವೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಮುಂತಾದ ಸರ್ಕಾರಿ ಸ್ವಾಮ್ಯದ ಕಂಪನಿಗಳು ದೇಶದಲ್ಲಿ ಇಂಧನ ಮಾರುಕಟ್ಟೆಯ ಶೇ.90ರಷ್ಟು ನಿಯಂತ್ರಣ ಹೊಂದಿವೆ.

ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ದಾಳಿ ನಡೆಸಿದ ನಂತರದಲ್ಲಿ ನಿರ್ಣಾಯಕ ಜಾಗತಿಕ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಇಂಧನ ಸಾಗಾಟಕ್ಕೆ ಇರಾನ್ ತೀವ್ರ ಅಡ್ಡಿ ಉಂಟುಮಾಡುತ್ತಿದೆ. ಇದು ಮುಖ್ಯ ಕಾರಣ.

ಇದರ ಫಲವಾಗಿ, ಫೆಬ್ರವರಿ ಕೊನೆಯ ವೇಳೆಯಿಂದ ಜಾಗತಿಕ ಕಚ್ಚಾ ತೈಲ ಬೆಲೆಗಳು ಶೇ.50ಕ್ಕಿಂತಲೂ ಹೆಚ್ಚು ಏರಿಕೆಯಾಗಿವೆ. ಇದರ ಜೊತೆಗೆ, ಡಾಲರ್ ಎದುರು ರೂಪಾಯಿ ದುರ್ಬಲಗೊಳ್ಳುತ್ತಿದೆ. ಈ ಎಲ್ಲದರ ಪರಿಣಾಮವಾಗಿ ಇಂಧನ ಬೆಲೆಗಳು ಹೆಚ್ಚಾಗುತ್ತಿವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

error: Content is protected !!