ಬೆದರಿಕೆ ಪ್ರಕರಣ, ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬಲವಂತದ ಕ್ರಮ ಬೇಡ: ಪುತ್ತೂರು ಗ್ರಾಮೀಣ ಠಾಣಾ ಪೊಲೀಸರಿಗೆ ಹೈಕೋರ್ಟ್ ನಿರ್ದೆಶನ:ವಿಚಾರಣೆ ಜೂ 08 ಕ್ಕೆ ಮುಂದೂಡಿಕೆ:

 

 

ಬೆಂಗಳೂರು: ವ್ಯಕ್ತಿಯೊಬ್ಬರಿಗೆ ತಮ್ಮ ಬೆಂಬಲಿಗರು ಜೀವ ಬೆದರಿಕೆ ಹಾಕಿದ ಮತ್ತು ಸುಳ್ಳು ಸಾಕ್ಷ್ಯ ನೀಡುವಂತೆ ಒತ್ತಾಯಿಸಿದ ಆರೋಪದ ಮೇಲೆ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಜೂನ್ 8ರವರೆಗೆ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಪುತ್ತೂರು ಗ್ರಾಮೀಣ ಠಾಣಾ ಪೊಲೀಸರಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಪ್ರಕರಣ ಸಂಬಂಧ ಪುತ್ತೂರು ಗ್ರಾಮೀಣ ಠಾಣಾ ಪೊಲೀಸರು ದಾಖಲಿಸಿರುವ ಎಫ್​ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್​ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರ ಪೀಠ ಇತ್ತೀಚೆಗೆ ಈ ಮಧ್ಯಂತರ ಆದೇಶ ನೀಡಿದೆ.

ವಿಚಾರಣೆ ವೇಳೆ ತಿಮರೋಡಿ ಪರ ವಕೀಲರು, ಪ್ರಕರಣಕ್ಕೂ ಅರ್ಜಿದಾರರಿಗೆ ಯಾವುದೇ ಸಂಬಂಧವಿಲ್ಲ. ಕೇವಲ ಅರ್ಜಿದಾರರಿಗೆ ಕಿರುಕುಳ ನೀಡಲು ಈ ದೂರು ದಾಖಲಿಸಲಾಗಿದೆ ಎಂದು ತಿಳಿಸಿದರು.

ದೂರುದಾರ ಸುಂದರ ರೈ ಮಂದಾರ ಅವರ ಪರ ವಕೀಲರು, ದೂರುದಾರರಿಗೆ ಸತೀಶ್ ಕುಮಾರ್ ರೈ ಅವರು ಕರೆ ಮಾಡಿ ಬೆದರಿಕೆ ಹಾಕಿರುವ ಸಂಬಂಧ ಅವರ ಫೋನ್ ಸಂಭಾಷಣೆಯ ಟ್ರಾನ್ಸ್ ಕ್ರಿಪ್ಷನ್ ಸಲ್ಲಿಸಲು ಕಾಲಾವಕಾಶ ನೀಡುವಂತೆ ಕೋರಿದರು.

ಅದಕ್ಕೆ ಅನುಮತಿಸಿದ ಹೈಕೋರ್ಟ್, ಅರ್ಜಿಯ ಮುಂದಿನ ವಿಚಾರಣೆವರೆಗೆ ತಿಮರೋಡಿ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಪುತ್ತೂರು ಠಾಣಾ ಪೊಲೀಸರಿಗೆ ಸೂಚಿಸಿ ವಿಚಾರಣೆಯನ್ನು ಜೂನ್ 8ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ:

ಸುಂದರ ರೈ ಮಂದಾರ ಅವರು ಮೇ 7ರಂದು ಪುತ್ತೂರು ಗ್ರಾಮೀಣ ಠಾಣಾ ಪೊಲೀಸರಿಗೆ ದೂರು ನೀಡಿ ತಾನು ಏಪ್ರಿಲ್​ 15ರಂದು ಮಹೇಶ್ ಶೆಟ್ಟಿ ತಿಮರೋಡಿ ಅವರ ವಿರುದ್ಧ ದೂರು ದಾಖಲಿಸಿದ್ದೆ. ಸತೀಶ್ ಕುಮಾರ್ ರೈ ಪಡುಮಲೆ ಎಂಬವರು ನನಗೆ ಕರೆ ಮಾಡಿ ತಿಮರೋಡಿ ಅವರ ವಿರುದ್ಧ ದೂರು ದಾಖಲಿಸಿದ ವಿಚಾರ ಸಂಬಂಧ ಮಾತನಾಡಿದರು. ತಿಮರೋಡಿ ಅವರನ್ನು ಸಮರ್ಥಿಸಿಕೊಂಡು, ನನಗೆ ಅವಮಾನವಾಗುವಂತೆ ಮಾತನಾಡಿದರು. ನನಗೆ ಹೆದರಿಸಿ, ಬೆದರಿಸಿದರು. ನನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಬರೆದು ಪ್ರಸಾರ ಮಾಡಿದ್ದಾರೆ. ಕುಡ್ಲ ರಾಂಪೇಜ್ ಫೆಯೋನಿಕ್ಸ್ ಭುಜ್ ಮತ್ತು ಪ್ರಸನ್ನ ರವಿ ಅವರು ಇದೇ ರೀತಿ ಪ್ರಯತ್ನ ಮಾಡಿರುತ್ತಾರೆ. ತಿಮರೋಡಿ ಅನುಯಾಯಿಗಳು ನನ್ನ ಮತ್ತು ನನ್ನ ಪತ್ನಿ ಬಗ್ಗೆ ಕೆಟ್ಟ ಹಾಗೂ ಅಶ್ಲೀಲವಾಗಿ ಯಕ್ಷಗಾನ ಹಾಡು ಬರೆದು ಪ್ರಸಾರ ಮಾಡಿರುತ್ತಾರೆ. ಈ ಎಲ್ಲಾ ವ್ಯಕ್ತಿಗಳು ತಿಮರೋಡಿ ವಿರುದ್ಧ ದೂರು ದಾಖಲಿಸಿದ ಏಕೈಕ ಕಾರಣಕ್ಕೆ ಕೆಟ್ಟದಾಗಿ ಮಾತನಾಡಿ ಅವಮಾನಿಸಿ ಮಾನಸಿಕ ಹಿಂಸೆ ನೀಡಿದ್ದಾರೆ. ತಿಮರೋಡಿ ಅವರ ವಿರುದ್ಧ ದಾಖಲಿಸಿರುವ ದೂರು ಹಿಂಪಡೆಯುವಂತೆ ಮತ್ತು ಅವರ ಪರ ಸುಳ್ಳು ಸಾಕ್ಷ್ಯ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದರು.

ಈ ದೂರಿನ ಆಧಾರದಲ್ಲಿ ಪುತ್ತೂರು ಗ್ರಾಮೀಣ ಠಾಣಾ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿ ಮತ್ತಿತರರ ವಿರುದ್ಧ ಬಿಎನ್​ಎಸ್ ಸೆಕ್ಷನ್ 351(2) ಅಡಿಯಲ್ಲಿ ಜೀವ ಬೆದರಿಕೆ ಹಾಕಿದ ಮತ್ತು ಸೆಕ್ಷನ್ 232 ಅಡಿಯಲ್ಲಿ ಬೆದರಿಕೆ ಹಾಕಿ ವ್ಯಕ್ತಿಯ ಘನತೆಗೆ ಹಾನಿ ಉಂಟು ಮಾಡಿದ ಮತ್ತು ಸುಳ್ಳು ಸಾಕ್ಷ್ಯ ನೀಡಲು ಒತ್ತಾಯಿಸಿದ ಆರೋಪದ ಮೇಲೆ ಎಫ್​ಐಆರ್ ದಾಖಲಿಸಿದ್ದರು.

ಪ್ರಕರಣದಲ್ಲಿ ಮೊದಲನೇ ಆರೋಪಿಯಾದ ಮಹೇಶ್ ಶೆಟ್ಟಿ ತಿಮರೋಡಿ ಅವರು ಎಫ್​ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ಅಧೀನ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದು ಕೋರಿ ಹೈಕೋರ್ಟ್​​ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ.

error: Content is protected !!