
ಹುಬ್ಬಳ್ಳಿ: ಸಂಚರಿಸುತಿದ್ದ ಸರ್ಕಾರಿ ಬಸ್ನ ಕಿಟಕಿಯಿಂದ ತಲೆ ಹೊರಹಾಕಿ ಉಗುಳುತ್ತಿರುವ ವೇಳೆ ಲಾರಿ ಬಡಿದು ಪ್ರಯಾಣಿಕನೊಬ್ಬನ ರುಂಡ ಬೇರ್ಪಟ್ಟ ಘಟನೆ ಕುಂದಗೋಳ ಪಟ್ಟಣದ ಹುಬ್ಬಳ್ಳಿ – ಲಕ್ಷ್ಮೇಶ್ವರ ಮುಖ್ಯ ರಸ್ತೆಯ ಕೊಪ್ಪದ ಕೆರೆಯ ಬಳಿ ಬುಧವಾರ ಸಂಜೆ ಸಂಭವಿಸಿದೆ.
ಫಕ್ಕೀರೇಶ ಚನ್ನಯ್ಯ ಮುತ್ತಳ್ಳಿಮಠ (17) ಎಂಬಾತನೇ ದುರ್ಘಟನೆಯಲ್ಲಿ ಮೃತಪಟ್ಟ ಬಾಲಕ. ಶಿರೂರ ಗ್ರಾಮದ ನಿವಾಸಿಯಾಗಿದ್ದ ಈತ ಐಟಿಐ ವಿದ್ಯಾರ್ಥಿಯಾಗಿದ್ದ.
ಬುಧವಾರ ಸಂಜೆ ಸುಮಾರು 5 ಗಂಟೆಯ ವೇಳೆಗೆ ಲಕ್ಷ್ಮೇಶ್ವರ ಡಿಪೋಗೆ ಸೇರಿದ ಕೆಎ 26 ಎಫ್ 1039 ನಂಬರಿನ ಸಾರಿಗೆ ಬಸ್ನಲ್ಲಿ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಎಂ – ಸ್ಯಾಂಡ್ ತುಂಬಿಕೊಂಡು ಹೋಗುತ್ತಿದ್ದ ಕೆಎ 04 ಎಡಿ 7218 ನಂಬರಿನ ಲಾರಿಯು ಓವರ್ ಟೆಕ್ ಮಾಡುತ್ತಿದ್ದ ಸಂದರ್ಭದಲ್ಲೇ ಫಕ್ಕೀರೇಶ ತಲೆ ಹೊರಗೆ ಹಾಕಿ ಉಗುಳುತ್ತಿದ್ದ ವೇಳೆ ಲಾರಿ ಅವನ ತಲೆಗೆ ತಾಗಿದೆ. ಡಿಕ್ಕಿಯ ರಭಸಕ್ಕೆ ಬಸ್ನ ಕಿಟಕಿಯಿಂದ ಹೊರಗಿದ್ದ ವಿದ್ಯಾರ್ಥಿ ಫಕ್ಕೀರೇಶನ ತಲೆ (ರುಂಡ) ಕತ್ತರಿಸಿ ರಸ್ತೆಗೆ ಬಿದ್ದಿದ್ದು, ಆತ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದಾನೆ.
ಅಪಘಾತ ನಡೆದ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು ಈ ದಾರುಣ ದೃಶ್ಯವನ್ನು ಕಂಡು ಕಂಬನಿ ಮಿಡಿದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕುಂದಗೋಳ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.