ಭಾರೀ ಮಳೆ ನಿರೀಕ್ಷೆ,ನಾಳೆಯೂ ಶಾಲೆಗೆ ರಜೆ ಘೋಷಣೆ:

 

ಬೆಳ್ತಂಗಡಿ:: ಕರಾವಳಿಯಲ್ಲಿ ನಾಳೆಯೂ ಭಾರೀ ಮಳೆಯ ನಿರೀಕ್ಷೆಯಿದ್ದು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಜುಲೈ 03 ಶುಕ್ರವಾರದಂದು ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

 

ಜಿಲ್ಲೆಯಲ್ಲಿ ಸದ್ಯ ‘ಆರೆಂಜ್ ಅಲರ್ಟ್’ ಘೋಷಣೆಯಾಗಿದ್ದರೂ, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ಮಹತ್ವದ ತೀರ್ಮಾನ ಕೈಗೊಂಡಿದೆ. ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಆದೇಶದಂತೆ ಯಾವುದೇ ತರಗತಿಗಳನ್ನು ನಡೆಸದಂತೆ ಸೂಚಿಸಲಾಗಿದೆ.

ಯಾವುದಕ್ಕೆಲ್ಲಾ ರಜೆ?

* ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು
* ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು
* ವಸತಿ ಶಾಲೆಗಳು
* ಪದವಿ ಪೂರ್ವ ಮತ್ತು ಪದವಿ ಪೂರ್ವ ವಸತಿ ಕಾಲೇಜುಗಳು (12ನೇ ತರಗತಿಯವರೆಗೆ)

ಕಟ್ಟುನಿಟ್ಟಿನ ಎಚ್ಚರಿಕೆ : ಜಿಲ್ಲಾಧಿಕಾರಿಗಳ ಈ ರಜೆ ಆದೇಶವನ್ನು ಉಲ್ಲಂಘಿಸಿ ತರಗತಿಗಳನ್ನು ನಡೆಸಿದಲ್ಲಿ, ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 51(ಬಿ)ರ ಅನ್ವಯ ನಿಯಮಾನುಸಾರ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಸಾರ್ವಜನಿಕರು ಹಾಗೂ ಪಾಲಕರಿಗೆ ಜಿಲ್ಲಾಡಳಿತದ ತುರ್ತು ಸೂಚನೆಗಳು:

1. ಮಕ್ಕಳ ಬಗ್ಗೆ ಜಾಗ್ರತೆ ಇರಲಿ : ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿತೀರ ಹಾಗೂ ಸಮುದ್ರತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಕಡ್ಡಾಯವಾಗಿ ನಿಗಾ ವಹಿಸಬೇಕು.

2. ಕಡಲಿಗಿಳಿಯದಂತೆ ಕಟು ಆಜ್ಞೆ : ಮೀನುಗಾರರು ಯಾವುದೇ ಕಾರಣಕ್ಕೂ ಈ ಅವಧಿಯಲ್ಲಿ ಸಮುದ್ರಕ್ಕೆ ಇಳಿಯಬಾರದು.

3. ಪ್ರವಾಸಿಗರಿಗೆ ನಿರ್ಬಂಧ : ಸಾರ್ವಜನಿಕರು ಹಾಗೂ ಪ್ರವಾಸಿಗರು ನದಿತೀರ ಮತ್ತು ಸಮುದ್ರತೀರಕ್ಕೆ ತೆರಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

4. ಅಧಿಕಾರಿಗಳು ಸನ್ನದ್ಧ : ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಪತ್ತು ನಿರ್ವಹಣಾ ಕಾರ್ಯವನ್ನು ಚಾಚೂ ತಪ್ಪದೆ ನಿರ್ವಹಿಸಬೇಕು. ತುರ್ತು ಪರಿಸ್ಥಿತಿಗಾಗಿ ಎಲ್ಲಾ ತಾಲೂಕುಗಳಲ್ಲಿ ಕಾಳಜಿ ಕೇಂದ್ರಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲು ಸೂಚಿಸಲಾಗಿದೆ.

ಹವಾಮಾನ ಕೇಂದ್ರದ ಸೂಚನೆ ಪ್ರಕಾರ ಜುಲೈ 1 ರಿಂದ 3ರ ಬೆಳಗ್ಗೆ (48 ಗಂಟೆಗಳು) ಜಿಲ್ಲೆಗೆ ಸತತ ರೆಡ್ ಅಲರ್ಟ್ ಇರಲಿದ್ದು, ಹಲವು ಕಡೆಗಳಲ್ಲಿ 204.5 mm ಗಿಂತಲೂ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಈ ವೇಳೆ, ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ತೀವ್ರ ಸಿಡಿಲು ಮುನ್ನೆಚ್ಚರಿಕೆ ನೀಡಲಾಗಿದೆ.

 

error: Content is protected !!